ಹೆಣ್ಣಿನ ಜೀವನದಲ್ಲಿ ಮದುವೆ ಎಂಬುದು ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸುವ ಘಟ್ಟ. ಹೆಣ್ಣು ತನ್ನ ತಾಯಿಮನೆಯ ಸಂಬಂಧಗಳನ್ನು ಕಟ್ಟಿಕೊಂಡು ಇನ್ನೊಂದು ಮನೆಯ ನಂದಾದೀಪವಾಗಿಯೂ ಬೆಳಗುವವಳು. ಮದುವೆಯ ನಂತರ ತನ್ನ ಗಂಡನ ಮನೆಯೇ ಆಕೆಯ ಜೀವಾಳ. ಗಂಡನೇ ಸರ್ವಸ್ವ ಎಂದು ಜೀವನ ಸಾಗಿಸುವವಳು ಅವಳು. ತನಗೆಷ್ಟೇ ಕಷ್ಟ-ನೋವಾದರೂ ಎಲ್ಲವನ್ನು ನುಂಗಿಕೊಂಡು ಪಾಲಿಗೆ ಬಂದದನ್ನು ಸ್ವೀಕರಿಸಿ ಜೀವನ ಸಾಗಿಸುತ್ತಾಳೆ.
ಜೀವನದ ಏರು-ಪೇರುಗಳನ್ನು ನಿಭಾಯಿಸಬಲ್ಲ ಸಹಾನುಭೂತಿ ಅವಳಲ್ಲಿದೆ. ಇಷೆಲ್ಲ ಸವಾಲುಗಳನ್ನು ಅವಳು ಎದುರಿಸುತ್ತ ಮುನ್ನುಗ್ಗಿದರೂ ಸಮಾಜ ಅವಳನ್ನು ವಕ್ರದೃಷ್ಟಿಯಿಂದ ಕಾಣುತ್ತದೆ. ಒಂದು ಹೆಣ್ಣು ತನ್ನ ಗಂಡನ ಸಾವಿನ ನಂತರ ತನ್ನ ಮಕ್ಕಳ ಸಂತೋಷಕ್ಕಾಗಿ ಎರಡನೆಯ ಮದುವೆಯಾಗದೇ ಜೀವನ ನಿರ್ವಹಿಸಬಲ್ಲಳು. ಒಂದು ವೇಳೆ ತನ್ನ ರಕ್ಷಣೆಗಾಗಿ, ಜೀವನಕ್ಕಾಗಿ ಮರು ಮದುವೆಯಾದರೆ ಸಾವಿರಾರು ಕೊಂಕುಮಾತುಗಳು, ಅವಹೇಳನಗಳನ್ನು ಕೇಳಬೇಕಾಗುತ್ತದೆ. ಆದರೆ, ಗಂಡಿಗೆ ಅದಾವುದೂ ಅನ್ವಯಿಸುವುದೇ ಇಲ್ಲ.
ಸಮಾನತೆ ಎನ್ನುವುದು ಇಂದು ಕೇವಲ ಪುಸ್ತಕಗಳಿಗೆ ಸೀಮಿತವಾಗಿದೆಯೇ ಹೊರತು ನಿಜಜೀವನದಲ್ಲಿ ಮಾಸಿ ಹೋಗಿದೆ. ಯಾವುದೇ ಸರ್ಕಾರವಾಗಿಲಿ, ನೀತಿ-ನಿಯಮಗಳಾಗಲಿ ಜನರ ಕೊಂಕು ದೃಷ್ಟಿಕೋನವನ್ನು ಸರಿದೂಗಲಾರದು. ಸಮಾಜ ಬದಲಾಗಬೇಕಾದರೆ ಮೊದಲು ಮನುಷ್ಯನ ಮನಸ್ಸು, ಚಿಂತನೆಗಳು ಬದಲಾಗಬೇಕು. ಎಲ್ಲಿಯವರೆಗೆ ಮಾನವನ ಚಿಂತನೆಗಳು ಬದಲಾಗುವುದಿಲ್ಲವೋ ಅಲ್ಲಿಯವರೆಗೆ ಈ ಸಮಾಜ ಸರಿಯಾಗಲಾರದು.
-ಸುಷ್ಮಾ ಸದಾಶಿವ್
ಪ್ರಥಮ ಎಂಸಿಜೆ ವಿದ್ಯಾರ್ಥಿನಿ
ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ವಿವೇಕಾನಂದ ಕಾಲೇಜು, ಪುತ್ತೂರು