ದೊಡ್ಡಬಳ್ಳಾಪುರ: “ಟೆರ್ರಾಫರ್ಮಾ ಕಸ ವಿಲೇವಾರಿ ಘಟಕವನ್ನು ಮತ್ತೆ ಆರಂಭಿಸುವುದಿಲ್ಲ ಎನ್ನುವ ಕುರಿತಂತೆ ಸರ್ಕಾರಿ ಆದೇಶ ಮಾಡಿಕೊಡಬೇಕು. ಈಗ ಕಾರ್ಯನಿರ್ವಹಿಸುತ್ತಿರುವ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕವನ್ನು ಬಂದ್ ಮಾಡಬೇಕು’ ಎಂದು ಶಾಸಕ ಟಿ.ವೆಂಕಟರಮಣಯ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಗುರುವಾರ ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, 2016ರಲ್ಲಿ ಸ್ಥಳೀಯ ರೈತರ ಪ್ರತಿಭಟನೆಯಿಂದಾಗಿ ಟೆರ್ರಾಫರ್ಮಾ ಕಸ ವಿಲೇವಾರಿ ಘಟಕ ಬಂದ್ ಮಾಡಲಾಗಿತ್ತು. ಹಂತ ಹಂತವಾಗಿ ಎಂಎಸ್‌ಜಿಪಿ ಘಟಕ ಬಂದ್ ಮಾಡಲಾಗುವುದು ಎಂದು ಬಿಬಿ ಎಂಪಿ ನೀಡಿದ್ದ ಭರವಸೆ ಸುಳ್ಳಾಗಿದೆ. ತಾಲೂಕಿನಲ್ಲಿ ಪಕ್ಷಾತೀತವಾಗಿ 7 ದಿನಗಳಿಂದಲೂ ಕಸದ ಲಾರಿಗಳು ಬಾರದಂತೆ ರೈತರು ಧರಣಿ ನಡೆಸುತಿದ್ದಾರೆ.
ತಾಲೂಕಿಗೆ ಬರುತ್ತಿರುವ ಬಿಬಿಎಂಪಿ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದೇ ಹೋದರೆ ಎತ್ತಿನಹೊಳೆ ಕುಡಿವ ನೀರು ವಿಷಯುಕ್ತವಾಗಲಿದೆ. ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಬುಧವಾರ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಜಗದೀಶ್ ಹಿರೇಮಣಿ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ನೋಡಿದ್ದಾರೆ. ಅಲ್ಲದೆ, ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿರುವ ಮಾಹಿತಿ ಆಧಾರದ ಮೇಲೆ ಎಂಎಸ್‌ಜಿಪಿ ಘಟಕ ಬಂದ್ ಮಾಡುವ ಆದೇಶ ನೀಡಬೇಕು ಎಂದು ಮನವಿ ಮಾಡಿದರು. ಎಲೆರಾಂಪುರ ಮಠದ ಡಾ.ಹನುಮಂತ ನಾಥಸ್ವಾಮೀಜಿ, ಕಸ ಬರುವುದನ್ನು ಈಗ ನಿಲ್ಲಿಸಿದರೂ ಅಲ್ಲಿನ ಪರಸರ ಸಹಜ ಸ್ಥಿತಿಗೆ ಬರಲು ಇನ್ನು 5 ದಶಕ ಬೇಕಾಗಲಿದೆ. ಹೀಗಾಗಿ ಎರಡೂ ಕಸ ವಿಲೇವಾರಿ ಘಟಕ ಬಂದ್ ಆಗಲೇಬೇಕು ಎಂದರು.
ಬಂದ್ ಮಾಡಿಸುತ್ತೇವೆ:ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ , ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಟೆರಾಫಾರ್ಮ ಕಸ ವಿಲೇ ವಾರಿ ಘಟಕವನ್ನು ಮತ್ತೆ ಆರಂಭಿಸುವುದಿಲ್ಲ. ಈಗಿನ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕವನ್ನು ಶೀಘ್ರ ಬಂದ್ ಮಾಡಿಸುವ ಹೊಣೆಗಾರಿಕೆ ನಮ್ಮದು. ಹೀಗಾಗಿ ರೈತರು ಧರಣಿ ಹಿಂದಕ್ಕೆ ಪಡೆಯಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕಸದ ಸಮಸ್ಯೆ ಬಗ್ಗೆ ದೂರು ಹೇಳುವುದು ಸುಲಭ. ಆದರೆ ಈ ಸ್ಥಾನಲ್ಲಿ ನೀವು ನಿಂತು ಯೋಚಿಸಿ ನೋಡಿ ತಕ್ಷಣಕ್ಕೆ ಘಟಕ ಬಂದ್ ಮಾಡುವುದು ಕಷ್ಟ. ಆದರೆ, ಎತ್ತಿನಹೊಳೆ ಕುಡಿವ ನೀರಿನ ಜಲಾಶಯದ ಕೆಲಸ ಆರಂಭವಾಗುವುದರ ಒಳಗೆ ಅಲ್ಲಿಗೆ ಕಸ ಬರುವುದನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು. ಬೈರಗೊಂಡ್ಲು ಜಲಾಶಯಕ್ಕೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಅಗತ್ಯವಿರುವ ಕ್ರಮ ಕೈಗೊಳ್ಳ ಲಾಗುವುದು. ಕಸ ವಿಲೇವಾರಿ ಘಟಕ ದಿಂದ ಕಲುಷಿತ ನೀರು ಹೊರ ಹೋಗ ದಂತೆ ತಡೆಗೋಡೆ ನಿರ್ಮಿ ಸಲು ಸರ್ಕಾ ರದ ವತಿಯಿಂದಲೇ ಹಣ ನೀಡಲಾಗುವುದು.ವಿಧಾನ ಸಭಾ ಅಧಿ ವೇಶನ ಮುಕ್ತಾಯವಾದ ನಂತರ ಟೆರ್ರಾ ಫರ್ಮಾ ಮತ್ತೆ ಆರಂಭ ವಿಲ್ಲ ಎನ್ನುವ ಅಧಿಕೃತ ಆದೇಶ ಹೊರಡಿಸುವ ಭರವಸೆ ನೀಡಿದರು.
ಸಭೆಯಲ್ಲಿ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್, ಸಚಿವ ಮಾಧುಸ್ವಾಮಿ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕನ್ಯಾಕು ಮಾರಿ, ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರ
ತೇಜಸ್ವಿ, ಕರವೇ(ಕನ್ನಡಿಗರ ಬಣ) ರಾಜ್ಯ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್, ಕುಂಚಿ ಟಿಗರ ಸಂಘ ಪ್ರಧಾನ ಕಾರ್ಯದರ್ಶಿ ಎಂ.ಎಚ್.ಮುತ್ತರಾಜು, ಮುಖಂಡರಾದ ಹನುಮಂತರೆಡ್ಡಿ, ಸಿದ್ದರಾಮಯ್ಯ, ಆರ್. ಕೆಂಪರಾಜ್ ಮತ್ತಿತರರಿದ್ದರು.