ಕುಂದಾಪುರ: ತ್ರಾಸಿ – ಗಂಗೊಳ್ಳಿ ಮುಖ್ಯ ರಸ್ತೆ ಸುಮಾರು 3 ಕಿ. ಮೀ.ರಸ್ತೆ ಸಂಪೂರ್ಣ ಹಾಳಾಗಿದೆ. ದಿನಂಪ್ರತಿ ವಾಹನ ಸವಾರರು ಹಾಗೂ ಶಾಲಾ ಮಕ್ಕಳ ವಾಹನ ಈ ರಸ್ತೆಯಲ್ಲಿ ಪ್ರಯಾಣಿಸಲು ಸರ್ಕಸ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರಸ್ತೆ ದುರಸ್ತಿ ಮಾಡಬೇಕೆಂದು ಗುಜ್ಜಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ತಮ್ಮಯ್ಯ ದೇವಾಡಿಗ ಅಧಿ ಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಶೀಘ್ರ ರಸ್ತೆ ದುರಸ್ತಿ ಮಾಡದಿದ್ದರೆ ಮುಂದಿನ ದಿನದಲ್ಲಿ ಪ್ರತಿಭಟನೆಯ ದಾರಿ ಹಿಡಿಯಬೇಕಾಗುತ್ತದೆ ಎಂದು ಸಾರ್ವಜನಿಕರು ಹೇಳಿದ್ದಾರೆ.
ತ್ರಾಸಿ- ಗಂಗೊಳ್ಳಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ 66 ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದ್ದು ರಸ್ತೆಯಲ್ಲಿ ಬೃಹದಾಕಾರದ ಹೊಂಡಗಳು ಸೃಷ್ಟಿಯಾಗಿವೆ. ಇದರಿಂದ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಸ್ಥಿತಿ ಎದುರಾಗಿದೆ. ಅಲ್ಲದೆ ರಸ್ತೆಯ ತುಂಬೆಲ್ಲ ಜಲ್ಲಿ ಕಲ್ಲುಗಳು ಬಿದ್ದಿವೆ. ಇದರಿಂದ ಶಾಲಾ ಮಕ್ಕಳು, ಹಾಗೂ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಹೋಗಬೇಕಾದ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.
ಇನ್ನೂ ಈ ರಸ್ತೆಯ ಅವ್ಯವಸ್ಥೆ ಬಗ್ಗೆ ಗಮನಕ್ಕೆ ಬಂದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಅಧಿ ಕಾರಿಗಳು ಮಾತ್ರ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುವುದು ಇಲ್ಲಿನ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.