Advertisement

NEET, NET ಅಕ್ರಮ: ಬೀದಿಗಿಳಿದ ಕಾಂಗ್ರೆಸ್‌

01:28 AM Jun 22, 2024 | Team Udayavani |

ಹೊಸದಿಲ್ಲಿ: ನೀಟ್‌, ನೆಟ್‌ ಪರೀಕ್ಷಾ ಅಕ್ರಮ ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ಬೀದಿಗಿಳಿದಿರುವ ಕಾಂಗ್ರೆಸ್‌, ಶುಕ್ರವಾರ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆಸಿದೆ.

Advertisement

ಅಕ್ರಮ ಕುರಿತು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು ಎಂದು ಆಗ್ರಹಿಸಿ ದಿಲ್ಲಿ, ರಾಜಸ್ಥಾನ, ಪಂಜಾಬ್‌, ಅಸ್ಸಾಂ, ಮಧ್ಯಪ್ರದೇಶ, ನಾಗಾಲ್ಯಾಂಡ್‌, ಝಾರ್ಖಂಡ್‌, ಉತ್ತರಪ್ರದೇಶ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ದಿಲ್ಲಿಯಲ್ಲಿ ಬಿಜೆಪಿ ಪ್ರಧಾನ ಕಚೇರಿಯ ಮುಂಭಾಗದಲ್ಲೇ ಪ್ರತಿಭಟನೆ ನಡೆದಿದೆ.

ಬಿಜೆಪಿ-ಆರ್‌ಜೆಡಿ ವಾಕ್ಸಮರ: ಪೇಪರ್‌ ಲೀಕ್‌ ಪ್ರಕರಣ ಸಂಬಂಧ ಬಿಹಾರದಲ್ಲಿ ಬಿಜೆಪಿ- ಆರ್‌ಜೆಡಿ ಕೆಸರೆರಚಾಟ ಮುಂದುವರಿದಿದೆ. ಪ್ರಕರಣದ ಆರೋಪಿಯು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರಿಗೆ ಸಂಬಂಧಿಸಿದ ಅಧಿಕಾರಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ಎಂದು ಗುರುವಾರ ಬಿಜೆಪಿ ಆರೋಪಿಸಿತ್ತು. ಶುಕ್ರವಾರ ಅದಕ್ಕೆ ತಿರುಗೇಟು ನೀಡಿರುವ ಆರ್‌ಜೆಡಿ, ಪ್ರಕರಣ ಆರೋಪಿಯು ಡಿಸಿಎಂ ವಿಜಯ್‌ ಕುಮಾರ್‌ ಸಿನ್ಹಾರನ್ನು ಸಮ್ಮಾನಿಸುತ್ತಿರುವ ಫೋಟೋ ಬಿಡುಗಡೆ ಮಾಡಿದೆಯಲ್ಲದೆ ಈ ಪ್ರಕರಣದಲ್ಲಿ ಡಿಸಿಎಂ ಅವರೇ ಪ್ರಮುಖ ಆರೋಪಿ ಎಂದು ಆರೋಪಿಸಿದೆ.

”ದೇಶಾದ್ಯಂತ ಕಳೆದ 5 ವರ್ಷಗಳಲ್ಲಿ ಬರೋಬ್ಬರಿ 43 ನೇಮಕಾತಿ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಬಿಜೆಪಿ ಆಡಳಿತದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯೆಂಬುದು ದೇಶದ ರಾಷ್ಟ್ರೀಯ ಸಮಸ್ಯೆಯಾಗಿ ಬದಲಾಗಿದೆ. ಸರಕಾರವು ಈವರೆಗೆ ಕೋಟ್ಯಂತರ ಯುವಕರ ಭವಿಷ್ಯವನ್ನು ಹಾಳು ಮಾಡಿದೆ”
-ಪ್ರಿಯಾಂಕಾ ವಾದ್ರಾ, ಕಾಂಗ್ರೆಸ್‌ ನಾಯಕಿ

ನೀಟ್‌ ಕೌನ್ಸೆಲಿಂಗ್‌ಗೆ ತಡೆಯಾಜ್ಞೆ ನೀಡಲು ಸುಪ್ರೀಂ ನಕಾರ
ಅಕ್ರಮ ಹಿನ್ನೆಲೆಯಲ್ಲಿ ನೀಟ್‌ ಕೌನ್ಸೆಲಿಂಗ್‌ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಬೇಕು ಎಂಬ ಕೋರಿಕೆಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತಳ್ಳಿಹಾಕಿದೆ. ಕೌನ್ಸೆಲಿಂಗ್‌ ಆರಂಭಿಸಿ, ನಿಲ್ಲಿಸುವ ಪ್ರಕ್ರಿಯೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಸಿಎಸ್‌ಐಆರ್‌-ಯುಜಿಸಿ-ನೆಟ್‌ ಪರೀಕ್ಷೆ ಮುಂದೂಡಿಕೆ: ಎನ್‌ಟಿಎ ಜೂ.25ರಿಂದ ಜೂ.27ರ ವರೆಗೆ ನಡೆಸಲುದ್ದೇಶಿಸಿದ್ದ ಸಿಎಸ್‌ಐಆರ್‌-ಯುಜಿಸಿ-ನೆಟ್‌ ಪರೀಕ್ಷೆಯನ್ನು ಮುಂದೂಡಿದೆ.

Advertisement

ಮರುಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ: 6 ಕೇಂದ್ರ ಬದಲು
ಕೃಪಾಂಕ ಪಡೆದ 1,563 ವಿದ್ಯಾರ್ಥಿಗಳಿಗಾಗಿ ನೀಟ್‌-ಯುಜಿ ಮರುಪರೀಕ್ಷೆ ರವಿವಾರ ನಡೆಯಲಿದ್ದು, ಅಡ್ಮಿಟ್‌ ಕಾರ್ಡ್‌ಗಳನ್ನು ಶುಕ್ರವಾರವೇ ಬಿಡುಗಡೆ ಮಾಡಲಾಗಿದೆ. ಜತೆಗೆ ಈ ಅಭ್ಯರ್ಥಿಗಳು ಕಳೆದ ಬಾರಿ ಬರೆದಿದ್ದ ಪರೀಕ್ಷಾ ಕೇಂದ್ರಗಳನ್ನು ಬದಲಿಸಿ, 6 ಹೊಸ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಎನ್‌ಟಿಎ ಹೇಳಿದೆ. ಮೇಘಾಲಯ, ಹರಿಯಾಣ, ಛತ್ತೀಸ್‌ಗಢ, ಗುಜರಾತ್‌, ಚಂಡೀಗಢದಲ್ಲಿ ಕಳೆದ ಬಾರಿ ಪರೀಕ್ಷೆ ನಡೆಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next