ಹೈದರಾಬಾದ್: ಬೇವಿಗೆ ಸ್ತನ ಕ್ಯಾನ್ಸರ್ ನಿಗ್ರಹ ಸಾಮರ್ಥ್ಯವಿದೆ ಎಂದು ರಾಷ್ಟ್ರೀಯ ಫಾರ್ಮಾಸ್ಯುಟಿಕಲ್ ವೈದ್ಯಕೀಯ ಹಾಗೂ ಸಂಶೋಧನೆ ಸಂಸ್ಥೆ (ನಿಪೆರ್) ಆವಿಷ್ಕಾರ ಮಾಡಿದೆ. ಬೇವಿನ ಎಲೆ ಹಾಗೂ ಹೂಗಳಿಂದ ಪಡೆದ ನಿಂಬೋಲೈಡ್ ಎಂಬ ರಾಸಾಯನಿಕ ಸಂಯುಕ್ತವು ತ್ವರಿತಗತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ ಸ್ತನ ಕ್ಯಾನ್ಸರ್ ಗುಣಪಡಿಸಲಿದೆ. ಜೊತೆಗೆ ಇದನ್ನು ಅಗ್ಗದ ದರದಲ್ಲಿ ತಯಾರಿಸಬಹುದಾಗಿದೆ ಎಂದು ಭಾರತ ಸರ್ಕಾ ರದ ರಸಗೊಬ್ಬರ ಸಚಿವಾಲಯದ ಈ ಅಧೀನ ಸಂಸ್ಥೆಯ ವಿಜ್ಞಾನಿಗಳು ತಿಳಿಸಿದ್ದಾರೆ.
ಕ್ಯಾನ್ಸರ್‌ನ ಕೋಶಗಳನ್ನು ನಾಶ ಮಾಡುವ ಮತ್ತು ಅಂಥ ಕೋಶಗಳ ಉತ್ಪತ್ತಿಯನ್ನು ಪ್ರತಿಬಂಧಿಸುವ ಕೆಲಸವನ್ನು ನಿಂಬೋಲೈಡ್ ಮಾಡುತ್ತದೆ. ಈ ಕುರಿತು ಇನ್ನಷ್ಟು ವೈದ್ಯಕೀಯ ಸಂಶೋಧನೆ ನಡೆಸಲು ಹಣಕಾಸು ನೆರವು ನೀಡಬೇಕೆಂದು ಬಯೋಟೆಕ್ನಾಲಜಿ, ಆಯುಷ್
ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಮನವಿಯನ್ನೂ ಸಲ್ಲಿಸಲಾಗಿದೆ ಎಂದಿದ್ದಾರೆ.
ಭಾರತದಲ್ಲಿ ಯಥೇಚ್ಚವಾಗಿ ಬೇವಿನ ಮರಗಳು ಕಂಡು ಬರುತ್ತವೆ. ಇದನ್ನು ಮುಂದುವರಿದ ತಾಂತ್ರಿಕ ಸಂಶೋಧನೆಗೊಳಪಡಿಸಿ ಸ್ತನ ಕ್ಯಾನ್ಸರ್‌ಗೆ ಪರಿಣಾಮಕಾರಿ ಔಷಧವನ್ನು ತಯಾರಿಸಬಹುದು ಎಂದು ನಿಪೆರ್ ವಿಜ್ಞಾನಿ ಚಂದ್ರಯ್ಯ ಗೊಡುಗು ತಿಳಿಸಿದ್ದಾರೆ.
ಶಮನಕಾರಿ ಬೇವು: ಆಯುರ್ವೇದ ಚಿಕಿತ್ಸೆಯಲ್ಲಿ ಬೇವು ಮಹತ್ವದ ಸ್ಥಾನ ಪಡೆದಿದ್ದು, ಜ್ವರ, ಮಧುಮೇಹ ಮತ್ತು ಉರಿಯೂತಕ್ಕೆ ರಾಮಬಾಣವಾಗಿದೆ. ವೈರಸ್, ಬ್ಯಾಕ್ಟೀರಿಯಾ,ಶಿಲೀಂಧ್ರ ನಾಶಕ ಗುಣ ಇದಕ್ಕಿದೆ.
*ಕೇಂದ್ರ ರಸಗೊಬ್ಬರ ಸಚಿವಾಲಯದ ಅಧೀನ ಸಂಸ್ಥೆ ನಿಪೆರ್‌ನಿಂದ ಆವಿಷ್ಕಾರ
*ಕ್ಯಾನ್ಸರ್ ನಿರೋಧಕ ಶಕ್ತಿ ಇದೆ ಎಲೆ, ಹೂವಿನಿಂದ ಪಡೆದ ನಿಂಬೋಲೈಡ್‌ಗೆ