Advertisement

ನಮ್ಮ ನೀಲಕುರುಂಜಿ 

10:40 PM Sep 08, 2021 | Team Udayavani |

ಪಶ್ಚಿಮ ಘಟ್ಟಗಳ ಕೊಡಗು ಪರ್ವತ ಶ್ರೇಣಿಯ ಹಸುರು ಹುಲ್ಲುಗಾವಲುಗಳು ನೀಲಿವರ್ಣ­ಮಯವಾಗುತ್ತಾ ನೀಲಕುರುಂಜಿ ಹೂ ಅರಳಿರುವ ಬಲು ಅಪರೂಪದ ಸನ್ನಿವೇಶವೊಂದನ್ನು ಸಾರಿ ಹೇಳುತ್ತಿವೆ.

Advertisement

ಕೊಡಗಿನ ವನ ಪರ್ವತ ಶ್ರೇಣಿಗಳು ಈ ಐತಿಹಾಸಿಕ ಕ್ಷಣಗಳಿಗಾಗಿ ಕಳೆದ ಏಳು ವರ್ಷಗಳಿಂದ ಕಾದಿರುತ್ತದೆ. ಸುಮಾರು 1,600 ಕಿ.ಮೀ. ಉದ್ದಕ್ಕೂ ಚಾಚಿಕೊಂಡಿರುವ ಈ ಪರ್ವತ ಶ್ರೇಣಿ­ಗಳಲ್ಲಿ 5,000ಕ್ಕೂ ಹೆಚ್ಚಿನ ಸಸ್ಯ ಪ್ರಭೇದಗಳು, 139 ಸಸ್ತನಿಗಳು, 508 ಪಕ್ಷಿ ಪ್ರಭೇದ­ಗಳು, 179ಕ್ಕೂ ಹೆಚ್ಚು ಉಭಯ­ವಾಸಿಗಳಿಂದ ತುಂಬಿ­ರುವ ಜೀವ ವೈವಿಧ್ಯ­ತೆಯ ಮಹಾ­ಕೇಂದ್ರಗಳಾ­ಗಿವೆ. ಇದನ್ನು ಆಂಗ್ಲ ಭಾಷೆಯಲ್ಲಿ ಬಯೊ­ಡೈವರ್ಸಿಟಿ ಹಾಟ್‌ಸ್ಪಾಟ್‌ ಎನ್ನಲಾ­ಗು­ತ್ತದೆ. ಪ್ರಪಂಚದ 35 ಜೀವ ವೈವಿಧ್ಯತೆ ಮಹಾ­ಕೇಂದ್ರ­ಗಳಲ್ಲಿ ಪಶ್ಚಿಮ ಘಟ್ಟಗಳು ಸೇರಿದ್ದು ಇದೊಂದು ಜೈವ ಸಂಶೋಧನ ಶಾಲೆಯಾ­ಗಿದೆ. ಮೂಲ ಆವಾಸಸ್ಥಾನದ ಸುತ್ತಮುತ್ತ ಮಾತ್ರ ಕಂಡುಬರುವ ಈಗ ಅರಳಿನಿಂತಿರುವ ಸ್ಟ್ರೊಬಿಲಾಂತಸ್‌ ಸೆಸ್ಸೆ„ಲಿಸ್‌ ಪ್ರಭೇದಗಳು ಕೊಡಗು ಜಿಲ್ಲೆಯ ಮಡಿಕೇರಿಯಿಂದ 25-30 ಕಿ. ಮೀ. ದೂರದ ಮಾಂದಲ್‌ ಪಟ್ಟಿ ಎಂಬ ಪ್ರವಾಸಿ ತಾಣದಲ್ಲಿದೆ.

ಸ್ಟ್ರೊಬಿಲಾಂತಸ್‌ ಸಸ್ಯಗಳು: ನೀಲಕುರುಂಜಿ ಎಂದು ಹೆಸರುವಾಸಿ­ಯಾಗಿರುವ ಸ್ಟ್ರೊಬಿಲಾಂತಸ್‌ ಪ್ರಭೇದಗಳು ಸಾಮಾನ್ಯವಾಗಿ 12 ವರ್ಷಗಳಿಗೊಮ್ಮೆ ಹೂ ಬಿಡುತ್ತದೆ. ಆದರೆ ಈಗ ಕೊಡಗಿನಲ್ಲಿ ಹೂ ಬಿಟ್ಟಿರುವುದು ಸ್ಟ್ರೊಬಿಲಾಂತಸ್‌ ಸೆಸ್ಸೆ„ಲಿಸ್‌ ಎಂಬ ಪ್ರಭೇದ ಎಂದು ಸ್ಟ್ರೊಬಿಲಾಂತಸ್‌ ತಜ್ಞರಾದ ಡಾ| ಐಐ ಜೋಮಿ ಅಗಸ್ಟಿನ್‌ ಅವರು ಖಾತ್ರಿಪಡಿಸಿದ್ದಾರೆ. ಅಕಾಂತೇಸಿ ಎಂಬ ಸಸ್ಯ ಕುಟುಂಬಕ್ಕೆ ಸೇರಿದ ಸ್ಟ್ರೊಬಿಲಾಂತಸ್‌ ಜೀನ್ಸ್‌ನಲ್ಲಿ 70 ಪ್ರಭೇದಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಹೆಚ್ಚಿನ ಸ್ಟ್ರೊಬಿಲಾಂತಸ್‌ ಸಸ್ಯ ಪ್ರಭೇದಗಳು ಸ್ಥಳೀಯ ಪ್ರಭೇದಗಳಾಗಿವೆ. ಆದುದರಿಂದಲೇ ಸಸ್ಯ ಸಂಶೋಧಕರು ಇದನ್ನು ಎಂಡಮಿಕ್‌ ಸ್ಪೀಶೀಸ್‌ ಎಂದು ಕರೆಯುತ್ತಾರೆ.

ನಮ್ಮಲ್ಲಿ ಮಾತ್ರ ಇರುವ ನಮ್ಮ ನೀಲ ಕುರುಂಜಿ: ಸ್ಟ್ರೊಬಿಲಾಂತಸ್‌ ಸೆಸ್ಸೈಲಿಸ್‌ನಲ್ಲಿ ಮೂರು ಪ್ರಕಾರ ಅಥವಾ ತಳಿಗಳಿವೆ: ಮೊದಲನೆಯದು – ಸೆಸ್ಸೈಲಿಸ್‌, ಎರಡನೆಯದಾಗಿ – ರಿಟಿcಯೈ, ಮೂರನೆಯದು – ಸೆಸ್ಸಿಲೋಯ್ಡಿಸ್‌. ಇದರಲ್ಲಿ ಮೊದಲನೆಯ ಪ್ರಕಾರ – ಸೆಸ್ಸೈಲಿಸ್‌ ಕೇರಳ­ದಲ್ಲಿ ಕಂಡುಬರುತ್ತದೆ, ರಿಟ್ಚಿಯೈಗಳು ಮಹಾರಾಷ್ಟ್ರದ ಪರ್ವತ ಶ್ರೇಣಿಯನ್ನು ಅಲಂಕರಿಸಿದೆ. ಮೂರನೆಯದಾದ ಸೆಸ್ಸಿಲೊಯ್ಡಿಸ್‌ ಮಾತ್ರ ಇವುಗಳಲ್ಲಿ ಅತೀ ಸುಂದರವಾದ, ಹಾಗೆಯೇ ಅತೀ ವಿರಳವಾದ ನಮ್ಮ ಕರುನಾಡಿನ ಸಂಪತ್ತಾಗಿದೆ. ಸ್ಥಳೀಯರಿಗೆ ಪರಿಚಯವಿರುವ ಸಾಮಾನ್ಯವಾಗಿ ಕಂಡುಬರುವ ಪ್ರಭೇದ ಸ್ಟ್ರೊಬಿಲಾಂತಸ್‌ ಕುಂತಿಯಾನ. ನೀಲಕುರುಂಜಿ ಗಿಡಗಳು ದಕ್ಷಿಣಭಾಗದ ಪಶ್ಚಿಮ ಘಟ್ಟಗಳಲ್ಲಿ ಅಂದರೆ, ಕೊಡಗು, ನೀಲಗಿರಿ ಬೆಟ್ಟಗಳಲ್ಲಿ, ಪಳನಿ ಬೆಟ್ಟಗಳಲ್ಲಿ ಮತ್ತು ಅಣ್ಣಾಮಲೈ ಪರ್ವತಗಳಲ್ಲಿ ಕಂಡುಬರುತ್ತದೆ.

ಡಾ| ಜೋಮಿ ಅಗಸ್ಟಿನ್‌ ಎಂಬ ಸ್ಟ್ರೊಬಿಲಾಂತಸ್‌ ಸಂತ: ಮೂಲತಃ ಕೇರಳ ರಾಜ್ಯದ ಕೋಟ್ಟಾಯಮ್‌ ಜಿಲ್ಲೆಯ ಪಾಲ ಎಂಬ ಪ್ರದೇಶದವರಾದ ಡಾ| ಜೋಮಿ ಅಗಸ್ಟಿನ್‌ ಅವರು 1991ರಲ್ಲಿ ಸಸ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸಂಶೋಧನ ವೃತ್ತಿ ಜೀವನವನ್ನು ಆರಂಭಿಸಿದರು. ತನ್ನ ಜೀವನದ 25 ವರ್ಷಗಳನ್ನು ಸ್ಟ್ರೊಬಿಲಾಂತಸ್‌ ಸಂಶೋಧನೆಯಲ್ಲಿ ತೊಡಗಿಸಿ­ಕೊಂಡ ತಪಸ್ವಿ ಇವರು. ಸ್ಟ್ರೊಬಿಲಾಂತಸ್‌ ಜೋಮಿಯೈ ಎಂಬ ನೀಲ­ಕುರುಂಜಿಯ ಪ್ರಭೇದ ಇವರ ಹೆಸರಿನಿಂದಲೆ ಕರೆಯಲಾ­ಗುತ್ತದೆ.  ಸ್ಥಳೀಯರಿಗೆ, ನೀಲಕುರುಂಜಿಯನ್ನು ನೋಡುವ ಆಸಕ್ತರಿಗೆ ಸೆಪ್ಟಂಬರ್‌ ಮತ್ತು ಅಕ್ಟೋಬರ್‌ ತಿಂಗಳ ಒಳಗೆ ಅರಣ್ಯ ಇಲಾಖೆಯ ನಿರ್ದೇಶನ ಪಾಲಿಸಿಕೊಂಡು ಭೇಟಿ ನೀಡಬಹುದು.

Advertisement

ಚೇತನಾ ಬಡೇಕರ್‌, ಶೈಕ್ಷಣಿಕ ನಿರ್ದೇಶಕಿ, ಚಿರ ಎಜುಕೇಶನಲ್‌ ಟ್ರಸ್ಟ್‌

Advertisement

Udayavani is now on Telegram. Click here to join our channel and stay updated with the latest news.

Next