ಬೆಂಗಳೂರು: ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ವ್ಯಕ್ತಿಗಳು ಮತ್ತು ಸಂಘಟನೆಗಳಿಗೆ ಭ್ರಷ್ಟಾಚಾರದ ಬಗ್ಗೆ ಆಕ್ರೋಶ ಇರಬೇಕೇ ಹೊರತು ರಾಜಕಾರಣಿಗಳ ಕುರಿತು ವೈಯುಕ್ತಿಕ ದ್ವೇಷ ಇರಬಾರದು ಎಂದು ಸಾಮಾಜಿಕ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಅಭಿಪ್ರಾಯಪಟ್ಟಿದ್ದಾರೆ.
ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನದ ಅಂಗವಾಗಿ ಲಂಚ ಮುಕ್ತ ಕರ್ನಾಟಕ ವೇದಿಕೆ ವತಿಯಿಂದ ಭಾನುವಾರ ಶಾಸಕರ ಭವನದಲ್ಲಿ ಹಮ್ಮಿಕೊಂಡಿದ್ದ ಕಾಲೇಜು ವಿದ್ಯಾರ್ಥಿಗಳಿಂದ ಭಾಷಣ ಸ್ಪರ್ಧೆ ಹಾಗೂ ಪ್ರಾಮಾಣಿಕ, ನಿಷ್ಠ, ಭ್ರಷ್ಟಾಚಾರ ವಿರೋಧಿ ಹೋರಾಟಗಾರರಿಂದ ಮುಕ್ತ ಚರ್ಚೆ ಮತ್ತು ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭ್ರಷ್ಟಾಚಾರ ಇಂದು ಜನಸಾಮನ್ಯರ ಬದುಕು ದುರ್ಬರಗೊಳಿಸಿದೆ. ಅದು ಯಾವ ರೂಪದಲ್ಲೇ ಆಗಲಿ, ಯಾರಿಂದಲೂ ನಡೆಯಲಿ ಅದನ್ನು ಯಾರೂ ಸಹಿಸಿಕೊಳ್ಳಬಾರದು. ಅಧಿಕಾರ ದುರ್ಬಳಕೆ ಅತ್ಯಂತ ದೊಡ್ಡ ಭ್ರಷ್ಟಾಚಾರವಾಗಿದೆ. ಸಮಾಜದಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವವರಿಗೆ ಆ ಭ್ರಷ್ಟಾಚಾರದ ಬಗ್ಗೆ ಅಕ್ರೋಶ, ಸಿಟ್ಟು ಇರಬೇಕು. ಆದರೆ, ಭ್ರಷ್ಟ ರಾಜಕಾರಣಿಗಳ ಬಗ್ಗೆ ವೈಯುಕ್ತಿಕ ದ್ವೇಷ ಇರಬಾರದು. ಸಂವಿಧಾನದ ಆಶಯಗಳನ್ನು ಮುಂದಿಟ್ಟುಕೊಂಡು ರಚನಾತ್ಮಕ ಆಲೋಚನೆಗಳು ಮತ್ತು ಸಂಘಟನೆ ಮೂಲಕ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಬೇಕು ಎಂದು ಹಿರೇಮಠ ಹೇಳಿದರು.
ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರವಿ ಕೃಷ್ಣಾರೆಡ್ಡಿ ಮಾತನಾಡಿ, ಭ್ರಷ್ಟಾಚಾರದ ವಿರುದ್ಧ ವ್ಯಕ್ತಿಗತ ಹೋರಾಟಗಳು ಎಂದಿಗೂ ಯಶಸ್ಸು ಕಾಣುವುದಿಲ್ಲ. ಸಂಘಟಿತ ಹೋರಾಟದ ಮೂಲಕವೇ ಅದರ ನಿರ್ಮೂಲನೆ ಮಾಡಲು ಸಾಧ್ಯ. ಆದ್ದರಿಂದ ವ್ಯಕ್ತಿಗತ ಪ್ರಯತ್ನಗಳ ಮೂಲಕ ಈ ಹೋರಾಟದಲ್ಲಿ ಯಶಸ್ಸು ಕಾಣುತ್ತೇವೆ ಎಂಬ ಭ್ರಮೆಯಲ್ಲಿರುವ ಹೋರಾಟಗಾರರು ಸಂಘಟನೆಗಳ ಜೊತೆಗೆ ಗುರುತಿಸಿಕೊಳ್ಳಬೇಕು ಇಲ್ಲವೇ ಹೊಸ ಸಂಘಟನೆ ಹುಟ್ಟುಹಾಕಬೇಕು ಎಂದು ಕರೆ ನೀಡಿದರು.
ಭ್ರಷ್ಟಾಚಾರದ ವಿರುದ್ಧ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ವೆಂಕಟೇಶ್, ಹನುಮಂತರಾಯಪ್ಪ, ಖಲೀಲ್ ಅಹ್ಮದ್ ವಿಜಯ್‌ರಾಘವ್ ಮರಾಠೆ, ಅಜಿತ್ ನಾಯಕ್ ಮತ್ತಿತರರು ಮಾತನಾಡಿದರು. ಇದೇ ವೇಳೆ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.