ದೇವನಹಳ್ಳಿ: ಇತ್ತೀಚಿನ ದಿನಗಳಲ್ಲಿ ಮಾನವ ಕಳ್ಳ ಸಾಗಾಣಿಕೆ ಮಿತಿಮೀರಿ ನಡೆಯುತ್ತಿರುವುದು ಕಂಡು ಬರುತ್ತಿದೆ. ಅಪ್ರಾಪ್ತರು, ಮಹಿಳೆಯರು ಮತ್ತು ಯುವ ಜನರು ಈ ಸಮಸ್ಯೆಗೆ ಒಳಗಾಗುತ್ತಿರುವುದು ನೋವಿನ ಸಂಗತಿ ಎಂದು 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎನ್.ಸಂಶಿ ಬೇಸರ ವ್ಯಕ್ತಪಡಿಸಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಸೇವೆಗಳ ಸಮೀತಿ, ವಕೀಲರ ಸಂಘ, ಸರ್ವೋದಯ ಸರ್ವಿಸ್ ಸೊಸೈಟಿ, ಉಜ್ವಲ ಕೇಂದ್ರ, ಮಕ್ಕಳ ಸಹಾಯವಾಣಿ, ಪೊಲೀಸ್ ಇಲಾಖೆ ವತಿಯಿಂದ ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಕುರಿತು ಜನರಲ್ಲಿ ಅರಿವು ಮೂಡಿಸುವ ಜಾಥಾ ಮತ್ತು ಬೀದಿ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆತಂಕಕಾರಿ ಬೆಳವಣಿಗೆ: ಮಹಿಳೆಯರು ಮತ್ತು ಮಕ್ಕಳು ದುರ್ಬಲರಾಗಿದ್ದು, ಅವರು ಮೋಸದ ಬಲೆಗೆ ಸುಲಭವಾಗಿ ಬೀಳುವ ಸಾಧ್ಯತೆ ಇರುವುದರಿಂದ ಅವರನ್ನು ರಕ್ಷಿಸುವುದು ತೀರಾ ಅಗತ್ಯವಾಗಿದೆ. ಸಾಗಾಣಿಕೆದಾರರು ಮತ್ತು ಅಪ ರಾಧಿ ಜಾಲಗಳು, ಮನೆ ಕೆಲಸ, ಸುಳ್ಳು ಮದುವೆ, ಗುಪ್ತ ಉದ್ಯೋಗ ಮತ್ತು ಸುಳ್ಳು ದತ್ತು ಗಳಂತಹ ಕಾನೂನು ಬಾಹೀರ ಚಟುವಟಿಕೆಗಳಲ್ಲಿ ತೊಡಗಿವೆ. ಮಹಿಳೆಯರು ಹಾಗೂ ಮಕ್ಕಳನ್ನು ಬಲಾತ್ಕಾರದಿಂದ ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಗಾಣಿಕೆ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ತಿಳಿಸಿದರು.
ಮೋಸಕ್ಕೆ ಬಲಿಯಾಗಬೇಡಿ: ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಮಹಿಳೆಯರು ಮತ್ತು ಮಕ್ಕಳನ್ನು ಸಾಗಾಟ ಮಾಡುವ ವ್ಯಕ್ತಿಗಳ ಚಲನ ವಲನಗಳು ಕಂಡು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು. ಯಾರಾದರೂ ಅಪರಿಚಿತ ವ್ಯಕ್ತಿಗಳು ಆಸೆ ,ಆಮಿಷಗಳನ್ನೊಡ್ಡಿ ವಂಚಿಸುವ ಸಾಧ್ಯತೆಯಿ ರುತ್ತದೆ. ಆದ್ದರಿಂದ, ಮೋಸಕ್ಕೆ ಬಲಿಯಾಗಬಾರದು. ಪ್ರತಿಯೊಬ್ಬರೂ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಬಗ್ಗೆ ಗಮನ ಹರಿಸಬೇಕೆಂದು ಹೇಳಿದರು.
ಈ ವೇಳೆ ಪ್ರಧಾನ ಸಿವಿಲ್ ನ್ಯಾಯಾಧೀಶೆ ಮಂಜುಳಾ, ಅಪರ ಸಿವಿಲ್ ನ್ಯಾಯಾಧೀಶ ಅಬ್ದುಲ್ ಸಲೀಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಹೇಶ್ವರಪ್ಪ, ಬಿಇಒ ಗಾಯಿತ್ರಿ ದೇವಿ, ಪುರಸಭಾ ಮುಖ್ಯಾಧಿಕಾರಿ ಹನಮಂತೇಗೌಡ, ವಕೀಲರ ಸಂಘದ ಅಧ್ಯಕ್ಷ ಬೈರೇಗೌಡ, ಉಪಾಧ್ಯಕ್ಷ ಗೋವಿಂದ ಸ್ವಾಮಿ, ಕಾರ್ಯದರ್ಶಿ ಪ್ರಭಾಕರ್, ಪೊಲೀಸ್ ಇನ್ಸ್‌ಪೆಕ್ಟರ್ ಶಿವಕುಮಾರ್, ಸರ್ವೋದಯ ಸರ್ವಿಸ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಗೋಪಾಲ್‌ರಾವ್, ಸಿಬ್ಬಂದಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.