ಕನ್ನಡ ಚಿತ್ರರಂಗದಲ್ಲಿ ನಾಯಕಿಯರಿಗೆ ಅವಕಾಶ ಬೇಕಾದರೆ, ಕಾಂಪ್ರಮೈಸ್ ಆಗಬೇಕಾ, ಕಮಿಟ್‌ಮೆಂಟ್ ಮಾಡ್ಕೊಬೇಕಾ? ಅಷ್ಟಕ್ಕೂ ಕಾಂಪ್ರಮೈಸ್ ಮತ್ತು ಕಮಿಟ್‌ಮೆಂಟ್ ಕುರಿತು ಪ್ರಶ್ನೆ ಬರೋಕೆ ಕಾರಣ, ಸೋಮವಾರ ನಡೆದ “ಹೀಗೊಂದು ದಿನ’ ಚಿತ್ರದ ಪತ್ರಿಕಾಗೋಷ್ಠಿ. ಅಲ್ಲಿ ನಿರ್ಮಾಪಕ ಚಂದ್ರಶೇಖರ್ ಅವರು ಜೋಶ್‌ನಲ್ಲಿ ಮಾತನಾಡುತ್ತಾ, “ಸಿಂಧು ಒಳ್ಳೆಯ ನಟಿ. ಆದರೆ, ಅವರಿಗೆ ಅವಕಾಶಗಳಿಲ್ಲ.
ಕನ್ನಡದಲ್ಲಿ ನಟಿಯರು ಕಾಂಪ್ರಮೈಸ್, ಕಮಿಟ್‌ಮೆಂಟ್ ಮಾಡಿಕೊಂಡರೆ ಮಾತ್ರ ಅವಕಾಶ. ಇಲ್ಲದಿದ್ದರೆ ಕಷ್ಟ’ ಅಂತ ಹೇಳುವ ಮೂಲಕ ವಿವಾದಕ್ಕೀಡಾದರು. ಅಷ್ಟೊತ್ತಿಗೆ, ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ತಬ್ಬಿಬ್ಟಾಗಿ ಕ್ಷಮೆ ಕೇಳಿದ ಪ್ರಸಂಗವೂ ನಡೆಯಿತು. ಸಿಂಧು ಲೋಕನಾಥ್‌ಗೇನಾದರೂ ಕಮಿಟ್‌ಮೆಂಟ್, ಕಾಂಪ್ರಮೈಸ್ ಮಾಡಿಕೊಳ್ಳುವ ಪ್ರಸಂಗ ಎದುರಾಯಿತಾ ಎಂಬ ಪ್ರಶ್ನೆಗೆ ಅವರು ಹೇಳ್ಳೋದೇನು ಗೊತ್ತಾ?
“ನನಗಂತೂ ಈವರೆಗೆ ಆ ರೀತಿಯ ಅನುಭವ ಆಗಿಲ್ಲ. ಇಲ್ಲಂತೂ ಯಾರೂ ನನ್ನನ್ನು ಆ ರೀತಿ ಕೇಳಿಲ್ಲ. ಆದರೆ, ಬಾಲಿವುಡ್, ಟಾಲಿವುಡ್, ಕಾಲಿವುಡ್‌ನಲ್ಲೆಲ್ಲಾ ಇಂತಹ ಸುದ್ದಿ ಕೇಳಿಬರುತ್ತವೆ. ಯಾಕೆಂದರೆ, ಇದು ಸಿನಿಮಾ ರಂಗ, ಯಾವುದೇ ಮನೆಯಲ್ಲಾಗಲಿ, ನಾನು ನಟಿ ಆಗ್ತಿàನಿ ಅಂತ ಹೇಳಿದಾಗ, ಮನೆಯಲ್ಲಿ ಬೇಡ, ಅದು ಒಳ್ಳೇ ಫೀಲ್ಡ್ ಅಲ್ಲ ಅನ್ನೋ ಮಾತೇ ಬರುತ್ತೆ. ವೈಯಕ್ತಿಕವಾಗಿ ನನಗೆ ಅಂತಹ ಅನುಭವಗಳೇನೂ ಆಗಿಲ್ಲ.
ಇಲ್ಲಿ ಪ್ರತಿಭಾವಂತೆ ಅಂತ ಗೊತ್ತಾದರೆ ನಂಬಿಕೆ ಇಟ್ಟು ಅವಕಾಶ ಕೊಟ್ಟೇ ಕೊಡುತ್ತಾರೆ. ಕೆಲವು ಅವಕಾಶಗಳು ಬಂದಾಗ, ಮಾಡುವುದಕ್ಕಾಗುವುದಿಲ್ಲ. ಯಾಕೆಂದರೆ, ಬೇರೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿರುತ್ತೇವೆ. ಇಲ್ಲಿ ಹೀರೋ ಡೇಟ್‌ಗಾಗಿ ಎಷ್ಟು ದಿನ ಬೇಕಾದ್ರೂ ಕಾಯ್ತಾರೆ. ಆದರೆ, ನಾಯಕಿ ಬೇಕು ಅಂತ ಯಾರೂ ಕಾಯೋದಿಲ್ಲ. ನಮಗೆ ಆ ನಾಯಕಿ ಬೇಕೇ ಬೇಕು ಅಂತ ಕಾದು ಆ ಹೀರೋ ಜತೆ ಆ ನಾಯಕಿಯನ್ನ ಹಾಕಿ ಸಿನಿಮಾ ಮಾಡಿದ ಉದಾಹರಣೆ ಇಲ್ಲ.
ನನ್ನ ವಿಷಯದಲ್ಲೂ ಹಾಗೆ ಆಗಿರುವುದುಂಟು. ಹಾಗೆ ನೋಡಿದರೆ, ನನಗೆ ದೊಡ್ಡ ಪ್ರಾಜೆಕ್ಟ್ಗಳು ಮಿಸ್ ಆಗಿವೆ. “ಸಿಂಪಲ್ಲಾಗೊಂದ್ ಲವ್‌ಸ್ಟೋರಿ’ ಮಾಡಬೇಕಿತ್ತು. ಆ ಟೈಮಲ್ಲಿ “ಜೈ ಭಜರಂಗಬಲಿ’, “ಡ್ರಾಮಾ’ ಚಿತ್ರಗಳಲ್ಲಿ ನಟಿಸುತ್ತಿದ್ದೆ. ಇನ್ನು “ಭಜರಂಗಿ’ ಕೂಡ ಮಿಸ್ ಆಯ್ತು. ಆ ಸಿನಿಮಾಗೆ ಅವಕಾಶ ಬಂದಾಗ, ನನಗೆ ಆಕ್ಸಿಡೆಂಟ್ ಆಗಿತ್ತು. ಸೋ ಮಾಡಲಾಗಲಿಲ್ಲ. ಹೀಗೆ ಮಿಸ್ ಆಗಿದ್ದುಂಟು. ಆದರೆ, ಬೇರೆ ಯಾವುದೋ ಕಾರಣಕ್ಕೆ ಅವಕಾಶಗಳೇ ಇಲ್ಲ ಅನ್ನೋದು ಸರಿಯಲ್ಲ’ ಎನ್ನುತ್ತಾರೆ ಅವರು.
ಚಿತ್ರರಂಗದಲ್ಲಿ ಬೇರೆ ನಟಿಯರಿಗೆ ಈ ರೀತಿಯ ಸಂದರ್ಭ ಬಂದರೆ ಸಿಂಧು ಹೇಳ್ಳೋದೇನು ಗೊತ್ತಾ? “ಕಾಂಪ್ರಮೈಸ್, ಕಮಿಟ್‌ಮೆಂಟ್‌ಗಾಗಿಯೇ ಇಲ್ಲೇಕೆ ಬರಬೇಕು? ನಟಿಯರು ಕೆಲಸ ಮಾಡೋಕೆ ಬರೋದಾದರೆ, ಇದೇ ರಂಗ ಬೇಕಾ? ಬೇರೆ ಕಡೆ ಸಾಕಷ್ಟು ಕೆಲಸಗಳಿವೆ. ಅಷ್ಟಕ್ಕೂ ಯಾರೋ ಒಬ್ಬರು ಆ ರೀತಿ ಮಾಡಿದರೆ, ಬೇರೆ ನಾಯಕಿಯರನ್ನು ಕೆಟ್ಟ ದೃಷ್ಟಿಯಿಂದ ಯಾಕೆ ನೋಡಬೇಕು?
ಯಾರೋ ಮಾಡಿದರು ಅಂತ ಎಲ್ಲಾ ನಾಯಕಿಯರನ್ನು ಅದೇ ಭಾವನೆಯಿಂದ ನೋಡುವುದು ತಪ್ಪು. ಇದು ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಕಾರ್ಪೋರೇಟ್ ಲೆವೆಲ್‌ನಲ್ಲೂ ಕಾಮನ್ ಆಗಿದೆ. ಬೇರೆ ರಂಗದಲ್ಲೂ ಇದು ನಡೆಯುತ್ತಿದೆ. ಆದರೆ, ಗಮನಕ್ಕೆ ಬರಲ್ಲ. ಸಿನಿಮಾ ರಂಗದಲ್ಲಿ ಕುತೂಹಲ ಜಾಸ್ತಿ. ಚಿಕ್ಕ ವಿಷಯ ದೊಡ್ಡದಾಗುತ್ತೆ ಅಷ್ಟೇ’ ಎಂದು ಹೇಳುತ್ತಾರೆ ಸಿಂಧು ಲೋಕನಾಥ್.