ರೇಷ್ಮೆ ಸೀರೆ ತೊಟ್ಟು, ಕೊರಳಿಗೆ ಆಭರಣ ಧರಿಸಿ, ನಾಟ್ಯಮಯೂರಿಯಂತೆ ಫೋಸ್ ಕೊಟ್ಟಿರೋ ಕಲಾಕಾರ ಯಾರೆಂಬುದನ್ನು ಪ್ರತ್ಯೇಕವಾಗಿ ಹೇಳುವಂತಿಲ್ಲ. ನಟ ನೀನಾಸಂ ಅಶ್ವತ್ಥ್ ಹೀಗೊಂದು ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವುದು ಹೃದಯಶಿವ ನಿರ್ದೇಶನದ “ಜಯಮಹಲ್’ ಚಿತ್ರದಲ್ಲಿ. ಈ ಚಿತ್ರದಲ್ಲಿ ಅವರಿಗೇನಾದರೂ ನಾಗವಲ್ಲಿಯ ಆತ್ಮ ಅಟಕಾಯಿಸಿಕೊಂಡಿದೆಯಾ ಎಂಬ ಪ್ರಶ್ನೆ ಬರಬಹುದು. ಅದು ನಾಗವಲ್ಲಿಯ ಆತ್ಮವಲ್ಲ, ಮಾತಂಗಿಯ ಆತ್ಮ ಎಂಬುದು ನಿಮಗೆ ಗೊತ್ತಿರಲಿ.
“ಜಯಮಹಲ್’ ಚಿತ್ರದಲ್ಲಿ ಅಶ್ವತ್ಥ್ ಪ್ರೊಫೆಸರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಅದರಲ್ಲೂ ಅವರೊಬ್ಬ ನಾಸ್ತಿಕ. ಯಾವುದೇ ದೇವರು, ದೆವ್ವ, ಮೂಢನಂಬಿಕೆ, ಮೌಡ್ಯ ಕಂದಾಚಾರಗಳನ್ನು ನಂಬದ ವ್ಯಕ್ತಿ. ಅಂತಹ ವ್ಯಕ್ತಿ ಹೀಗೇಕೆ ಸೀರೆ ತೊಟ್ಟು, ಭರತನಾಟ್ಯ ಮಾಡುತ್ತಾರೆ ಎಂಬ ಮತ್ತೂಂದು ಪ್ರಶ್ನೆ ಎದುರಾದರೆ, ಅವರೊಳಗೊಂದು “ಆತ್ಮ’ ಎಂಟ್ರಿಯಾಗಿ, ಅವರನ್ನು ಹೀಗೆಲ್ಲಾ ಮಾಡಿಸುತ್ತೆ ಎಂಬುದು ಉತ್ತರ.
“ಜಯಮಹಲ್’ ಒಬ್ಬ ರಾಣಿಯ ಕಥೆ. ಮಾತಂಗಿ ಎಂಬ ರಾಣಿ ಸಾಕಷ್ಟು ಆಸೆಗಳನ್ನು ಪಟ್ಟವಳು. ಆ ಆಸೆಗಳು ಈಡೇರದೇ ಆಕೆ ಸಾವನ್ನಪ್ಪಿ, ಅತೃಪ್ತಿಯಿಂದ ಆತ್ಮವಾಗಿ ಅಲೆದಾಡುತ್ತಾಳೆ. ಆ ಸಂದರ್ಭದಲ್ಲಿ, ಆಕೆಯ ಆತ್ಮ ವಿದ್ಯಾರ್ಥಿಗಳಿಗೆ ದೆವ್ವ, ಭೂತ, ದೇವರು ಎಂಥದ್ದು ಇಲ್ಲ ಎಂದು ವೈಜ್ಞಾನಿಕ ಕಾರಣ ಕೊಡುವ ಪ್ರೊಫೆಸರ್ ದೇಹ ಸೇರುತ್ತೆ. ಆಮೇಲೆ ಏನೆಲ್ಲಾ ಆಗಿಹೋಗುತ್ತೆ ಎಂಬುದು ಸಸ್ಪೆನ್ಸ್ ಎಂಬುದು ನಿರ್ದೇಶಕರ ಮಾತು.
ಇಲ್ಲಿ ನೀನಾಸಂ ಅಶ್ವತ್ಥ್ ಅವರ ಪಾತ್ರ ಪ್ರಮುಖವಾಗಿದೆ. ಅಂತಹ ಪಾತ್ರ ನಿರ್ವಹಿಸೋಕೆ ಎಲ್ಲರಿಂದಲೂ ಸಾಧ್ಯವಿಲ್ಲ. ಅಶ್ವತ್ಥ್ ಅವರು ರಂಗಭೂಮಿ ಹಿನ್ನೆಲೆಯವರು. ಹಾಗಾಗಿ, ವಿಚಿತ್ರವಾಗಿರುವ ಆ ಪಾತ್ರವನ್ನು ಅಷ್ಟೇ ಅದ್ಭುತವಾಗಿ ನಿರ್ವಹಿಸಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ ಹೃದಯಶಿವ. ಅಂದಹಾಗೆ, ನೀನಾಸಂ ಅಶ್ವತ್ಥ್ ಅವರಿಗೆ ಅಂಥದ್ದೊಂದು ಪಾತ್ರ ಸಿಕ್ಕಿದ್ದು ಇದೇ ಮೊದಲು.
ಈ ಹಿಂದೆ ಅವರು ಹುಡುಗಿ ಪಾತ್ರ ನಿರ್ವಹಿಸಿದ್ದರೂ, ಒಂದು ಆತ್ಮ ತನ್ನೊಳಗೆ ಪ್ರವೇಶಿಸಿದಾಗ, ಆಗುವ ಬದಲಾವಣೆಗಳನ್ನರಿತು, ಅಷ್ಟೇ ಸೂಕ್ಷ್ಮವಾಗಿ ನಿರ್ವಹಿಸುವ ಮೂಲಕ ಪಾತ್ರಕ್ಕೆ ಹೆಚ್ಚು ತೂಕ ಬರುವಂತೆ ಮಾಡಿದ್ದಾರೆ ಎನ್ನುವ ನಿರ್ದೇಶಕರು ಏಪ್ರಿಲ್ 6 ರಂದು ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ. ಇದು ಕನ್ನಡ ಹಾಗು ತಮಿಳು ಭಾಷೆಯಲ್ಲಿ ತಯಾರಾಗಿದ್ದು, ಕನ್ನಡದಲ್ಲಿ “ಜಯಮಹಲ್’ ಆಗಿದ್ದರೆ, ತಮಿಳಿನಲ್ಲಿ “ಮಾತಂಗಿ’ಯಾಗಿ ಏಪ್ರಿಲ್ ನಾಲ್ಕನೇ ವಾರ ತಮಿಳುನಾಡಿನಲ್ಲಿ ಬಿಡುಗಡೆಯಾಗಲಿದೆ.