ಬೆಂಗಳೂರು: ತಾಂತ್ರಿಕ ಕ್ಷೇತ್ರ ಇಂದು ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಜ್ಞಾನ ಭಂಡಾರವೇ ನಮ್ಮ ಅಂಗೈಗೆ ಸಿಗುವಂತಾಗಿದೆ. ಜ್ಞಾನದ ಹಸಿವನ್ನು ಇಂಗಿಸಿಕೊಳ್ಳುವ ನಿಟ್ಟಿನಲ್ಲಿ ತಾಂತ್ರಿಕ ಕ್ಷೇತ್ರವನ್ನು ಹೆಚ್ಚು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಹೇಳಿದರು.
ನಿರುತ್ತರ ಪಬ್ಲಿಕೇಷನ್ಸ್ ಭಾನುವಾರ ಜಯನಗರದ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ಸಿ.ಆರ್. ಗೋಪಾಲ್ ಅವರ “ಸಮುದಾಯ ಸಂಘಟನೆ’ ಸೇರಿದಂತೆ ನಾಲ್ಕು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಈ ಹಿಂದೆ ಕೃತಿ ರಚಿಸಿ ಪ್ರಕಟಿಸುವುದು ಸವಾಲಿನ ಕೆಲಸವಾಗಿತ್ತು. ಒಂದು ಕೃತಿ ಪುಸ್ತಕವಾಗಿ ಹೊರಬರಲು ಹಲವು ವರ್ಷಗಳೇ ಬೇಕಾಗುತ್ತಿತ್ತು. ಆದರೆ ಪರಿಸ್ಥಿತಿ ಬದಲಾಗಿದೆ. ಮನಸ್ಸು ಮಾಡಿದರೆ ಒಂದು ರಾತ್ರಿಯಲ್ಲಿ ಬರೆದು ಪೂರ್ಣಗೊಳಿಸಿದ ಕೃತಿಯನ್ನು, ಮರುದಿನವೇ ಪ್ರಕಟಿಸಬಹುದಾದಷ್ಟು ತಾಂತ್ರಿಕ ಜಗತ್ತು ಬೆಳೆದಿದೆ ಎಂದು ತಿಳಿಸಿದರು.
ಕಾಲ ಬದಲಾದಂತೆ ತಾಂತ್ರಿಕ ಕ್ಷೇತ್ರವೂ ಬದಲಾಗುತ್ತಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲೂ ಹೊಸ ಮಾದರಿಯ ಪರಿಕರಗಳ ಪರಿಚಯವಾಗಿದೆ. ಒಂದು ಪುಟ್ಟ ಸಾಧನ ಇಂದಿನ ವರ್ತಮಾನದ ಒಳ ನೋಟಗಳನ್ನೇ ಬಿಚ್ಚಿಡುವ ಸಾಮರ್ಥ್ಯ ಹೊಂದಿರುತ್ತದೆ. ವಿಶ್ವದ ಆಗು ಹೋಗುಗಳನ್ನು ಕ್ಷಣ ಮಾತ್ರದಲ್ಲಿ ನಮ್ಮ ಮುಂದಿ ದಿಡುವ ಶಕ್ತಿ ಅದಕ್ಕಿರುತ್ತದೆ ಎಂದು ವಿವರಿಸಿದರು.
ವಕೀಲ ಬಿ.ಸಿ.ಪ್ರಭಾಕರ್, ಬೆಂಗಳೂರು ವಿವಿ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ.ಕೋದಂಡರಾಮ, ಪ್ರೊ.ಕೆ.ಭೈರಪ್ಪ, ಡಿ.ಆರ್.ನಾಗರಾಜ್, ಎಸ್.ಎನ್. ಗೋಪಿನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.