Advertisement

ನೀರವ್‌ ಜಾಮೀನು ಅರ್ಜಿ ಮತ್ತೆ ತಿರಸ್ಕೃತ

01:41 AM Mar 30, 2019 | Team Udayavani |

ಹೊಸದಿಲ್ಲಿ: ಲಂಡನ್‌ನಲ್ಲಿ ತಲೆಮರೆಸಿಕೊಂಡಿದ್ದ ವಜ್ರದ ವ್ಯಾಪಾರಿ ನೀರವ್‌ ಮೋದಿಯ ಜಾಮೀನು ಅರ್ಜಿ ಸತತ ಎರಡನೇ ಬಾರಿ ತಿರಸ್ಕೃತ ಗೊಂಡಿದೆ. ಹಾಗಾಗಿ, ನೀರವ್‌ ಅವರು ಎಚ್‌ಎಂಪಿ ವ್ಯಾಂಡ್ಸ್‌ವರ್ತ್‌ ಪ್ರಿಸನ್‌ ಜೈಲಿಗೆ ಮರಳಿದ್ದಾರೆ. ಕಳೆದ ವಾರ ಬಂಧನಕ್ಕೊಳಗಾಗಿದ್ದ ಬೆನ್ನಲ್ಲೇ ನೀರವ್‌ ಸಲ್ಲಿಸಿದ್ದ ಜಾಮೀನು ಅರ್ಜಿ ಸಹ ತಿರಸ್ಕೃತಗೊಂಡಿತ್ತು.

Advertisement

ಶುಕ್ರವಾರದ ವಿಚಾರಣೆಯಲ್ಲಿ ನೀರವ್‌ ಮೋದಿಯಿಂದ ಮೋಸ ಹೋಗಿರುವ ಬ್ಯಾಂಕುಗಳ ಪರವಾಗಿ ವಾದ ಮಂಡಿಸಿದ ಕ್ರೌನ್‌ ಪ್ರಾಸಿಕ್ಯೂಷನ್‌ ಸರ್ವೀಸ್‌ನ (ಸಿಪಿಎಸ್‌) ವಕೀಲರು, ನೀರವ್‌ ವಿರುದ್ಧದ ಪ್ರಕರಣವೊಂದಕ್ಕೆ ಸಂಬಂಧಿಸಿದ ಸಾಕ್ಷಿಯೊಬ್ಬರಿಗೆ ನೀರವ್‌ ಕೊಲೆ ಬೆದರಿಕೆ ಹಾಕಿದ್ದರು ಹಾಗೂ ಮತ್ತೂಬ್ಬ ಸಾಕ್ಷಿಗೆ 20 ಲಕ್ಷ ರೂ. ಲಂಚ ನೀಡುವ ಆಮಿಷ ಒಡ್ಡಿದ್ದರು.

ಹಾಗಾಗಿ, ನೀರವ್‌ಗೆ ಜಾಮೀನು ನೀಡಿದರೆ, ಅವರು ಸಾಕ್ಷಿಗಳನ್ನು ಬೆದರಿಸುವ ಅಥವಾ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆಗಳಿವೆ ಎಂದು ವಾದಿಸಿದರು. ವಾದ ಆಲಿಸಿದ ಲಂಡನ್‌ನ ವೆಸ್ಟ್‌ ಮಿನಿಸ್ಟರ್‌ ನ್ಯಾಯಾಲಯದ ನ್ಯಾಯಾಧೀಶರಾದ ಎಮ್ಮಾ ಅಬುತ್ರೋಟ್‌, ಜಾಮೀನು ಪಡೆದು ಹೊರನಡೆದರೆ ನೀರವ್‌ ಅವರು ಪುನಃ ಶರಣಾಗುವ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿ, ಅವರ ಜಾಮೀನು ಅರ್ಜಿಯನ್ನು ತಳ್ಳಿಹಾಕಿದರು. ಇದೇ ನ್ಯಾಯಾಧೀಶರೇ, ಕೆಲ ದಿನಗಳ ಹಿಂದೆ ವಿಜಯ್‌ ಮಲ್ಯ ಹಸ್ತಾಂತರಕ್ಕೂ ಆದೇಶ ನೀಡಿದ್ದರೆಂಬುದು ಗಮನಾರ್ಹ.

Advertisement

Udayavani is now on Telegram. Click here to join our channel and stay updated with the latest news.

Next