Advertisement

ಉಕ ಹಳ್ಳಿ ದತ್ತು ಪಡೆದು ಅಭಿವೃದ್ಧಿ : ನೀನಾಸಂ ಸತೀಶ 

04:59 PM Sep 02, 2018 | |

ಧಾರವಾಡ: ಉತ್ತರ ಕರ್ನಾಟಕದ ಕುಗ್ರಾಮವೊಂದನ್ನು ದತ್ತು ಪಡೆದು ಪರಿಪೂರ್ಣ ಅಭಿವೃದ್ಧಿ ಮಾಡುತ್ತೇನೆ ಎಂದು ಚಿತ್ರನಟ ನೀನಾಸಂ ಸತೀಶ ಸುದ್ದಿಗೋಷ್ಠಿಯಲ್ಲಿ ಹೇಳಿದರು. ನನಗೆ ಉತ್ತರ ಕರ್ನಾಟಕದ ಬಗ್ಗೆ ಮೊದಲಿಂದಲೂ ಅಭಿಮಾನವಿದೆ. ನನ್ನ ಚಿತ್ರಗಳು ಈ ಭಾಗದಲ್ಲಿ ಚೆನ್ನಾಗಿ ಪ್ರದರ್ಶನ ಕಾಣುತ್ತಿವೆ. ನಾನು ಈ ಭಾಗದಲ್ಲಿನ ಹಳ್ಳಿಯೊಂದನ್ನು ಹುಡುಕಿ, ಅದನ್ನು ಪರಿಪೂರ್ಣ ಅಭಿವೃದ್ಧಿ ಮಾಡುವುದಕ್ಕೆ ಪ್ರಯತ್ನಿಸುತ್ತೇನೆ. ಪ್ರಸಂಗ ಬಂದರೆ ಜನರಿಂದ ಹಣ ಸಂಗ್ರಹಿಸಿಯಾದರೂ ಅಭಿವೃದ್ಧಿ ಮಾಡುತ್ತೇನೆ ಎಂದರು.

Advertisement

ಕಲೆಕ್ಷನ್‌ ಜೋರಿದೆ: ‘ಅಯೋಗ್ಯ’ ಚಿತ್ರವು 25 ದಿನ ಪೂರ್ಣಗೊಳಿಸಿದ್ದು, ಒಂದೇ ವಾರದಲ್ಲಿ ಲವ್‌ ಇನ್‌ ಇಂಡಿಯಾ ಚಿತ್ರ ಮಾಡಿದಷ್ಟು ಕಲೆಕ್ಷನ್‌ನ್ನು (12.82 ಕೋಟಿ) ಅಯೋಗ್ಯ ಚಿತ್ರ ಮಾಡಿದೆ. ಸಮಾಜಮುಖೀಯಾದ ಹಾಗೂ ಸಮಾಜ ಒಪ್ಪುವಂತ ಚಿತ್ರ ಇದಾಗಿದೆ. ಅಯೋಗ್ಯ ಚಿತ್ರದಲ್ಲಿ ಬಚ್ಚೇಗೌಡರ ಒಂದು ಪಾತ್ರ ಬರುತ್ತದೆ. ಅಂಥ ಬಚ್ಚೇಗೌಡರು
ಇಂದಿಗೂ ಹಳ್ಳಿಗಳಲ್ಲಿ ಇದ್ದಾರೆ. ಸಮಾಜಮುಖೀಯಾದ ಸಿನಿಮಾಗಳು ಬಂದು ಯಶಸ್ವಿ ಪ್ರದರ್ಶನ ಕಂಡಾಗ ಮಾತ್ರ ಅವುಗಳಿಗೆ ನಿಜವಾದ ಯಶಸ್ಸು ಸಿಗುತ್ತದೆ. ಇಂದು ಕನ್ನಡ ಚಿತ್ರರಂಗದಲ್ಲೂ ಪರಭಾಷೆ ಚಿತ್ರಗಳಿಗೆ ಸೆಡ್ಡು ಹೊಡೆಯುವಂತ ಕಥೆಗಳು ಬರುತ್ತಿವೆ ಎಂದರು.

ತಮಿಳು ಚಿತ್ರರಂಗದಲ್ಲಿ ನನಗೊಂದು ಅವಕಾಶ ಬಂದಿದ್ದು, ಅದಕ್ಕೆ ನಾನು ಸಹಿ ಕೂಡ ಹಾಕಿದ್ದೇನೆ. ತಮಿಳು ಚಿತ್ರರಂಗದಲ್ಲಿ ಕನ್ನಡದ ಒಂದು ಮೊಟ್ಟೆಯ ಕಥೆ, ರಾಜಕುಮಾರದಂಥ ಅನೇಕ ಸಿನಿಮಾಗಳ ಬಗ್ಗೆ ಚರ್ಚೆ ಆಗುತ್ತಿದೆ. ಡಬ್ಬಿಂಗ್‌ಗೋಸ್ಕರ ಸಿನಿಮಾ ಮಾಡುವುದು ಸರಿಯಲ್ಲ. ಇತ್ತೀಚೆಗೆ ಡಬ್ಬಿಂಗ್‌ ಬಗ್ಗೆ ತೀವ್ರ ಚರ್ಚೆಯಾಗುತ್ತಿದ್ದು, ಈ ಡಬ್ಬಿಂಗ್‌ನಿಂದ ಭಾಷೆ ಹಾಳಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಚಿತ್ರದ ನಿರ್ದೇಶಕ ಮಹೇಶಕುಮಾರ ಉಪತಸ್ಥಿತರಿದ್ದರು.

ಪದ್ಮಾ ಚಿತ್ರ ಮಂದಿರಕ್ಕೆ ಭೇಟಿ
ಅಯೋಗ್ಯ ಚಿತ್ರ ಪ್ರದರ್ಶನ ಕಾಣುತ್ತಿರುವ ಪದ್ಮ ಚಿತ್ರಮಂದಿರಕ್ಕೆ ಭೇಟಿಕೊಟ್ಟು ಸ್ವಲ್ಪ ಹೊತ್ತು ಅಭಿಮಾನಿಗಳೊಂದಿಗೆ ಕಾಲ ಕಳೆದ ನಟ ಸತೀಶ, ಧಾರವಾಡದ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ನೂರಾರು ಯುವ ಅಭಿಮಾನಿಗಳು ನಟ ಸತೀಶ ಅವರನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿದುಕೊಂಡರು. ಕೆಲವರು ಸೆಲ್ಫಿಗೆ ಮುಗಿಬಿದ್ದರೆ, ಇನ್ನು ಕೆಲವರು ನಟ ಸತೀಶಗೆ ಜೈ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next