Advertisement

ನೀಟ್ ಪರೀಕ್ಷೆ: ಪ್ರಥಮ ರ್ಯಾಂಕ್ ಗಳಿಸಿದ ರನ್ನಬೆಳಗಲಿಯ ಚಿದಾನಂದ ಕಲ್ಲಪ್ಪ

10:47 AM Feb 02, 2022 | Team Udayavani |

ಮಹಾಲಿಂಗಪುರ: ಸಮೀಪದ ರನ್ನಬೆಳಗಲಿ ಪಟ್ಟಣದ ಡಾ. ಚಿದಾನಂದ ಕಲ್ಲಪ್ಪ ಕುಂಬಾರ ಅವರು ಮೆಡಿಕಲ್ ವಿಭಾಗದ ನೀಟ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದುಕೊಂಡು ರನ್ನಬೆಳಗಲಿ ಪಟ್ಟಣದ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಬೆಳಗಿಸಿದ್ದಾರೆ.

Advertisement

ಚಿದಾನಂದ ಅವರು ರನ್ನಬೆಳಗಲಿ ಬಡಕುಟುಂಬದ ಕಲ್ಲಪ್ಪ ಮತ್ತು ಕಸ್ತೂರಿ ಕುಂಬಾರ ದಂಪತಿಗಳ ಎರಡನೇ ಮಗನಾಗಿ ಜನಿಸಿದರು. ಚಿಕ್ಕವಯಸ್ಸಿನಲ್ಲೇ (1998) ತಾಯಿಯನ್ನು ಕಳೆದುಕೊಂಡವರು. ಇವರ ತಂದೆ ಕಲ್ಲಪ್ಪ ಅವರು ನಿತ್ಯ ಕೂಲಿ ಕೆಲಸಕ್ಕೆ ಹೋಗಿ ಇವರಿಗೆ ಶಿಕ್ಷಣವನ್ನು ಕೊಡಿಸಿದ್ದಾರೆ. ಡಾ.ಚಿದಾನಂದ ಅವರ ತಂದೆ ಇಂದಿಗೂ ಕೂಲಿಕೆಲಸ ಮಾಡುತ್ತಾರೆ.  ಹಿರಿಯ ಸಹೋದರ ಪರಮಾನಂದ ಮಹಾಲಿಂಗಪುರ ಪಟ್ಟಣದಲ್ಲಿ ಟೇಲರಿಂಗ್ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.

ಹುಬ್ಬಳ್ಳಿ ಕೆಎಮ್ ಸಿ ಯಲ್ಲಿ ಎಂಬಿಬಿಎಸ್ ಪದವಿಯನ್ನು ಪಡೆದರು. ಎಂಬಿಬಿಎಸ್ ನಲ್ಲಿ ಕರ್ನಾಟಕ ರಾಜ್ಯಕ್ಕೆ 806 ನೇ ಸ್ಥಾನವನ್ನು ಗಳಿಸಿದ್ದರು.  ದೆಹಲಿಯ AIMS ನಲ್ಲಿ ವಿಧ್ಯಾಭ್ಯಾಸ ಮಾಡಿ ಎಂಡಿ (ಔಷಧ) ಪದವಿಯಲ್ಲಿ ದೇಶಕ್ಕೆ 300 ನೇ ರ್ಯಾಂಕ್ ಪಡೆದುಕೊಂಡಿದ್ದರು.

ಕಳೆದ ಎರಡು ವರ್ಷದಿಂದ ಹೈದರಾಬಾದ್ ನ ಗ್ಲೋಬಲ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಚಿದಾನಂದ ಅವರು 2021 ನೇ ಸಾಲಿನ ಸುಪರ್ ಸ್ಪೆಷಾಲಿಟಿ ನೀಟ್ ಪರೀಕ್ಷೆಯಲ್ಲಿ MD. Gastroenterology ಮತ್ತು MD. Hematology ಎರಡು ವಿಭಾಗದಲ್ಲಿ ಭಾರತ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆದುಕೊಂಡು ಅವಿಸ್ಮರಣೀಯ ಸಾಧನೆ ಮಾಡಿದ್ದಾರೆ.

ಸಾಧಿಸುವ ಛಲ, ಸತತ ಅಧ್ಯಯನ, ಕಠಿಣ ಪರಿಶ್ರಮ ಪಡುವವರಿಗೆ ಬಡತನ ಎಂದಿಗೂ ಅಡ್ಡಿಯಾಗುವದಿಲ್ಲ ಎಂಬುವದಕ್ಕೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನಬೆಳಗಲಿ ಪಟ್ಟಣದ ಡಾ. ಚಿದಾನಂದ ಕಲ್ಲಪ್ಪ ಕುಂಬಾರ ಅವರು ಸಾಕ್ಷೀಯಾಗಿದ್ದಾರೆ. ಡಾ. ಚಿದಾನಂದ ಕುಂಬಾರ ಅವರ ವೈದ್ಯಕೀಯ ಕ್ಷೇತ್ರದ ಈ ಸಾಧನೆಗೆ ರನ್ನಬೆಳಗಲಿ ಪಟ್ಟಣದ ಹಿರಿಯರು, ಸಾರ್ವಜನಿಕರು, ಕುಂಬಾರ ಕುಟುಂಬದ ಸದಸ್ಯರು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next