ಮುಂಬೈ: “”ಸಂಶೋಧನೆಯಂಥ ನಾವೀನ್ಯತೆ ಇಲ್ಲದಿದ್ದಲ್ಲಿ ಸಮಾಜ ಚಲನಶೀಲವಾಗಿ ಇರಲು ಸಾಧ್ಯವಿಲ್ಲ. ಹೀಗಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. “ಬ್ರಾಂಡ್ ಇಂಡಿಯಾ’ ನಿರ್ಮಾಣದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಗಳ ಪಾತ್ರ ಮಹತ್ವದ್ದಾಗಿದೆ. ಪ್ರಸ್ತುತ ದಿನದಲ್ಲಿ ಐಐಟಿಗಳು ಬದಲಾವಣೆಗಳ ಸಾಧನವಾಗಿ ಮಾರ್ಪಟ್ಟಿವೆ ಎಂದು ಹೇಳಿರುವ ಪ್ರಧಾನಿ ಮೋದಿ, ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಸಂಶೋಧನೆ ಹಾಗೂ ಉದ್ಯಮ ಕ್ಷೇತ್ರಗಳು ಅಗತ್ಯ ಅಡಿಪಾಯ ಎಂದಿದ್ದಾರೆ.
ಮುಂಬೈ ಐಐಟಿಯ 56ನೇ ಘಟಿಕೋತ್ಸ ವದಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ಮೇಕ್ ಇನ್ ಇಂಡಿಯಾದ ಪ್ರಮುಖ ಆಕರ್ಷಣೆಯೇ ಸಂಶೋಧನೆಯಾಗಿದೆ. ಸಂಶೋಧನೆ ಇಲ್ಲದೆ ಯಾವುದೇ ಸಮಾಜ ಚಲನಶೀಲತೆಯಿಂದ ಕೂಡಿರಲು ಸಾಧ್ಯವಿಲ್ಲ. ಸಂಶೋಧನೆ ಎನ್ನುವುದು 21ನೇ ಶತಮಾನದ ಪ್ರಚಲಿತ ಪದ ಎಂದರು.
ಸಾಮೂಹಿಕ ಪ್ರಯತ್ನ ಅಗತ್ಯ: ಪ್ರತಿವರ್ಷ ಅಂದಾಜು 7 ಲಕ್ಷ ಇಂಜಿನಿಯರ್‌ಗಳು ಪದವಿ ಪಡೆದು ಆಚೆ ಬರುತ್ತಾರೆ. ಅವರೆಲ್ಲರೂ ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಲು ಹಾಗೂ ಕೌಶಲ್ಯ ಹೊಂದಲು ಸಂಘಟಿತ ಶ್ರಮ ಅಗತ್ಯ ಎಂದು ಹೇಳಿದರು. ಐಐಟಿಗಳು ರೂಪಾಂತರದ ಸಲಕರಣೆಗಳಾಗಿ
ಮಾರ್ಪಟ್ಟಿವೆ. ತಂತ್ರಜ್ಞಾನ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಹವಾಮಾನದಲ್ಲಿನ ಬದಲಾವಣೆ ಹಾಗೂ ಕೃಷಿ ಕ್ಷೇತ್ರದ ಆವಿಷ್ಕಾರಕ್ಕೂ ಕಾರಣವಾಗುತ್ತಿವೆ. ಜಲ ಸಂರಕ್ಷಣೆ ಮತ್ತು ಅಪೌಷ್ಟಿಕತೆಯ ವಿರುದ್ಧದ ಹೋರಾಟದಲ್ಲಿಯೂ ಪ್ರಮುಖ ಪಾತ್ರವಹಿಸುತ್ತಿವೆ ಎಂದರು.