Advertisement

ಸೇನೆಯನ್ನು ಸೋಲಿಸಲಾಗದು; ಆಜಾದಿ ಯಾವತ್ತೂ ಸಿಗಲಾರದು

11:12 AM May 11, 2018 | Team Udayavani |

ಹೊಸದಿಲ್ಲಿ: “ಕಾಶ್ಮೀರದ ಸ್ವಾತಂತ್ರ್ಯದ ಗುರಿ ಕೇವಲ ಕನ್ನಡಿಯೊಳಗಿನ ಗಂಟಾಗಿದ್ದು, ಅನವಶ್ಯಕವಾಗಿ ಇಂಥ ರಕ್ತಸಿಕ್ತ ಹೋರಾಟಗಳಲ್ಲಿ ಭಾಗಿಯಾಗುವ ಎಲ್ಲರನ್ನೂ ಸೇನೆ ಖಂಡಿತವಾಗಿ ಮಟ್ಟ ಹಾಕುತ್ತದೆ…” ಯೌವ್ವನದ ಬಿಸಿ ರಕ್ತದ ಆವೇಶದಲ್ಲಿ, ದಿಕ್ಕು ತಪ್ಪಿಸುವವರ ಮಾತು ಕೇಳಿ, ಬದುಕಿನ ಗುರಿ ಮರೆತು ಬಂದೂಕು ಹಿಡಿಯಲು ಸಾಲು ಸಾಲಾಗಿ ಮುನ್ನುಗ್ಗುತ್ತಿರುವ ಕಾಶ್ಮೀರಿ ಯುವಕರಿಗೆ ಇಂಥದ್ದೊಂದು ಖಡಕ್‌ ಎಚ್ಚರಿಕೆಯನ್ನು ಭಾರತೀಯ ಸೇನಾ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ರವಾನಿಸಿದ್ದಾರೆ.

Advertisement

ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, “ಸ್ವಾತಂತ್ರ್ಯ ಅಥವಾ ಪ್ರತ್ಯೇಕತೆ ಹೆಸರಿನಲ್ಲಿ ಸಿಡಿದೇಳುವ ಪ್ರತಿಯೊಬ್ಬರನ್ನೂ ಸೇನೆ ಮಟ್ಟಹಾಕುತ್ತದೆ. ಸೇನೆಯನ್ನು ಮಣಿಸುವುದು ಉಗ್ರರಿಂದ ಸಾಧ್ಯವಿಲ್ಲದ ಮಾತು. ತಮ್ಮ ಕನಸುಗಳು ಎಂದಿಗೂ ಈಡೇರುವುದಿಲ್ಲ ಎಂಬುದು ಶತಸಿದ್ಧವಾಗಿರುವಾಗ ಅನವಶ್ಯಕವಾಗಿ ರಕ್ತದ ಹಾದಿಯನ್ನೇ ಯುವಕರು ಏಕೆ ಆಯ್ಕೆ ಮಾಡಿಕೊಳ್ಳಬೇಕು” ಎಂದು ಯುವಮನಸ್ಸುಗಳನ್ನು ಪ್ರಶ್ನಿಸಿದ್ದಾರೆ.

“ನನ್ನೀ ಮಾತುಗಳು ಯುವಕರಿಗೆ ಸಿಟ್ಟು ತರಿಸಬಹುದು. ಆದರೆ, ಸೇನೆಯ ವಿರುದ್ಧ ದಂಗೆ ಏಳುವುದರಿಂದ, ಕಲ್ಲುಗಳನ್ನು ಎಸೆಯುವುದರಿಂದ ಸಮಸ್ಯೆ ನಿವಾರಣೆಯಾಗುವುದೇ” ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಉಗ್ರ ಸಂಘಟನೆಗಳಲ್ಲಿ ಯುವಕರ ನೇಮಕಾತಿ ಆಗುತ್ತಿರುವ ಮಾಹಿತಿಯಿದೆ. ಆದರೆ, ಇದರಿಂದೇನೂ ಪ್ರಯೋಜನವಿಲ್ಲ. ಅವರ ನಿರರ್ಥಕ ಹೋರಾಟ ಫ‌ಲ ನೀಡುವುದಿಲ್ಲ” ಎಂದೂ ಹೇಳಿದ್ದಾರೆ.

ಮೆಹಬೂಬಾ ಪ್ರಸ್ತಾವ‌ಕ್ಕೆ ಬಿಜೆಪಿ ವಿರೋಧ
ರಮ್ಜಾನ್‌ ತಿಂಗಳಲ್ಲಿ ಹಾಗೂ ಅಮರನಾಥ ಯಾತ್ರೆಯ ಅವಧಿಯಲ್ಲಿ ಕದನ ವಿರಾಮ ಘೋಷಿಸುವ ಬಗ್ಗೆ ಮಾತುಕತೆ ನಡೆಸಬೇಕು ಎಂದು ಜಮ್ಮು ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಪ್ರಸ್ತಾವಕ್ಕೆ ಮಿತ್ರಪಕ್ಷ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಇದು ರಾಷ್ಟ್ರೀಯ ಹಿತಾಸಕ್ತಿಯನ್ನು ಒಳಗೊಂಡಿಲ್ಲ ಎಂದು ಅದು ಆಕ್ಷೇಪಿಸಿದೆ. ಸೇನೆಯು ಉಗ್ರರನ್ನು ಸದೆಬಡಿಯುತ್ತಿದೆ. ಈಗ ಕದನ ವಿರಾಮ ಘೋಷಿಸಿದರೆ ಸೇನೆಯ ಕೃತ್ಯಕ್ಕೆ ಅಡ್ಡಿಯುಂಟಾಗುತ್ತದೆ ಹಾಗೂ ಉಗ್ರರು ಚೇತರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ಪ್ರಸ್ತುತ ಸನ್ನಿವೇಶದಲ್ಲಿ ಕದನ ವಿರಾಮ ಉಲ್ಲಂಘನೆ ಸೂಕ್ತವಾಗಿಲ್ಲ ಎಂದು ಬಿಜೆಪಿ ಹೇಳಿದೆ. ಈ ಸಂಬಂಧ ಬಿಜೆಪಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. 

ಹಾದಿತಪ್ಪಿಸುತ್ತಿರುವುದು ಪಾಕಿಸ್ಥಾನ: ಉಗ್ರನೇ ಬಾಯ್ಬಿಟ್ಟ ಸತ್ಯ!
“ಪಾಕಿಸ್ಥಾನ‌ವು ನಮ್ಮ ಯುವಕರನ್ನು ಹಾದಿ ತಪ್ಪಿಸುತ್ತಿದೆ. ಭಾರತದ ಸೇನೆ ವಿರುದ್ಧ ಎತ್ತಿಕಟ್ಟುತ್ತಿದೆ. ಪಾಕಿಸ್ಥಾನ‌ವು ನಮ್ಮ ಜೀವದ ಜೊತೆ ಆಟವಾಡುತ್ತಿದೆ.’ ಹೀಗೆಂದು ಹೇಳಿದ್ದು ಬೇರ್ಯಾರೂ ಅಲ್ಲ. ಬಾರಾಮುಲ್ಲಾ ಉಗ್ರರ ದಾಳಿ ಆರೋಪದಲ್ಲಿ ಬಂಧಿತನಾದ ಲಷ್ಕರ್‌ ಉಗ್ರ. ಈತ ತನ್ನ ಗೆಳೆಯರು, ಕಣಿವೆ ರಾಜ್ಯದ ಯುವಕರಿಗೆ ರವಾನಿಸಿರುವ ಸಂದೇಶದ 2 ನಿಮಿಷಗಳ ವಿಡಿಯೋ ಇದೀಗ ವೈರಲ್‌ ಆಗಿದೆ. “ನನ್ನ ಹೆಸರು ಎಜಾಝ್ ಅಹ್ಮದ್‌ ಗೊಜ್ರಿ. ತಪ್ಪು ಹಾದಿಯಲ್ಲಿ ನಡೆಯುತ್ತಿರುವ, ಒಳ್ಳೆಯ ಜೀವನ, ಕುಟುಂಬವನ್ನು ತೊರೆದು ಕಾಡಿನಲ್ಲಿ ಬದುಕುತ್ತಿರುವ ನನ್ನ ಗೆಳೆಯರಿಗೆ ನಾನು ಕೇಳಿಕೊಳ್ಳುವುದಿಷ್ಟೆ- ದಯವಿಟ್ಟು ಮನೆಗೆ ವಾಪಸ್‌ ಬನ್ನಿ. ನಿಮ್ಮನ್ನು ಪಾಕಿಸ್ಥಾನ‌ ದಾರಿ ತಪ್ಪಿಸುತ್ತಿದೆ. ಅವರ ಮಾತನ್ನು ನಂಬಬೇಡಿ. ನೀವೇ ಬೇಕಿದ್ದರೆ ಸೇನಾಧಿಕಾರಿಗಳನ್ನು ಭೇಟಿ ಮಾಡಿ. ಗೆಳೆಯ ನಾಸೀರ್‌, ದಯವಿಟ್ಟು ವಾಪಸಾಗು. ನಿನ್ನ ಅಮ್ಮ ಅನಾರೋಗ್ಯದಿಂದ ಬಳಲುತ್ತಿದ್ದಾರೆ’ ಎಂದು ಹಲವು ಸ್ನೇಹಿತರ ಹೆಸರುಗಳನ್ನು ಉಲ್ಲೇಖೀಸಿ ಕರೆ ನೀಡಿರುವುದು ವಿಡಿಯೋದಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next