ಸತಾರಾ: ಮಹಾರಾಷ್ಟ್ರ ಮತ್ತು ದೇಶದಲ್ಲಿ ಕೋಮು ವಿಭಜನೆಯನ್ನು ಸೃಷ್ಟಿಸುವ ಶಕ್ತಿಗಳ ವಿರುದ್ಧ ಹೋರಾಡುವ ಅಗತ್ಯವಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸೋಮವಾರ ಹೇಳಿದ್ದಾರೆ.
ಏಕನಾಥ್ ಶಿಂಧೆ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಲು ಅಜಿತ್ ಪವಾರ್ ಪಕ್ಷವನ್ನು ವಿಭಜಿಸಿದ ಒಂದು ದಿನದ ನಂತರ ಕರಾಡ್‌ನಲ್ಲಿ ಎನ್‌ಸಿಪಿ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಇತರ ಪಕ್ಷಗಳನ್ನು ಒಡೆಯುವ ಬಿಜೆಪಿಯ ತಂತ್ರಗಳಿಗೆ ನಮ್ಮ ಕೆಲವರು ಬಲಿಯಾಗಿದ್ದಾರೆ ಎಂದರು.
ಶರದ್ ಪವಾರ್ ಅವರು ಕರಾಡ್ ನಲ್ಲಿರುವ ತಮ್ಮ ಆಪ್ತ ಮತ್ತು ಮಹಾರಾಷ್ಟ್ರದ ಮೊದಲ ಮುಖ್ಯಮಂತ್ರಿ ಯಶವಂತರಾವ್ ಚವಾಣ್ ಅವರ ಸ್ಮಾರಕಕ್ಕೆ ಭೇಟಿ ನೀಡಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು.ಗುರು ಪೂರ್ಣಿಮೆಯ ಸಂದರ್ಭದಲ್ಲಿ ದಿವಂಗತ ಚವಾಣ್ ಅವರ ಸ್ಮಾರಕ ‘ಪ್ರೀತಿಸಂಗಮ್’ಗೆ 82 ವರ್ಷದ ಹಿರಿಯ ನಾಯಕ ಪವಾರ್ ಅವರ ಈ ಭೇಟಿಯನ್ನು ಶಕ್ತಿಯ ಪ್ರದರ್ಶನವೆಂದು ಪರಿಗಣಿಸಲಾಗಿದೆ.
ನಾವು ಉದ್ಧವ್ ಠಾಕ್ರೆಯವರ ನೇತೃತ್ವದಲ್ಲಿ ಮಹಾರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿದ್ದೇವು ಆದರೆ ನಮ್ಮ ಸರ್ಕಾರವನ್ನು ಕೆಲವು ಜನರು ಉರುಳಿಸಿದರು. ರಾಷ್ಟ್ರದ ಇತರ ಕೆಲವು ಭಾಗಗಳಲ್ಲಿಯೂ ಇದೇ ಸಂಭವಿಸಿದೆ. ಮಹಾರಾಷ್ಟ್ರದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಕೆಲವು ಗುಂಪುಗಳಿಂದ ಜನರಲ್ಲಿ ಬಿರುಕು ಮೂಡಿಸಲಾಗುತ್ತಿದೆ. ನಾವು ದೇಶದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾಗಿದೆ ಎಂದರು.
ಸೋಮವಾರ ಬೆಳಗ್ಗೆ ಪುಣೆಯಿಂದ ಕರಾಡ್ ಗೆ ಹೊರಟ ಶರದ್ ಪವಾರ್, ದಾರಿಯುದ್ದಕ್ಕೂ ರಸ್ತೆಬದಿಯಲ್ಲಿ ಸಾಲುಗಟ್ಟಿ ನಿಂತಿದ್ದ ಬೆಂಬಲಿಗರನ್ನು ಭೇಟಿ ಮಾಡಿದರು.
ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರೊಂದಿಗೆ ಮಾತನಾಡಿ ರಾಜಕೀಯ ಹೋರಾಟಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.