ನವದೆಹಲಿ : ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಡೆಯುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET PG 2021) ಅನ್ನು ಮುಂದೂಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ತಿಳಿಸಿದ್ದಾರೆ.
ಇಂದು ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಯುವ ವೈದ್ಯಕೀಯ ವಿದ್ಯಾರ್ಥಿಗಳ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ಏಪ್ರಿಲ್ 18ರಂದು NEET PG ಪರೀಕ್ಷೆಗಳನ್ನು ನಿಗದಿಸಲಾಗಿತ್ತು. ಈಗ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ನಿರ್ಧರಿಸಿ ತಿಳಿಸಲಾಗುವುದು ಎಂದಿದ್ದಾರೆ.
ದೇಶದಲ್ಲಿ ಕೋವಿಡ್ ಎರಡನೇ ಅಲೆ ದಟ್ಟವಾಗಿರುವ ಹಿನ್ನೆಲೆ ಬುಧವಾರವಷ್ಟೇ ಸಿಬಿಎಸ್‍ಇ 10 ನೇ ತರಗತಿಯ ಪರೀಕ್ಷೆ ರದ್ದು ಹಾಗೂ 12 ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೆ ಇದೀಗ NEET ಪರೀಕ್ಷೆಯನ್ನು ಮುಂದೂಡಿದೆ.
ಇನ್ನು ಆತಂಕ ಮೂಡಿಸಿರುವ ಕೋವಿಡ್ ಹಿನ್ನೆಲೆ ಇಂದು ಪಂಜಾಬ್ ಹಾಗೂ ಹರಿಯಾಣ ಸರ್ಕಾರಗಳು 10ನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಿವೆ. ಆಂತರಿಕ ಮೌಲ್ಯಮಾಪನದ ಮೂಲಕ ಈ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುವುದು ಎಂದು ಸರ್ಕಾರಗಳು ತಿಳಿಸಿವೆ.