ಬೀದರ: ಬೆಂಗಳೂರಿನ ಅಟೊಮಿಕ್ ಅಕಾಡೆಮಿ ಸಂಯೋಜಿತ ಇಲ್ಲಿನ ಶ್ರೀ ಮಾತೆ ಮಾಣಿಕೇಶ್ವರಿ ಪಿಯು ವಿಜ್ಞಾನ ಕಾಲೇಜು ಪ್ರಸಕ್ತ ವರ್ಷದ ನೀಟ್ ಪರೀಕ್ಷೆಯಲ್ಲಿ
ಕಲ್ಯಾಣ ಕರ್ನಾಟಕಕ್ಕೆ ಟಾಪರ್ ಆಗಿ ಹೊರಹೊಮ್ಮಿದ ಕಾಲೇಜು ವಿದ್ಯಾರ್ಥಿ ಸಾಯಿಕಿರಣ ರಮೇಶ ಕುಲಕರ್ಣಿಗೆ 1 ಲಕ್ಷ ರೂ. ನಗದು ಬಹುಮಾನ ನೀಡಿದೆ.
ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳು ಸಾಯಿಕಿರಣ ಅವರಿಗೆ ಸನ್ಮಾನಿಸಿ, ಚೆಕ್ ನೀಡಿ ಗೌರವಿಸಿದರು. ರಾಮಕೃಷ್ಣ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರತಿಭೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಸತತ ಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸಬಹುದು ಎಂದರು.
ಡಿಡಿಪಿಯು ಎಂ. ಆಂಜನೇಯ ಮಾತನಾಡಿ, ಪಿಯುಸಿ ಶಿಕ್ಷಣ ವಿದ್ಯಾರ್ಥಿ ಜೀವನದ ನಿರ್ಣಾಯಕ ಹಂತ. ಎರಡು ವರ್ಷ ಏಕಾಗ್ರತೆಯಿಂದ ವ್ಯಾಸಂಗದಲ್ಲಿ ತೊಡಗಿಸಿಕೊಂಡಲ್ಲಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಬಹುದು. ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು. ಅಟೊಮಿಕ್ ಅಕಾಡೆಮಿ ನಿರ್ದೇಶಕ ಪ್ರೊ| ಶ್ರೀಧರ ಎಸ್. ಮಾತನಾಡಿ, ಅಕಾಡೆಮಿ ಶ್ರೀ ಮಾತೆ ಮಾಣಿಕೇಶ್ವರಿ ಕಾಲೇಜಿನೊಂದಿಗೆ ಒಡಂಬಡಿಕೆ ಮಾಡಿಕೊಂಡು ಜಿಲ್ಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ. ಈ ಬಾರಿಯ ನೀಟ್ ಫಲಿತಾಂಶ ಇದಕ್ಕೆ ನಿದರ್ಶನ. ಸಾಯಿಕಿರಣ ಕುಲಕರ್ಣಿ ನೀಟ್‌ನಲ್ಲಿ 720ರ ಪೈಕಿ 685 ಅಂಕ ಪಡೆದು ಕ.ಕ ಭಾಗಕ್ಕೆ ಟಾಪರ್ ಆಗಿದ್ದಾನೆ ಎಂದರು.
ಕಾಲೇಜು ಅಧ್ಯಕ್ಷ ರಮೇಶ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜು 13 ವರ್ಷಗಳಿಂದ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದೆ ಎಂದರು. ಗುದಗೆ
ಆಸ್ಪತ್ರೆಯ ಡಾ| ಸಚಿನ್ ಗುದಗೆ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಅಕಾಡೆಮಿ ನಿರ್ದೇಶಕರಾದ ಎನ್.ವಿ. ಮಾನೆ, ರಘುನಂದ ಎಸ್., ಆರತಿ ಆರ್. ಕುಲಕರ್ಣಿ, ಸುರೇಶ ಕುಲಕರ್ಣಿ, ವೈಶಾಲಿ ಎಸ್. ಕುಲಕರ್ಣಿ ಇದ್ದರು. ಪ್ರಾಚಾರ್ಯ ಲೋಕೇಶ ಉಡಬಾಳೆ ಸ್ವಾಗತಿಸಿದರು. ಚನ್ನಬಸವ ಬಿರಾದಾರ ನಿರೂಪಿಸಿದರು. ಗುಂಡಪ್ಪ ಕುಂಬಾರ ವಂದಿಸಿದರು.