Advertisement
ಬೆಳ್ಳಿಯ ಚಮಚವನ್ನು ಬಾಯಲ್ಲಿ ಇಟ್ಕೊಂಡು ಹುಟ್ಟಿದವರು ಅನ್ನುತ್ತಾರಲ್ಲ, ಅಂಥ ಹಿನ್ನೆಲೆ ಈಕೆಯದು. ರಾಜಕುಮಾರಿಯಂತೆಯೇ ಬೆಳೆದ ಈಕೆಗೆ ಚಿಕ್ಕ ವಯಸ್ಸಿಗೆ ವೈಧವ್ಯ ಜತೆಯಾಯಿತು. ಅದರಿಂದ ಚೇತರಿಸಿಕೊಳ್ಳುವ ಮೊದಲೇ ಸ್ತನ ಕ್ಯಾನ್ಸರ್ ಅಮರಿಸಿಕೊಂಡಿತು. ಪರಿಣಾಮ; ಅದುವರೆಗೂ ಶ್ರೀಮಂತಿಕೆಯನ್ನೇ ಉಸಿರಾಡುತ್ತಿದ್ದ ಈಕೆ, ದಿಢೀರನೆ ಕಷ್ಟಗಳ ಸುಳಿಗೆ ಸಿಕ್ಕಿಕೊಂಡರು. ಆರು ವರ್ಷಗಳ ಕಾಲ ಚಿಕಿತ್ಸೆ ಪಡೆದು ಅಬ್ಟಾ, ಕೊನೆಗೂ ಕ್ಯಾನ್ಸರ್ ಗೆದ್ದೆ ಅಂದುಕೊಂಡರು.
* * * *
ನಾವು ಬಿಹಾರದವರು. ನಮ್ಮ ಅಪ್ಪನ ಹೆಸರು ಒ.ಎನ್.ಪಾಂಚಾಲರ್. ಅಮ್ಮನ ಹೆಸರು ಊರ್ಮಿಳಾ. ಅವರಿಬ್ಬರೂ ಮಾಸ್ಟರ್ ಡಿಗ್ರಿ ಮಾಡಿಕೊಂಡಿದ್ದವರು. ಅನುವಾದದಲ್ಲಿ ಇಬ್ಬರಿಗೂ ಒಳ್ಳೆಯ ಹೆಸರಿತ್ತು. ನಾನೀಗ ಹೇಳುತ್ತಿರುವುದು 80ರ ದಶಕದ ಮಾತು. ಆ ದಿನಗಳಲ್ಲಿ ಭಾರತ ಮತ್ತು ರಷ್ಯಾದ ಮಧ್ಯೆ ಉತ್ತಮ ಬಾಂಧವ್ಯವಿತ್ತು. ರಷ್ಯನ್ ಸಾಹಿತ್ಯವನ್ನು ಹಿಂದಿ ಮತ್ತು ಇಂಗ್ಲಿಷ್‌ಗೆ ಸಮರ್ಥವಾಗಿ ಅನುವಾದಿಸುವ ಮೂರು ಜನರನ್ನು ಆಯ್ಕೆ ಮಾಡಿ, ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಕಳಿಸುವಂತೆ, ರಷ್ಯನ್ ಸರಕಾರ ಮನವಿ ಮಾಡಿಕೊಂಡಿತು. ಹೀಗೆ, ಅನುವಾದದ ಕೆಲಸಕ್ಕೆ ಭಾರತ ಸರಕಾರವು ಆಯ್ಕೆ ಮಾಡಿದ ಮೂವರ ಪೈಕಿ, ನನ್ನ ಹೆತ್ತವರೂ ಇದ್ದರು. ಅವರ ಜತೆಯಲ್ಲಿ ನಾನು ಮತ್ತು ನನ್ನ ತಂಗಿ ಪೂನಂ ಕೂಡ ಮಾಸ್ಕೋಗೆ ತೆರಳಿದೆವು. ನಮ್ಮ ಪ್ರಾಥಮಿಕ ಶಿಕ್ಷಣ ನಡೆದದ್ದು ಮಾಸ್ಕೋದಲ್ಲಿಯೇ. ಅಲ್ಲಿ ರಷಿಯನ್ ಭಾಷೆಯದ್ದೇ ಪಾರುಪತ್ಯ. ಇಂಗ್ಲಿಷ್‌ನ ಗಂಧಗಾಳಿಯೇ ಅಲ್ಲಿ ಇರಲಿಲ್ಲ. ಅದಕ್ಕಿಂತ ಮುಖ್ಯವಾಗಿ, ಪ್ರಕೃತಿಯನ್ನು ಗಮನಿಸುತ್ತಲೇ ಮಕ್ಕಳು ಪಾಠ ಕಲಿಯಬೇಕು ಅನ್ನುವುದು ಅಲ್ಲಿನ ಶೈಕ್ಷಣಿಕ ನೀತಿಯಾಗಿತ್ತು. ಹಾಗಾಗಿ, ಸಮೀಪದ ತೋಟಗಳಲ್ಲಿ ಹೂವು ಅರಳುವುದನ್ನು, ಗಿಡಗಳು ಚಿಗುರುವುದನ್ನು, ತರಕಾರಿಗಳು ರೂಪುಗೊಳ್ಳುವ ಬಗೆಯನ್ನು ನೋಡುವುದರಲ್ಲಿಯೇ ನಮ್ಮ ಪ್ರಾಥಮಿಕ ಶಿಕ್ಷಣ ಮುಗಿಯಿತು.
Related Articles
Advertisement
ಅಪ್ಪ ಹೇಳಿದ ಈ ಮಾತು ಮನದಲ್ಲಿ ಗಟ್ಟಿಯಾಗಿ ಉಳಿದುಬಿಟ್ಟಿತು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನನಗಿದ್ದುದು ಒಂದೇ ದಾರಿ; ಇಂಗ್ಲಿಷ್ ಕಲಿಯುವುದು! ಮರುದಿನದಿಂದಲೇ ಅಪ್ಪ ಅಮ್ಮನ ಜತೆ ಇಂಗ್ಲಿಷ್ ನಲ್ಲಿಯೇ ಮಾತಾಡಲು ತೊಡಗಿದೆ. ಸರಿಯೋ ತಪ್ಪೋ ಎಂದು ಯೋಚಿಸದೆ ಇಂಗ್ಲಿಷ್‌ನಲ್ಲಿಯೇ ಬರೆಯತೊಡಗಿದೆ. ಅನಂತರದ ಕೆಲವೇ ದಿನಗಳಲ್ಲಿ ಇಂಗ್ಲಿಷ್ ಸುಲಭ ಅನ್ನಿಸತೊಡಗಿತು. ಶಾಲೆ, ಕಾಲೇಜಿನಲ್ಲಿ ನನ್ನ ಇಂಗ್ಲಿಷ್ ಬರಹಗಳಿಗೆ ಬಹುಮಾನವೂ ಬಂತು. ಮುಂದೆ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಮಾಡಬೇಕೆಂದು ನಿರ್ಧರಿಸಿ, ಅದರಲ್ಲಿಯೂ ಯಶಸ್ಸು ಕಂಡೆ.
ಈ ಸಂದರ್ಭದಲ್ಲಿಯೇ ವಿಶ್ವಮಣಿ ಕುಮಾರ್ ಎಂಬ ಎಂಜಿನಿಯರ್ ಜತೆಗೆ ನನ್ನ ಮದುವೆಯಾಯಿತು.ಆಗಿನ್ನೂ ನನಗೆ 19 ವರ್ì. ಮೂರು ವರ್ಷಗಳ ಅವಧಿಯಲ್ಲಿ ಇಬ್ಬರು ಮಕ್ಕಳೂ ಮಡಿಲು ತುಂಬಿದರು. ಗಂಡ, ಮನೆ, ಮಕ್ಕಳ ಜತೆ ಫುಲ್ ಟೈಮ್ ಗೃಹಿಣಿಯಾಗಿ ಬದುಕುವ ಯೋಚನೆ ನನ್ನದಾಗಿತ್ತು. ಆದರೆ ನನ್ನ ಗಂಡ ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ. “ನಿನ್ನ ಇಂಗ್ಲಿಷ್ ತುಂಬಾ ಚೆನ್ನಾಗಿದೆ. ಎಂ.ಎ. ಮಾಡಿಕೊಂಡೂ ಮನೆಯಲ್ಲಿ ಇರ್ತೀಯಾ? ಮತ್ತಷ್ಟು ಓದು, ಏನಾದರೂ ಸಾಧನೆ ಮಾಡು’ ಅಂದರು. ಆ ಸಂದರ್ಭಕ್ಕೆ ಸರಿಯಾಗಿ, ಅಮೆರಿಕದ ಅರಿಜೋನಾ ವಿವಿಯಲ್ಲಿ, ಪತ್ರಿಕೋದ್ಯಮ ಓದುವವರಿಗೆ ಸ್ಕಾಲರ್ ಶಿಪ್ ನೀಡುವ ವಿಷಯವೂ ಗೊತ್ತಾಯಿತು. ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ನನಗಿರಲಿ, ನೀನು ಅಮೆರಿಕಕ್ಕೆ ಹೋಗಿ ಓದು ಎಂದು ಒತ್ತಾಯಿಸಿದ ವಿಶ್ವಮಣಿ ಕುಮಾರ್, ನನ್ನನ್ನು ಅಮೆರಿಕದ ವಿಮಾನ ಹತ್ತಿಸಿಯೇಬಿಟ್ಟರು. ಎರಡು ವರ್ಷಗಳ ಅನಂತರ ಪತ್ರಿಕೋದ್ಯಮದಲ್ಲಿ ಮಾಸ್ಟರ್ ಡಿಗ್ರಿ ಪಡೆದದ್ದು ಮಾತ್ರವಲ್ಲ, ಹಲವು ಪತ್ರಿಕೆಗಳಿಗೆ ಅಂಕಣ ಬರೆಯುವ ಅವಕಾಶವನ್ನೂ ಗಿಟ್ಟಿಸಿಕೊಂಡೆ. ಇದರ ಬೆನ್ನಿಗೆ ಗಂಡ ಮತ್ತು ಮಕ್ಕಳು ಅಮೆರಿಕಕ್ಕೆ ಬಂದರು. ನಾವೆಲ್ಲ ಜತೆಗಿದ್ದೀವಲ್ಲ; ಆ ಖುಷಿಗೆ ಇನ್ನೊಂದು ಮಾಸ್ಟರ್ ಡಿಗ್ರಿ ಮಾಡು ಎಂದರು ವಿಶ್ವಮಣಿ ಕುಮಾರ್. ಅದಕ್ಕೂ ಒಪ್ಪಿ, ಪಿಆರ್ ಮತ್ತು ಜಾಹೀರಾತು ವಿಭಾಗದಲ್ಲಿ ಎಂ. ಎ. ಮಾಡಿದೆ. ನನ್ನ ಬದುಕಿಗೆ ಮೊದಲ ಬರ ಸಿಡಿಲು ಹೊಡೆದದ್ದೇ ಈ ಸಂದರ್ಭದಲ್ಲಿ. ಅದು 1993ರ ಒಂದು ದಿನ. ಅವತ್ತು, ಯಾಕೋ ಎದೆನೋಯುತ್ತಿದೆ ಎಂದು ಕುಸಿದು ಕುಳಿತರು ಕುಮಾರ್. ತತ್‌ಕ್ಷಣವೇ ಆಸ್ಪತ್ರೆಗೆ ಒಯ್ದರೂ ಪ್ರಯೋಜನವಾಗಲಿಲ್ಲ. ತೀವ್ರ ಹೃದಯಾಘಾತ ಅವರನ್ನು ಬಲಿತೆಗೆದು ಕೊಂಡಿತ್ತು. ಬದುಕಿನ ಕರಾಳ ಮುಖದ ಪರಿಚಯವಾಗಿದ್ದೇ ಆ ಸಂದರ್ಭದಲ್ಲಿ. ಒಂದು ಕಡೆಯಲ್ಲಿ ದಿಢೀರ್ ಜತೆಯಾದ ವೈಧವ್ಯ, ಇನ್ನೊಂದು ಕಡೆ ಚಿಕ್ಕ ಮಕ್ಕಳು, ಮತ್ತೂಂದು ಕಡೆ ನೆರೆ ಹೊರೆಯವರ, ಬಂಧುಗಳ ಅನುಕಂಪ/ತಿರಸ್ಕಾರದ ಮಾತುಗಳು, ಮಗದೊಂದು ಕಡೆ ಆರ್ಥಿಕ ಅಭದ್ರತೆ… ಇವೆಲ್ಲವುಗಳಿಂದ ಪಾರಾಗುವುದು ಹೇಗೆಂಬ ಯೋಚನೆ ಜತೆಯಾಯಿತು. ಈ ಸಂದರ್ಭದಲ್ಲಿಯೇ ಪಿಆರ್ ಏಜೆನ್ಸಿಯೊಂದರಲ್ಲಿ ಮ್ಯಾನೇಜರ್ ಹುದ್ದೆಯೂ ಸಿಕ್ಕಿತು. ಆ ಕೆಲಸ ಮಾಡುತ್ತಲೇ, ನನ್ನ ಮನಸ್ಸಿನ ಮಾತುಗಳಿಗೆ ಅಕ್ಷರದ ರೂಪು ಕೊಟ್ಟೆ. ಆ ಬರಹಗಳು ಟೈಮ್ಸ… ಆಫ್ ಇಂಡಿಯಾ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಪ್ರಕಟವಾದವು. ಹೀಗಿರುವಾಗಲೇ ಜೆಮ್‌ಷಡು³ರದ ನಮ್ಮ ಕಚೇರಿಯಲ್ಲಿ ಏರ್ಪಡಿಸಿದ್ದ ಒಂದು ಕಾರ್ಯಕ್ರಮದಲ್ಲಿ ಖ್ಯಾತ ಲೇಖಕ ಖುಷ್ವಾಂತ್ ಸಿಂಗ್ ಅವರೊಂದಿಗೆ ಸಂವಾದ ನಡೆಸಿ ಕೊಡುವ ಹೊಣೆಯೂ ಜತೆಯಾಯಿತು. ಖುಷ್ವಾಂತ್,ನನ್ನ ಮಾತುಗಳನ್ನು ಇಷ್ಟಪಟ್ಟಿದ್ದು ಮಾತ್ರವಲ್ಲ, ನನ್ನ ಬರ ವಣಿಗೆಯನ್ನೂ ಹೊಗಳಿ, “”ಮರೆಯ ಲಾಗದ ನೀಲಂ” ಎಂಬ ಲೇಖನವನ್ನೇ ಬರೆದುಬಿಟ್ಟರು. ಜತೆಯಾಗಿ ಒಂದು ಪುಸ್ತಕ ಸಂಪಾದಿಸೋಣ ಬಾ ಎಂದು ಆಹ್ವಾನವನ್ನೂ ನೀಡಿದರು. ಅಬ್ಟಾ, ಬದುಕು ಮತ್ತೆ ಹಾದಿಗೆ ಬಂತು ಎಂದು ನಾನು ನಿಟ್ಟುಸಿರು ಬಿಡುವ ಮೊದಲೇ 1996ರಲ್ಲಿ ಮತ್ತೂಂದು ಆಘಾತ ಜತೆಯಾಯಿತು; ನಾನು ಸ್ತನ ಕ್ಯಾನ್ಸರ್‌ಗೆ ತುತ್ತಾಗಿದ್ದೆ. ಮಕ್ಕಳಿ ಬ್ಬರೂ ಚಿಕ್ಕವರು. ಅವರಿಗೆ ತಂದೆಯೂ ಇಲ್ಲ. ಅಕಸ್ಮಾತ್ ನಾನು ಕ್ಯಾನ್ಸರ್‌ಗೆ ಬಲಿಯಾದರೆ ಅವರು ತಬ್ಬಲಿಗಳಾಗಿಬಿಡುತ್ತಾರೆ ಅನಿ ಸಿದ್ದೇ ತಡ; ಉಹೂಂ, ನಾನು ಸಾಯಬಾರದು. ಮಕ್ಕಳಿಗೋ ಸ್ಕರವಾದರೂ ಬದುಕಬೇಕು ಅನ್ನಿಸಿತು. ತತ್‌ಕ್ಷಣ ಮುಂಬಯಿಗೆ ಬಂದು ಆಸ್ಪತ್ರೆಗೆ ದಾಖಲಾದೆ. ಐದು ವರ್ಷಗಳ ಕಾಲ ಚಿಕಿತ್ಸೆ ಪಡೆದು ಕಡೆಗೊಮ್ಮೆ ಅಲ್ಲಿಂದ ಎದ್ದು ಬಂದೆ. ಆಗಲೇ ಖುಷ್ವಾಂತ್ ಸಿಂಗ್, “ಹಳ್ಳಿಗಾಡಿನಲ್ಲಿ ಪ್ರಚಲಿತವಿರುವ ಜನಪ್ರಿಯ ಕಥೆಗಳನ್ನು ಸಂಗ್ರಹಿಸು, ಅದನ್ನು ಒಂದು ಪುಸ್ತಕ ಮಾಡೋಣ’ ಅಂದರು. ಆಗಿನ್ನೂ ಭಾರತಕ್ಕೆ ಗೂಗಲ್ ಕಾಲಿಟ್ಟಿರಲಿಲ್ಲ. ಅಂತ ಸಂದರ್ಭ ದಲ್ಲಿ ಒಂದು ಟೇಪ್ ರೆಕಾರ್ಡರ್ ಅಥವಾ ಪೆನ್ನು, ಪೇಪರ್ ಜತೆ ಗಿಟ್ಟುಕೊಂಡು ಭಾರತದ ಅದೆಷ್ಟೋ ಹಳ್ಳಿಗಳನ್ನು ಸುತ್ತಿ, ಕಥೆಗಳನ್ನು ಸಂಗ್ರಹಿಸಿದ್ದಾಯಿತು. ಈ ಕಥೆಗಳನ್ನು ಸಂಗ್ರಹಿಸ ಲೆಂದೇ ಕೆಲವು ಭಾಷೆಗಳನ್ನು ಕಲಿತದ್ದೂ ಆಯಿತು. ಹಾಗೆ ಪ್ರಕಟವಾದ ಪುಸ್ತಕವೇ Our Favourite Indian Stories. ಈ ಪುಸ್ತಕ ಬೆಸ್ಟ್ ಸೆಲ್ಲರ್ ಅನ್ನಿಸಿಕೊಂಡಿತು. ಅನಂತರದಲ್ಲಿ ಹಲವು ಪ್ರಕಾಶಕರಿಂದ ಆಹ್ವಾನ ಬರತೊಡಗಿತು. ಒಂದು ಕಾಲದಲ್ಲಿ ಇಂಗ್ಲಿಷ್ ಬಾರದ ಶತ ದಡ್ಡಿ ಎಂದು ಕರೆಸಿಕೊಂಡಿದ್ದ ನಾನೇ ಈಗ ಒಂದರ ಹಿಂದೊಂದು ಇಂಗ್ಲಿಷ್ ಬುಕ್ ಬರೆಯತೊಡಗಿದ್ದೆ. ಈ ವೇಳೆಗೆ ಮಕ್ಕಳೂ ದೊಡ್ಡವರಾಗಿದ್ದರು. ಅಬ್ಟಾ, ಕಡೆಗೂ ಕಷ್ಟಗಳು ಕಳೆದವು ಎಂಬ ನಿಟ್ಟುಸಿರು ಬಿಡುವ ಮೊದಲೇ 2003ರಲ್ಲಿ ಮತ್ತೆ ಅನಾ ರೋಗ್ಯ ಜತೆಯಾಯಿತು. ಧಾವಂತದಿಂದಲೇ ಆಸ್ಪತ್ರೆಗೆ ಹೋದರೆ, ಸ್ತನ ಕ್ಯಾನ್ಸರ್ ಮತ್ತೆ ವಕ್ಕರಿಸಿಕೊಂಡಿದೆ ಎಂದು ಗೊತ್ತಾಯಿತು. ದೇವರು ನನಗೆ ಖುಷಿಯನ್ನು ಮಾತ್ರವಲ್ಲ, ಕಷ್ಟಗಳನ್ನೂ ಮೇಲಿಂದ ಮೇಲೆ ಕೊಡುತ್ತಿದ್ದ. ಹಾಗಾಗಿ ದೇವರೇ, ಯಾಕಪ್ಪಾ ಹೀಗೆ ಗೋಳಾಡಿಸ್ತೀಯಾ ಎಂದು ಕೇಳಲು ಮನಸ್ಸಾಗಲಿಲ್ಲ. ಈಗಾಗಲೇ ಒಮ್ಮೆ ಈ ಕಾಯಿಲೆಯನ್ನು ಎದುರಿಸಿದ ಅನುಭವ ವಿತ್ತಲ್ಲ; ಹಾಗಾಗಿ ಭಯವೂ ಆಗಲಿಲ್ಲ. ಕ್ಯಾನ್ಸರ್‌ಗೆ ಮತ್ತೂಮ್ಮೆ ಮುಖಾಮುಖೀಯಾಗಿ ನಿಂತೆ. ವರ್ಷಗಳ ಕಾಲ ಸುದೀರ್ಘ ಹೋರಾಟ ನಡೆಸಿ ಮತ್ತೆ ನಾನೇ ಗೆದ್ದೆ. ನನ್ನ ಗೆಲುವಿನ ಕಥೆಯನ್ನು, ಕ್ಯಾನ್ಸರ್ ಗೆಲ್ಲುವ ವಿಧಾನವನ್ನು ಎಲ್ಲರೊಂದಿಗೆ ಹೇಳಿಕೊಳ್ಳಬೇಕು ಅನ್ನಿಸಿತು. ಅದರ ಪರಿಣಾಮವೇ, To Cancer with Love! ಪುಸ್ತಕ. ಈ ಪುಸ್ತಕವೂ ಬೆಸ್ಟ್ ಸೆಲ್ಲರ್ ಅನ್ನಿಸಿಕೊಂಡಿತು.
ಹಣ ಮತ್ತು ಖ್ಯಾತಿಯನ್ನು ತಂದುಕೊಟ್ಟಿತು. ಈ ಬದುಕಿಗೆ ಋಣಿ ಅನ್ನುತ್ತಾ ಮಾತು ಮುಗಿಸಿದರು ನೀಲಂ ಕುಮಾರ್. – ಎ.ಆರ್.ಮಣಿಕಾಂತ್