ಕೊಪ್ಪಳ: ಜಿಲ್ಲೆಯಲ್ಲಿ ಸತತ ಬರದಿಂದ ಕಂಗೆಟ್ಟ ರೈತ ಸಮೂಹ ವರುಣನ ಆಗಮನಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತ ಕುಳಿತಿದ್ದರೆ, ಇತ್ತ ರೈತ ಮಹಿಳೆಯರು ದುಡಿಮೆ ಇಲ್ಲದೆ ಉಪ ಜೀವನ ನಡೆಸಲು ಬಿರು ಬಿಸಿಲಲ್ಲಿ ಹೊಲ, ಗುಡ್ಡಗಾಡು ಪ್ರದೇಶದಲ್ಲಿ ಸುತ್ತಾಡಿ ಬೇವಿನ ಬೀಜ ಆರಿಸಿ ನಿತ್ಯದ ಬದುಕಿಗೆ ದಾರಿ ಕಂಡುಕೊಳ್ಳುತ್ತಿದ್ದಾರೆ.
ಜಮೀನಿನಲ್ಲಿ ದುಡಿಮೆ ಮಾಡಿ ಜೀವನ ನಡೆಸೋಣವೆಂದರೂ ಮಳೆ ಕೊರತೆಯಿಂದ ದುಡಿಮೆ ಇಲ್ಲದಂತಹ ಸ್ಥಿತಿ ಎದುರಾಗಿದೆ. ಸರ್ಕಾರದಿಂದ ಕೊಡುವ ಉದ್ಯೋಗ ಖಾತ್ರಿ ಕೆಲಸ ಹಸಿದ ಹೊಟ್ಟೆಗೆ ಅರೆಕಾಸಿನ ಗಂಜಿ ಸಿಕ್ಕಂತೆ ಎನ್ನುವಂತಿದೆ. ಇದರ ಮಧ್ಯೆ ನಿತ್ಯವೂ ಉಪ ಜೀವನ ನಡೆಸಲೇಬೇಕಿದ್ದು, ಬೇವಿನಬೀಜವೇ ಇವರ ಬದುಕಿಗಾಸರೆಯಾಗಿದೆ.
ರೈತ ಮಹಿಳೆಯರು ಹೊಲ ಹೊಲ ಸುತ್ತಾಡಿ ಬೇವಿನ ಗಿಡ ಇರುವ ಸ್ಥಳದಲ್ಲಿ ಗಾಳಿಗೆ ಬಿದ್ದಿರುವ ಬೀಜಗಳನ್ನು ಆಯ್ದು ಮನೆಗೆ ತಂದು ಕಸ, ಕಡ್ಡಿ ಸ್ವಚ್ಛಗೊಳಿಸಿ ಮಾರುಕಟ್ಟೆಗೆ ಮಾರಾಟ ಮಾಡುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ. ಒಂದು ಪುಟ್ಟಿ ಬೇವಿನ ಬೀಜಕ್ಕೆ 50-60 ರೂ. ಮಾರಾಟವಾಗುತ್ತಿದ್ದು ದಿನಕ್ಕೆ 2-3 ಪುಟ್ಟಿಯಷ್ಟು ಬೀಜವನ್ನು ಆಯ್ದು ಒಣಗಿಸಿ ಚೀಲಗಳಲ್ಲಿ ತುಂಬಿಕೊಂಡು ಬಂದು ಮಾರುತ್ತಿದ್ದಾರೆ. ಇದು ಈ ವರ್ಷದ ಸ್ಥಿತಿಯಲ್ಲ ಪ್ರತಿ ವರ್ಷವೂ ಇದೇ ಸ್ಥಿತಿ. ಆದರೆ ಜಿಲ್ಲಾಡಳಿತ ಲೆಕ್ಕಾಚಾರ ಪ್ರಕಾರ ಉದ್ಯೋಗ ಖಾತ್ರಿಯಲ್ಲಿ ಗುರಿಗೂ ಮೀರಿ ಸಾಧನೆ ಮಾಡಿದೆ. ಮಳೆ ಸರಿಯಾಗಿ ಬಂದಿದ್ದರೆ ನಾವ್ಯಾಕೆ ಮುಳ್ಳಿನ ಕಂಟೆ, ಪೊದೆ, ಕ್ರಿಮಿ-ಕೀಟ ಇರುವ ಜಾಗದಲ್ಲಿ ಬೇವಿನ ಬೀಜ ಆಯುವ ಕೆಲಸ ಮಾಡುತ್ತಿದ್ದೆವು. ಹೊಲದಲ್ಲಿ ಚೆನ್ನಾಗಿ ದುಡಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆವು. ಆ ಮಳೆ ದೇವ ನಮ್ಮ ಮೇಲೆ ಕರುಣೆ ತೋರುತ್ತಿಲ್ಲ. ಯಾರ ಹೊಲದಲ್ಲೂ ದುಡಿಮೆ ಇಲ್ಲ. ನಮಗೆ ಗುಳೆ ಹೋಗಿ ದುಡಿಮೆ ಮಾಡಲು ಶಕ್ತಿಯಿಲ್ಲ. ಇನ್ನೂ ಗ್ರಾಪಂಗೆ ತೆರಳಿ ಉದ್ಯೋಗ ಕೊಡಿ ಎಂದು ಕೇಳಿಕೊಂಡರೆ ಅವರು ನಮ್ಮ ಸಮಸ್ಯೆ ಆಲಿಸುವುದೇ ಇಲ್ಲ. ಮತ್ತೇನು ಮಾಡಬೇಕು. ನಮ್ಮ ಜೀವನ ನಾವೇ ನೋಡಿಕೊಳ್ಳಬೇಕು. ಯಾವ ಸರ್ಕಾರ ಬಂದರೂ ನಮ್ಮಂತವರ ನೋವು ಕಾಣಿಸಲ್ಲ. ಜನಿಸಿದ ಮೇಲೆ ಬದುಕು ಸಾಗಿಸಬೇಕಲ್ಲ. ಮನೆತನ ನಡೆಸಬೇಕಲ್ಲ ಎನ್ನುತ್ತಿದ್ದಾರೆ ರೈತ ಮಹಿಳೆಯರು.
ಬರ ನಿರ್ವಹಣೆಗೆ ಸರ್ಕಾರ ಸಿದ್ಧವಿದೆ ಹೇಳುತ್ತಿದೆ. ಉದ್ಯೋಗ ಖಾತ್ರಿಯಲ್ಲಿ ನಾವು ಗುರಿಗೂ ಮೀರಿ ಸಾಧನೆ ಮಾಡಿದ್ದೇವೆ. ಗ್ರಾಪಂ ಹಂತದಲ್ಲಿ ಜನರಿಗೆ ಕೆಲಸ ಕೊಟ್ಟಿದ್ದೇವೆ ಎನ್ನುತ್ತಿದೆ ಜಿಲ್ಲಾಡಳಿತ. ಆದರೆ ಇಂತಹ ಮಹಿಳೆಯರ ನೈಜ ಸಮಸ್ಯೆ ಆಲಿಸಿ ಜನರಿಗೆ ತಕ್ಕ ಮಟ್ಟಿಗಾದರೂ ಉದ್ಯೋಗ ಕೊಡುವ ಕೆಲಸವಾಗಬೇಕಿದೆ.
•ದತ್ತು ಕಮ್ಮಾರ