ಶಿರೂರ: ಸಮೀಪದ ನೀಲಾನಗರ ಗ್ರಾಮದಲ್ಲಿ ಲಕ್ಷಾಂತರ ರೂ. ವೆಚ್ಚಮಾಡಿ ಎರಡು ವರ್ಷ ಕಳೆದರು ಸಹ ನೀರಿನ ಘಟಕ ಉದ್ಘಾಟನೆಗೊಳ್ಳದೆ ಸಾಮಗ್ರಿಗಳು ತುಕ್ಕು ಹಿಡಿಯುತ್ತಿವೆ. ಗ್ರಾಮಸ್ಥರು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ.
ಬೇಸಿಗೆ ಮುಗಿಯುವ ಹಂತಕ್ಕೆ ಬಂದರೂ ಸಹ ಲಂಬಾಣಿ ಜನರೆ ವಾಸಿಸುವ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾದಾಗ ಗ್ರಾಮಸ್ಥರು ಸಂತಸಪಟ್ಟರು. ಘಟಕಕ್ಕೆ ಸುತ್ತಲೂ ತಂತಿ ಬೇಲಿ ಇಲ್ಲದೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ನೀರಿನ ಸಿಂಟೆಕ್ಸ್ ಹೊರಭಾಗದಲ್ಲಿಯೇ ಕಾಣುತ್ತಿದ್ದು, ನೀರಿನ ಘಟಕ ಪೂರ್ಣವಾಗಿ ಸಿದ್ಧಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ಗ್ರಾಮದ ಸಾರ್ವಜನಿಕರಿಗೆ ಸರಬರಾಜಾಗುವ ನೀರನ್ನೆ ಘಟಕಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡು ವರ್ಷದಲ್ಲಿ ಕೆಲ ದಿನಗಳು ಮಾತ್ರ ಪ್ರಾರಂಭಗೊಂಡು ಮತ್ತೆ ಬಂದಾಗಿದ್ದು, ಇದಕ್ಕೆ ಸ್ಥಳೀಯ ಜನಪ್ರತಿನಿಧಿ ಗಳಾಗಲಿ, ಅಧಿಕಾರಿಗಳಾಗಲಿ ನೀರಿನ ಘಟಕವನ್ನು ಪ್ರಾರಂಭಿಸುವ ಗೋಜಿಗೆ ಹೋಗಿಲ್ಲ.
ಘಟಕದ ಮೆಲೆ ಯಾವ ಇಲಾಖೆಯ ಹೆಸರಾಗಲಿ, ಜನಪ್ರತಿನಿಧಿ ಗಳ ಭಾವಚಿತ್ರಗಳು ಸಹ ಇಲ್ಲ. ಈ ಕುರಿತು ಗ್ರಾಪಂ ಸಿಬ್ಬಂದಿಯನ್ನು ವಿಚಾರಿಸಿದರೆ ಈ ಕುರಿತು ಯಾವ ಅಧಿಕಾರಿಗಳು ನಮ್ಮೊಂದಿಗೆ ಚರ್ಚಿಸಿಲ್ಲ. ಗ್ರಾಪಂಗೂ ಸಹ ಹಸ್ತಾಂತರಿಸಿಲ್ಲ ಎನ್ನುತ್ತಾರೆ. ಗ್ರಾಮೀಣ ಭಾಗದ ಜನರಿಗೆ ಶುದ್ಧ ನೀರು ನೀಡುವುದಾಗಿ ಭರವಸೆ ನೀಡುವ ಜನಪ್ರತಿನಿಧಿಗಳು ನೀಲಾನಗರ ನೀರಿನ ಘಟಕ ಪ್ರಾರಂಭಿಸುವುದರಲ್ಲಿ ಇಚ್ಛಾಶಕ್ತಿ ತೋರಿಸುತ್ತಿಲ್ಲ ಎಂದು ಗ್ರಾಮಸ್ಥರ ಪ್ರಶ್ನಿಸಿದ್ದಾರೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಅಪೂರ್ಣಗೊಂಡಿರುವ ನೀರಿನ ಘಟಕವನ್ನು ಪ್ರಾರಂಭಿಸಿ ಗ್ರಾಮಸ್ಥರಿಗೆ ಶುದ್ಧ ನೀರಿನ ವ್ಯವಸ್ಥೆ ಮಾಡುವರೆ ಎಂಬುದು ಕಾದು ನೋಡಬೇಕಾಗಿದೆ.
ನೀರಿನ ಘಟಕ ಸಿದ್ಧಗೊಂಡಿದೆ. ಆದರೆ ಆರಂಭವಾಗಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿಯು ಇಲ್ಲ, ಗ್ರಾಪಂಗೂ ಸಹ ಹಸ್ತಾಂತರಗೊಳಿಸಿಲ್ಲ ಸಂಬಂಧಪಟ್ಟ ಅಧಿಕಾರಿಗಳು ಬಂದು ಚರ್ಚಿಸಿದರೆ, ನೀರಿನ ವ್ಯವಸ್ಥೆಗೆ ಸಹಕರಿಸಲಾಗುವುದು.
ಲಲಿತಾ ದೊಡಮನಿ, ನೀಲಾನಗರ ಗ್ರಾಪಂ ಅಧ್ಯಕ್ಷೆ