Advertisement

ಅಗತ್ಯವೇ? ಆವಶ್ಯಕತೆಯೇ? ಶಾಲೆಯಲ್ಲಿ ಶ್ರವಣ ಸಾಮರ್ಥ್ಯ ತಪಾಸಣೆ

10:42 PM Sep 21, 2019 | Sriram |

ಮನುಷ್ಯನ ಭಾಷೆ ಮತ್ತು ಸಂಭಾಷಣೆಯ ಬೆಳವಣಿಗೆಯಲ್ಲಿ ಶ್ರವಣ ಶಕ್ತಿಯು ಬಹಳ ಪ್ರಾಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ವ್ಯಕ್ತಿಯು ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡರೆ ಸಂವಹನವು ತೀವ್ರವಾದ ಪ್ರತಿಕೂಲ ಪರಿಣಾಮವನ್ನು ಎದುರಿಸುತ್ತದೆ. ಶ್ರವಣ ಶಕ್ತಿಯನ್ನು ಕಳೆದುಕೊಂಡವರು ನಿಧಾನವಾಗಿ ಸಾಮಾಜಿಕ ಪಾಲುದಾರಿಕೆಯಿಂದ ಹಿಂದೆ ಸರಿಯುತ್ತಾರೆ ಮತ್ತು ಇದು ನಿಧಾನವಾಗಿ ಖನ್ನತೆಯನ್ನು ಉಂಟು ಮಾಡುತ್ತದೆ. ಜನಿಸಿ ಸ್ವಲ್ಪ ಕಾಲದ ಬಳಿಕ ಶ್ರವಣ ಶಕ್ತಿ ಉಂಟಾಗುವುದರಿಂದ ಮಕ್ಕಳು ಆ ಬಳಿಕದ ಬದುಕಿನಲ್ಲಿ ಮಾತುಗಾರಿಕೆ ಮತ್ತು ಅರ್ಥ ಮಾಡಿಕೊಳ್ಳುವುದರಲ್ಲಿ ಅಪಾರ ತೊಂದರೆಯನ್ನು ಅನುಭವಿಸುತ್ತಾರೆ. ಇದು ಕೇಳಿಸುವಿಕೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಮಗುವಿನ ಒಟ್ಟಾರೆ ಬೆಳವಣಿಗೆ ಮತ್ತು ಪ್ರಗತಿಯ ಮೇಲೂ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಮಗುವಿನ ಭವಿಷ್ಯವನ್ನು ರೂಪಿಸುವಲ್ಲಿ ಶಾಲೆ ಒಂದು ನಿರ್ಣಾಯಕ ಸ್ಥಳ ಮತ್ತು ಪ್ರಮುಖ ಘಟ್ಟವಾಗಿದೆ. ಬಗೆಹರಿಯದ ಶ್ರವಣ ಸಂಬಂಧಿ ತೊಂದರೆಗಳಿಗೆ ಮಕ್ಕಳು ಈ ಹಂತದಲ್ಲಿ ಒಳಗಾಗುವುದು ಮಗುವಿನ ಭವಿಷ್ಯದ ದೃಷ್ಟಿಯಿಂದ ಮಾರಕವಾಗಬಲ್ಲುದು. ಆದ್ದರಿಂದ ಶ್ರವಣ ಶಕ್ತಿಯ ಪರೀಕ್ಷೆಯು ಬದುಕಿನ ವಿವಿಧ ಘಟ್ಟಗಳಲ್ಲಿ ತೀರಾ ಅಗತ್ಯವಾಗಿದೆ.

Advertisement

ಕಿವಿಗಳು ಆಗಾಗ ಬಂದ್‌ ಆಗುವ ಅನುಭವ, ಕಿವಿನೋವು ಮತ್ತು ಕಿವಿ ಸೋರು ವುದು ಶಾಲೆಗೆ ಹೋಗುವ ಮಕ್ಕಳು ಆಗಾಗ ಎದುರಿಸುವ ಕಿವಿ ಸಂಬಂಧಿ ಸಮಸ್ಯೆಗಳು. ಇವು ಶಾಲೆಗೆ ಹೋಗುವ ವಯಸ್ಸಿನ ಮಕ್ಕಳಲ್ಲಿ ಸಹಜ ಎಂಬುದಾಗಿ ಹೆತ್ತವರು ಭಾವಿಸುವುದರಿಂದ ಆ ಬಗ್ಗೆ ಲಕ್ಷ್ಯ ವಹಿಸುವುದು ಕಡಿಮೆ. ಹಲವು ಬಾರಿ ಯಾವುದಾದರೂ ಕ್ರಿಮಿಕೀಟ ಕಿವಿಯೊಳಗೆ ಹೊಕ್ಕು ಸೋಂಕಿಗೆ ಕಾರಣವಾಗಬಹುದು. ಆದರೆ ಮಗು ಕಿವಿನೋವು, ಕಿವಿಸೋರುವುದು ಅಥವಾ ಕಿವಿ ಕೇಳಿಸದೆ ಇರುವ ಬಗ್ಗೆ ಹೇಳದೆ ಇದ್ದರೆ ಇದು ಗಮನಕ್ಕೆ ಬಾರದೆ ಇರುವ ಸಾಧ್ಯತೆಯೇ ಹೆಚ್ಚು. ಕಿವಿಗೆ ಸಂಬಂಧಿಸಿದ ಈ ಸಮಸ್ಯೆಗಳನ್ನು ಸೂಕ್ತ ಕ್ರಮಗಳ ಮೂಲಕ ಪರಿಹರಿಸದೆ ಇದ್ದಲ್ಲಿ ಮುಂದೆ ಅದು ಶಾಶ್ವತ ಕಿವುಡು, ಕಳಪೆ ಶಾಲಾ ಫ‌ಲಿತಾಂಶದಂತಹ ಗಂಭೀರ ಪರಿಣಾಮಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇದ್ದೇ ಇದೆ. ಮಾತ್ರವಲ್ಲದೆ, ಸದ್ದಿನಿಂದ ಕೂಡಿದ ವಾತಾವರಣದಲ್ಲಿ ಶಾಬ್ದಿಕ ಮಾಹಿತಿಗಳನ್ನು ಸಂಸ್ಕರಿಸುವ ಸಮಸ್ಯೆಯನ್ನು ಉಂಟು ಮಾಡಿ ಭವಿಷ್ಯದಲ್ಲಿ ಶಾಬ್ದಿಕ ಮಾಹಿತಿ ಸಂಸ್ಕರಣೆ ಅನಾರೋಗ್ಯಕ್ಕೂ ಕಾರಣವಾಗಬಲ್ಲುದು. ಈ ತೊಂದರೆಗಳನ್ನು ಹೊಂದಿರುವ ಮಕ್ಕಳು ವರ್ತನಾತ್ಮಕ ಸಮಸ್ಯೆಗಳಿಗೆ ತುತ್ತಾಗಬಹುದು, ಸಾಮಾಜಿಕವಾಗಿ ಬೆರೆಯದೆ ಏಕಾಕಿತನಕ್ಕೆ ಒಳಗಾಗಬಹುದು.

ಯಾರಲ್ಲಿ ತಪಾಸಣೆ
ಮಾಡಿಸಿಕೊಳ್ಳಬೇಕು?
ವ್ಯಕ್ತಿಗಳ ಶ್ರವಣ ಸಾಮರ್ಥ್ಯವನ್ನು ಪರೀಕ್ಷಿಸಿ ಸರಿಯಾಗಿದೆಯೇ, ದೋಷಗಳಿವೆಯೇ ಎಂಬುದನ್ನು ಪತ್ತೆಹಚ್ಚುವುದಕ್ಕೆ ಬೇಕಾದ ಪ್ರಾವೀಣ್ಯವನ್ನು ಆಡಿಯಾಲಜಿಸ್ಟ್‌ ಹೊಂದಿರುತ್ತಾರೆ. ಮಕ್ಕಳಲ್ಲಿ ಕಿವಿ ಕೇಳಿಸುವುದಕ್ಕೆ ಸಂಬಂಧಿಸಿದ ಯಾವುದಾದರೂ ಸಮಸ್ಯೆಗಳು ಇವೆಯೇ ಎಂಬುದನ್ನು ಪತ್ತೆ ಹಚ್ಚುವುದಕ್ಕಾಗಿ ವಾರ್ಷಿಕವಾಗಿ ನಿಯಮಿತ ಅವಧಿಗಳಲ್ಲಿ ಶ್ರವಣ ಶಕ್ತಿ ತಪಾಸಣೆಯನ್ನು ನಡೆಸಬೇಕು. ಶಾಲೆಗೆ ಹೋಗುವ ಮಗುವಿಗೆ ಕಿವಿ ಕೇಳಿಸುವುದಕ್ಕೆ ಸಂಬಂಧಿಸಿದ ಯಾವುದಾದರೂ ತೊಂದರೆಗಳು ಇದ್ದಲ್ಲಿ ಅದು ಮಗುವಿನ ಮಾತಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುವುದಕ್ಕೆ ಕೂಡ ಕಾರಣವಾಗಬಹುದು. ಆದ್ದರಿಂದ ಶ್ರವಣ ಸಾಮರ್ಥ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಗುರುತಿಸುವುದಕ್ಕೆ, ಅವು ಗಮನಕ್ಕೆ ಬಾರದೆ ಮುಂದೆ ಸಂಕೀರ್ಣ ಸಮಸ್ಯೆಗಳು ಉಂಟಾಗುವುದರಿಂದ ಪಾರಾಗುವುದಕ್ಕಾಗಿ ಎಲ್ಲ ಶಾಲೆಗಳಲ್ಲಿಯೂ ಮಕ್ಕಳ ಶ್ರವಣ ಸಾಮರ್ಥ್ಯ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಲೇ ಬೇಕಾಗಿದೆ.

ಶ್ರವಣ ಸಾಮರ್ಥ್ಯ ಪರೀಕ್ಷೆಯಲ್ಲಿ ಯಾವುದೇ ಮಗುವಿನಲ್ಲಿ ಕಿವಿ ಕೇಳಿಸುವುದಕ್ಕೆ ಸಂಬಂಧಿಸಿದ ದೋಷಗಳು ಇರುವುದು ಕಂಡುಬಂದಲ್ಲಿ ಕೂಲಂಕಷ ತಪಾಸಣೆಗಾಗಿ ಶಿಫಾರಸು ಮಾಡಲಾಗುತ್ತದೆ. ಈ ಪರೀಕ್ಷೆಯನ್ನು ಆಡಿಯಾಲಜಿಸ್ಟ್‌ ಸುಸಜ್ಜಿತವಾದ ಆಡಿಯಾಲಜಿಕಲ್‌ ಕೊಠಡಿಯಲ್ಲಿ ನಡೆಸುತ್ತಾರೆ.

ಯಾರು ಮುಂದೆ ಬರಬೇಕು?
ಮಕ್ಕಳಲ್ಲಿ ಕಿವಿ ಕೇಳಿಸುವುದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಿ ಅಗತ್ಯವಾದ ಚಿಕಿತ್ಸೆ ಕೊಡಿಸುವಲ್ಲಿ ಹೆತ್ತವರ ಮತ್ತು ಶಿಕ್ಷಕ-ಶಿಕ್ಷಕಿಯರ ಸಮಾನ ಹೊಣೆಗಾರಿಕೆ ಇದೆ. ಶ್ರವಣ ದೋಷ ಹೊಂದಿರುವ ಮಕ್ಕಳನ್ನು ಆದಷ್ಟು ಶೀಘ್ರವಾಗಿ ಗುರುತಿಸಿ ಸೂಕ್ತವಾದ ನಿರ್ವಹಣೆ ಮತ್ತು ಚಿಕಿತ್ಸೆಯನ್ನು ಒದಗಿಸುವುದು ಅತ್ಯಂತ ಅಗತ್ಯವಾಗಿದೆ. ಶ್ರವಣ ದೋಷಗಳನ್ನು ಆದಷ್ಟು ಬೇಗನೆ ಪತ್ತೆಹಚ್ಚುವುದರಿಂದ ಅವು ಗಂಭೀರ ಸ್ವರೂಪ ತಾಳುವುದನ್ನು ತಡೆಯಬಹುದು.

Advertisement

ತಂದೆ, ತಾಯಿಯರ ಕರ್ತವ್ಯ ಮಕ್ಕಳು ದೀರ್ಘ‌ಕಾಲಿಕವಾದ ಕಿವಿಸೋಂಕು, ಕಿವಿಗೆ ಸಂಬಂಧಿಸಿದ ಯಾವುದೇ ತೊಂದರೆಗಳಿಗೆ ಒಳಗಾದ ಬಳಿಕ ಹೆತ್ತವರು ಅವರ ಶೈಕ್ಷಣಿಕ ನಿರ್ವಹಣೆ, ವರ್ತನಾತ್ಮಕ ಬದಲಾವಣೆಗಳ ಬಗ್ಗೆ ಸೂಕ್ಷ್ಮವಾಗಿ ಗಮನ ಹರಿಸಬೇಕು. ವಿಭಿನ್ನ ಪರಿಸರಗಳಲ್ಲಿ ಮಗುವಿನ ಕಾರ್ಯನಿರ್ವಹಣೆಯನ್ನು ಹೆತ್ತವರು ಸೂಕ್ಷ್ಮವಾಗಿ ಗಮನಿಸುವುದು ಬಹಳ ಮುಖ್ಯವಾಗಿರುತ್ತದೆ. ಟ್ರಾಫಿಕ್‌ ಅಥವಾ ಕುಟುಂಬದ ಯಾವುದಾದರೂ ಕಾರ್ಯಕ್ರಮದಲ್ಲಿ ಹೆಚ್ಚು ಜನರು ಸೇರಿರುವಂತಹ ಸನ್ನಿವೇಶಗಳು ಮಗು ಸದ್ದಿಗೆ ತೋರಿಸುವ ಪ್ರತಿಸ್ಪಂದನೆಯ ಮೇಲೆ ಪರಿಣಾಮ ಬೀರುವುದೇ, ಮಾತಿನ ಮೂಲಕ ನೀಡುವ ಯಾವುದೇ ಸೂಚನೆ, ಆದೇಶಕ್ಕೆ ಮಗು ಪ್ರತಿಸ್ಪಂದಿಸುತ್ತಿದೆಯೇ ಇಲ್ಲವೇ ಎಂಬ ಅಥವಾ ಮಗುವಿನ ಶ್ರವಣ ಶಕ್ತಿಯಲ್ಲಿ ಗಮನಕ್ಕೆ ಬರುವ ಯಾವುದೇ ಬದಲಾವಣೆಗಳ ಬಗ್ಗೆ ಹೆತ್ತವರು ಗಮನ ಹೊಂದಿರಬೇಕು. ಕಿವಿ ಕೇಳಿಸುವುದಕ್ಕೆ ಸಂಬಂಧಿಸಿದ ಯಾವುದೇ ದೋಷದಿಂದ ಮಗು ಗೆಳೆಯ ಗೆಳತಿಯರ ಸಂಗದಿಂದ, ಸಮುದಾಯದಲ್ಲಿ ಭಾಗವಹಿಸುವುದರಿಂದ ದೂರ ಉಳಿಯುತ್ತದೆಯೇ ಎಂಬುದರ ಬಗ್ಗೆ ಹೆತ್ತವರು ಸೂಕ್ಷ್ಮವಾದ ಗಮನವನ್ನು ಹೊಂದಿರಬೇಕು.

ಶಿಕ್ಷಕರ ಸೂಕ್ತ ಗಮನಕ್ಕೆ
ತರಗತಿಯಲ್ಲಿ ಏಕಾಗ್ರತೆಯ ಕೊರತೆ, ಓದಿ-ಬರೆಯುವ ಸಂದರ್ಭದಲ್ಲಿ ಸೂಚನೆಗಳನ್ನು ಪಾಲಿಸಲು ವಿಫ‌ಲವಾಗುವುದು, ಕಳಪೆ ಶೈಕ್ಷಣಿಕ ಕ್ಷಮತೆ, ಕಿವಿನೋವು ಅಥವಾ ಕಿವಿ ಸೋರುವಂತಹ ಸಮಸ್ಯೆಗಳನ್ನು ಹೊಂದಿರುವ ಮಕ್ಕಳನ್ನು ಗುರುತಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಲ್ಲಿ ಶಿಕ್ಷಕರ ಪಾತ್ರ ಪ್ರಧಾನವಾಗಿರುತ್ತದೆ.

ಶ್ರವಣ ಸಾಮರ್ಥ್ಯ ಹೊಂದಿರುವ ಮಕ್ಕಳನ್ನು ಗುರುತಿಸಿ ಆಡಿಯಾಲಜಿಸ್ಟ್‌ ಅಥವಾ ಇಎನ್‌ಟಿ ಸ್ಪೆಶಲಿಸ್ಟ್‌ ಬಳಿ ತಪಾಸಣೆಗೆ ಕಳುಹಿಸಿಕೊಡುವುದು ಅಥವಾ ಶಾಲೆಯಲ್ಲಿ ಶ್ರವಣ ಸಾಮರ್ಥ್ಯ ಪರೀಕ್ಷೆಯನ್ನೂ ಒಳಗೊಂಡ ವಾರ್ಷಿಕ ಆರೋಗ್ಯ ತಪಾಸಣೆಯನ್ನು ನಿಯಮಿತವಾಗಿ ಹಮ್ಮಿಕೊಳ್ಳುವುದು ಯಾವುದೇ ಮಗುವಿನಲ್ಲಿ ಶ್ರವಣ ಸಾಮರ್ಥ್ಯ ಸಂಬಂಧಿ ದೋಷಗಳನ್ನು ಗುರುತಿಸುವುದಕ್ಕೆ ಪ್ರಯೋಜನಕಾರಿಯಾಗಿದೆ. ಸಮಸ್ಯೆ ಉಂಟಾಗದಂತೆ ತಡೆಯುವುದೇ ಅದು ಬಂದ ಬಳಿಕ ಚಿಕಿತ್ಸೆ ನೀಡುವುದಕ್ಕಿಂತ ಉತ್ತಮ. ಆದ್ದರಿಂದ ಶ್ರವಣ ಶಕ್ತಿ ಸಂಬಂಧಿಯಾದ ಸಮಸ್ಯೆಯನ್ನು ಆದಷ್ಟು ಬೇಗನೆ ಗಮನಿಸಿ, ಗುರುತಿಸಿ ಸೂಕ್ತವಾದ ಚಿಕಿತ್ಸೆಯನ್ನು ಒದಗಿಸಿದರೆ ಗುಣಪಡಿಸುವುದು ಸಾಧ್ಯ. ಸರಿಯಾದ ಸಮಯದಲ್ಲಿ ಕಿವಿನೋವು ಅಥವಾ ಕಿವಿ ಸೋರುವುದನ್ನು ಗುರುತಿಸಿದರೆ ಅದು ಶಾಶ್ವತವಾದ ಶ್ರವಣ ಸಂಬಂಧಿ ದೋಷಗಳಿಗೆ ಎಡೆ ಮಾಡಿಕೊಡುವುದನ್ನು ತಪ್ಪಿಸಬಹುದು.

ಶ್ರವಣ ಶಕ್ತಿ ಪರೀಕ್ಷೆ , ಸಂಬಂಧಿತ ಇತರ ಸೇವೆಗಳು ಮಣಿಪಾಲದ ಕೆಎಂಸಿ ಆಸ್ಪತ್ರೆಯ ಎಂಸಿಎಚ್‌ಪಿಯಲ್ಲಿ ರುವ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ ಮತ್ತು ಉಡುಪಿಯ ಟಿಎಂಎ ಪೈ ಆಸ್ಪತ್ರೆಯಲ್ಲಿ ಲಭ್ಯವಿವೆ.

ಪ್ರಧಾನ ಅಂಶಗಳು
– ಆರೋಗ್ಯ ತಪಾಸಣೆಯಲ್ಲಿ ಶ್ರವಣ ಶಕ್ತಿ ಪರೀಕ್ಷೆಯೂ ಒಂದು ಭಾಗವಾಗಿರಬೇಕು.
– ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಆಯಾ ಶಾಲೆಗಳು ಶ್ರವಣ ಶಕ್ತಿ ತಪಾಸಣೆಯನ್ನು ಕಡ್ಡಾಯವಾಗಿ ನಡೆಸಬೇಕು.
– ಪರಿಣತ ಆಡಿಯಾಲಜಿಸ್ಟ್‌ ಶ್ರವಣ ಶಕ್ತಿ ತಪಾಸಣೆಯನ್ನು ನಡೆಸಬೇಕು.
– ಕಿವಿ ನೋವು ಅಥವಾ ಸೋರುವ ಸಮಸ್ಯೆ ಕಂಡುಬಂದಲ್ಲಿ ಇಎನ್‌ಟಿ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯಬೇಕು.
– ಕಿವಿ ನೋವು, ಸೋರುವ ಸಮಸ್ಯೆ ಹೇಳಿಕೊಳ್ಳುವ ಮಕ್ಕಳ ಬಗ್ಗೆ ಹೆತ್ತವರು ಮತ್ತು ಶಿಕ್ಷಕರು ನಿರ್ಲಕ್ಷ್ಯ ವಹಿಸದೆ ಸರಿಯಾದ ಕಾಳಜಿ ತೆಗೆದುಕೊಳ್ಳಬೇಕು. ಇದಲ್ಲದೆ ಮಕ್ಕಳ ಒಟ್ಟಾರೆ ಶೈಕ್ಷಣಿಕ ಮತ್ತು ವರ್ತನಾತ್ಮಕ ಬದಲಾವಣೆಗಳು, ನಿರ್ವಹಣೆಯ ಬಗೆಗೂ ಎಚ್ಚರದಿಂದಿದ್ದು, ಅದಕ್ಕೆ ಕಿವಿ ಸಂಬಂಧಿ ಸಮಸ್ಯೆಗಳು ಕಾರಣವೇ ಎಂಬ ಬಗ್ಗೆ ತಿಳಿದು ಸೂಕ್ತ ಕ್ರಮಗಳಿಗೆ ಮುಂದಾಗಬೇಕು.

-ಭಾರ್ಗವಿ ಪಿ.ಜಿ. ,
ಸಹಾಯಕ ಪ್ರೊಫೆಸರ್‌ – ಸೀನಿಯರ್‌
ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ
ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next