ಪಾಂಡವರು, ಕೌರವರೊಳಗಿನ ಯುದ್ಧವೆಂದರೆ ನಮ್ಮೊಳಗಿನ ಒಳಿತು, ಕೆಡುಕುಗಳ ನಡುವಿನ ಸಂಘರ್ಷವೆಂದೇ ಅರ್ಥ. ಇದು ನಮ್ಮ ಮನಸ್ಸಿನಲ್ಲಿ ದಿನನಿತ್ಯ ನಡೆಯುತ್ತಿರುವ ಯುದ್ಧ. ಇಂದಿನ ನಮ್ಮ ಬದುಕು ಒತ್ತಡ, ಹಿಂಸೆ, ಅಹಂಕಾರ, ವೈರತ್ವದಿಂದ ನಲುಗುತ್ತಿರುವಾಗ ನಮಗೆಲ್ಲರಿಗೂ ಸನ್ಮಾರ್ಗದಲ್ಲಿ ನಡೆಯುವಂತಾಗಲು ಗೀತೆಯ ಸಂದೇಶ ಅಗತ್ಯ ಬೇಕಾಗಿದೆ.
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ |
ಮಾಮಕಾಃ ಪಾಂಡಾವಾಶ್ಚೆçವ ಕಿಮಕುರ್ವತ ಸಂಜಯ ||
“ಹೇ ಸಂಜಯ, ಕುರುಕ್ಷೇತ್ರದಲ್ಲಿ ಯುದ್ಧಕ್ಕಾಗಿ ಸೇರಿದ ನನ್ನವರು ಹಾಗೂ ಪಾಂಡುಪುತ್ರರು ಏನು ಮಾಡಿದರು?’ ಎಂಬ ಧೃತರಾಷ್ಟ್ರನ ಪ್ರಶ್ನೆಯೊಂದಿಗೆ ಆರಂಭವಾಗುತ್ತದೆ ಶ್ರೀಮದ್ಭಗವದ್ಗೀತೆ.
ಗೀತೆ ಬೋಧನೆಯಾದದ್ದೇ ರಣರಂಗದಲ್ಲಿ. ಹಾಗೆ ನೋಡಿದರೆ ಇಂದಿನ ನಮ್ಮ ಜಗತ್ತು ಕೂಡಾ ಒಂದು ಕುರುಕ್ಷೇತ್ರವೇ. ಇಂದಿನ ನಮ್ಮ ಸಮಾಜದಲ್ಲಿ ಉಂಟಾಗುತ್ತಿರುವ ಹಲವಾರು ಸಮಸ್ಯೆಗಳಿಗೆ ಗೀತೆಯಲ್ಲಿ ಸಮಾಧಾನವನ್ನು ಕಂಡುಕೊಳ್ಳಬಹುದಾಗಿದೆ. ಇದೇ ಗೀತೆಯ ವೈಶಿಷ್ಟ್ಯ. ಗೀತೆಯು ಎಲ್ಲಾ ಕಾಲಕ್ಕೂ ಎಲ್ಲರಿಗೂ ಬೆಳಕನ್ನು ನೀಡಬಲ್ಲ ಗ್ರಂಥವಾಗಿದೆ. ಅರ್ಜುನನನ್ನು ನಿಮಿತ್ತನನ್ನಾಗಿಸಿಕೊಂಡು ಶ್ರೀಕೃಷ್ಣನು ಸಮಸ್ತ ಜನಕೋಟಿಗೆ ಬೋಧಿಸಿದ್ದಾನೆ.
ಪಾಂಡವರು, ಕೌರವರೊಳಗಿನ ಯುದ್ಧವೆಂದರೆ ನಮ್ಮೊಳಗಿನ ಒಳಿತು, ಕೆಡುಕುಗಳ ನಡುವಿನ ಸಂಘರ್ಷವೆಂದೇ ಅರ್ಥ. ಇದು ನಮ್ಮ ಮನಸ್ಸಿನಲ್ಲಿ ದಿನನಿತ್ಯ ನಡೆಯುತ್ತಿರುವ ಯುದ್ಧ. ಇಂದಿನ ನಮ್ಮ ಬದುಕು ಒತ್ತಡ, ಹಿಂಸೆ, ಅಹಂಕಾರ, ವೈರತ್ವದಿಂದ ನಲುಗುತ್ತಿರುವಾಗ ನಮಗೆಲ್ಲರಿಗೂ ಸನ್ಮಾರ್ಗದಲ್ಲಿ ನಡೆಯುವಂತಾಗಲು ಗೀತೆಯ ಸಂದೇಶ ಅಗತ್ಯ ಬೇಕಾಗಿದೆ.ಗೀತೆ ತೋರಿದ ಬದುಕಿನ ಮಾರ್ಗಗಳು ಒಂದೇ, ಎರಡೇ? ಜ್ಞಾನಯೋಗ, ಧ್ಯಾನಯೋಗ, ಕರ್ಮಯೋಗ, ಭಕ್ತಿಯೋಗ ಇತ್ಯಾದಿ. ಜನರು ತಮ್ಮ ಅಭಿರುಚಿ, ಸಾಮರ್ಥ್ಯಕ್ಕನುಗುಣವಾಗಿ ಯಾವುದೇ ಮಾರ್ಗವನ್ನು ಆಯ್ದುಕೊಳ್ಳಬಹುದು. ನಿರಾಶನಾಗಿ ಕುಳಿತ ಅರ್ಜುನನಿಗೆ ಆತನ ಕರ್ತವ್ಯದ ಬಗ್ಗೆ ತಿಳಿ ಹೇಳಿ, ಎಚ್ಚರಿಸಿ ಶ್ರೀಕೃಷ್ಣನು, ನಿನ್ನ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡು, ಫಲಾಪೇಕ್ಷೆಯ ಗೊಡವೆ ಬೇಡ ಎನ್ನುತ್ತಾನೆ. ಹೆಸರಿಗಾಗಿ, ಕೀರ್ತಿಗಾಗಿ ಕೆಲಸ ಮಾಡುವುದಾಗಲೀ ಕೆಲಸ ಮಾಡುವಲ್ಲಿ ಅತ್ಯಾಸೆ, ಸ್ವಾರ್ಥ ತೋರುವುದಾಗಲೀ ಸಲ್ಲದು. ಏಕೆಂದರೆ ಇದು ಬಂಧನಕ್ಕೆ ಕಾರಣವಾಗುತ್ತದೆ.
ಕ್ಷುದ್ರಂ ಹೃದಯ ದೌರ್ಬಲ್ಯಂ ತ್ಯಕೊ¤àತ್ತಿಷ್ಠ ಪರಂತಪ (ಹೇಡಿತನವನ್ನು ಬಿಟ್ಟು ಎದ್ದೇಳು) ಎನ್ನುತ್ತ ಶ್ರೀಕೃಷ್ಣನು ತನ್ನ ಮೃದುವಾದ, ಖಚಿತವಾದ ಮಾತಿನಿಂದ ಅರ್ಜುನನ ವಿಷಾದ, ನಿರಾಶೆಯ ಮನಸ್ಸನ್ನು ಹೋಗಲಾಡಿಸಿ, ಆತ ತನ್ನ ಕರ್ತವ್ಯದಲ್ಲಿ ತೊಡಗುವಂತೆ ಮಾಡುತ್ತಾನೆ. ದೌರ್ಬಲ್ಯವು ಎಲ್ಲ ಅನಿಷ್ಟಗಳ ತವರು. ಅನ್ಯಾಯ, ವಂಚನೆ, ಪರಹಿಂಸೆಗಳೆಲ್ಲ ದೌರ್ಬಲ್ಯ ದಿಂದಲೇ ಉಂಟಾಗುವುದು. ಆದ್ದರಿಂದ ದೌರ್ಬಲ್ಯವನ್ನು ಬಿಡು ಎನ್ನುತ್ತಾನೆ. ತಾನು ಹೇಳುವುದನ್ನೆಲ್ಲ ಹೇಳಿ ಕೊನೆಗೆ ಅದನ್ನು ಸ್ವೀಕರಿಸುವುದು, ಬಿಡುವುದು ನಿನಗೇ ಸೇರಿದ್ದು ಎಂದು ಅರ್ಜುನನಿಗೆ ತಿಳಿಸುತ್ತಾನೆ. ಇದು ಗೀತೆಯ ವಿಶೇಷತೆ.
ದೈನಂದಿನ ಬದುಕಿನಲ್ಲಿ ಜನರು ನಾನಾ ವಿಧದ ಕಷ್ಟನಷ್ಟಗಳಿಗೆ ಗುರಿಯಾಗುತ್ತಾರೆ. ಖನ್ನತೆ, ಆತ್ಮಹತ್ಯೆ, ಅಪಘಾತ, ನೋವು, ಸಾವು ಇತ್ಯಾದಿ. ಹಾಗೆಯೇ ಸುಖ, ಸಂತೋಷಗಳೂ ಇರುತ್ತವೆ. ಈ ಬಗ್ಗೆ ಯಾವುದೇ ಉದ್ವೇಗಕ್ಕೊಳಗಾಗದೆ ಎಲ್ಲವನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಬೇಕು ಎನ್ನುತ್ತದೆ ಗೀತೆ. ಗೀತೆಯು ತತ್ವಶಾಸ್ತ್ರವೂ ಹೌದು, ಮನಃಶಾಸ್ತ್ರವೂ ಹೌದು. ಅರ್ಜುನನಿಗೆ ನೀನು ಯೋಗಿಯಾಗು ಎನ್ನುತ್ತಾನೆ ಶ್ರೀಕೃಷ್ಣ, ಯೋಗಃ ಕರ್ಮಸು ಕೌಶಲಂ, ಅಂದರೆ ಕರ್ತವ್ಯದಲ್ಲಿ ಕೌಶಲ್ಯವನ್ನು ತೋರುವುದೇ ಯೋಗವೆನಿಸುತ್ತದೆ. ಹಾಗೆಯೇ ಸಮತ್ವಂ ಯೋಗ ಉಚ್ಯತೇ ಎನ್ನುತ್ತದೆ ಗೀತೆ. ನಿಮಿತ್ತ ಮಾತ್ರನಾಗಿ ನಿನ್ನ ಕರ್ತವ್ಯವನ್ನು ಮಾಡು. ಕರ್ತವ್ಯವನ್ನು ನಿರ್ವಹಿಸುವಲ್ಲಿ ಅಹಂಕಾರ ಸಲ್ಲದು ಎಂದು ಎಚ್ಚರಿಸುತ್ತ ಶ್ರೀಕೃಷ್ಣನು ನನ್ನಲ್ಲಿ ಶರಣು ಹೊಂದು, ನಿನ್ನ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಅರ್ಜುನನಿಗೆ ಅಭಯವನ್ನು ನೀಡುತ್ತಾನೆ.
ಶ್ರೀಕೃಷ್ಣನ ಯಶಸ್ವೀ ಮನೋ ಚಿಕಿತ್ಸೆಯಿಂದಾಗಿ ಅರ್ಜುನನು ತನ್ನ ಜಡತ್ವವನ್ನು ಕಳೆದುಕೊಂಡು “ಕರಿಷ್ಯೆ ವಚನಂ ತವ’ ಎನ್ನುತ್ತ ಯುದ್ಧಕ್ಕೆ ಸಿದ್ಧನಾಗುತ್ತಾನೆ.
ಎಲ್ಲರ ಬದುಕಿಗೂ ಗೀತೆಯು ದಾರಿದೀಪವಾಗಿದೆ. ದಿನಾಲೂ ಗೀತೆ ಯನ್ನು ಓದಿ, ಅರ್ಥೈಸಿಕೊಂಡು ಅದರ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸೋಣ.
– ಯಜ್ಞನಾರಾಯಣ ಉಳ್ಳೂರ