Advertisement

ಅತಿವೃಷ್ಟಿ ಬೆಳೆಹಾನಿಗೆ ಸಿಗಲಿದೆಯೇ ಅರೆಕಾಸು?

05:07 PM Oct 31, 2020 | Suhan S |

ಕಲಬುರಗಿ: ಬಿಸಿಲು ನಾಡು ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಆದ ಶತಮಾನದ ಮೇಘ ಸ್ಫೋಟದಿಂದ (ಮುಂಗಾರು ಹಂಗಾಮು) ಜಿಲ್ಲಾದ್ಯಂತ ಅಂದಾಜು ಮೂರು ಸಾವಿರ ಕೋಟಿ ರೂ. ಅಧಿಕ ಬೆಳೆ ಹಾನಿಯಾಗಿದ್ದರೂ ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ 346 ಕೋಟಿ ರೂ. ಪರಿಹಾರ (ಇನ್‌ಫ‌ುಟ್‌ ಸಬ್ಸಿಡಿ) ಮಾತ್ರ ದೊರಕಲಿದೆ ಎಂಬ ಅಂಶ ತಿಳಿದುಬಂದಿದೆ.

Advertisement

ಬೆಳೆ ಬೆಳೆಯಲು ಬಳಕೆಯಾದ ಬೀಜ, ಗೊಬ್ಬರದ ಮೊತ್ತವನ್ನೇ ಇನ್‌ಪುಟ್‌ ಸಬ್ಸಿಡಿ ಎನ್ನಲಾಗುತ್ತದೆ. ಹೀಗಾಗಿ ಸರ್ಕಾರ ಬೆಳೆ ಹಾನಿಗೆ ಪರಿಹಾರ ನೀಡುವಬದಲು ಮಾಡಲಾದ ಖರ್ಚನ್ನು ಮಾತ್ರ ಭರಿಸಲಿದ್ದು,  ಮುಂದಿನ ದಿನಗಳಲ್ಲಿ ಅತಿವೃಷ್ಟಿಯಿಂದಾದ ಬೆಳೆಹಾನಿಗೆ 346 ಕೋಟಿ ರೂ. ಪರಿಹಾರ ಸಿಗುವ ಸಾಧ್ಯತೆಗಳಿವೆ.

ಕೇಂದ್ರಕ್ಕೆ ಬೆಳೆಹಾನಿ ವರದಿ ಸಲ್ಲಿಸುವ ನಿಟ್ಟಿನಲ್ಲಿ ಕೃಷಿ ಹಾಗೂ ಕಂದಾಯ ಇಲಾಖೆಯಿಂದ ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ತಿಂಗಳಲ್ಲಿ ನಡೆಸಲಾದ ಜಂಟಿ ಸಮೀಕ್ಷೆ ಆಧಾರದಲ್ಲೇ ಈಗ ಸಮೀಕ್ಷೆ ನಡೆಸಿ ಅಕ್ಟೋಬರ್‌ನಲ್ಲಿಆದ ಕುಂಭದ್ರೋಣ ಮಳೆಯಿಂದ 153 ಕೋಟಿ ರೂ. ಬೆಳೆ ಹಾನಿಯಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಇದಕ್ಕಿಂತ ಮುಂಚೆ ಆಗಸ್ಟ್‌ ತಿಂಗಳಲ್ಲಿ 89 ಸಾವಿರ ಹೆಕ್ಟೇರ್‌ ಬೆಳೆ ನಷ್ಟವಾಗಿ 61 ಕೋಟಿ ರೂ. ಹಾನಿ ಹಾಗೂ ಸೆಪ್ಟೆಂಬರ್‌ ತಿಂಗಳಲ್ಲಿ 1.89 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ 131 ಕೋಟಿ ರೂ. ಬೆಳೆ ಹಾನಿಯಾಗಿದೆ ಎಂಬ ವರದಿ ಸೇರಿದಂತೆ ಒಟ್ಟಾರೆಮುಂಗಾರಿನಲ್ಲಿ ಅತಿವೃಷ್ಟಿಯಿಂದ ನಾಲ್ಕು ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಬೆಳೆಹಾನಿಯಾಗಿದ್ದು, ಒಟ್ಟಾರೆ 346 ಕೋಟಿ ರೂ. ಪರಿಹಾರಕ್ಕೆ ಅರ್ಹವೆಂದು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಈ ವರದಿ ಪ್ರಕಾರ ಮುಂದಿನ ದಿನಗಳಲ್ಲಿ 349 ಕೋಟಿ ರೂ. ಮಾತ್ರ ಪರಿಹಾರ ಸಿಗುವ ಸಾಧ್ಯತೆಗಳಿವೆ.

ಶೇ.58 ಬೆಳೆಹಾನಿ: ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ ಶೇ.58ರಷ್ಟು ಪ್ರಮಾಣದ ಬೆಳೆ ಹಾನಿಯಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅಂದರೆ ಕಲಬುರಗಿ ಜಿಲ್ಲೆಯಲ್ಲಿ 7.47 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿಬಿತ್ತನೆಯಾಗಿದೆ. ಇದರಲ್ಲಿ ಶೇ.58ರಷ್ಟು ಅಂದರೆ ಕನಿಷ್ಠ ನಾಲ್ಕು ಲಕ್ಷ ಅಧಿಕ ಹೆಕ್ಟೇರ್‌ ಭೂಮಿಯಲ್ಲಿ ಬೆಳೆಹಾನಿಯಾಗಿದೆ. ಇದರ ಅಂದಾಜು 3000 ಕೋಟಿರೂ. ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ರೈತರಿಗೆ ಪರಿಹಾರ ಮಾತ್ರ 346 ಕೋಟಿ ರೂ. ಮಾತ್ರ ದೊರಕಲಿದೆ.

ಮುಂಗಾರು ಹಂಗಾಮಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚಿನ ಬಿತ್ತನೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕಲಬುರಗಿಯ ಎರಡು ಪಟ್ಟು ಹೆಚ್ಚು ಕೃಷಿಭೂಮಿ ಇದ್ದರೂ ಮುಂಗಾರು ಹಂಗಾಮಿನ ಬಿತ್ತನೆ ವಿಸ್ತೀರ್ಣ ಜಿಲ್ಲೆಗಿಂತ ಕಡಿಮೆ ಇದೆ. ಕಳೆದ ವರ್ಷ ಬೆಳಗಾವಿಯಲ್ಲಿ ಪ್ರವಾಹದಿಂದ ಆದ ಬೆಳೆ ಹಾನಿಗೆ ಒಂದು ಹೆಕ್ಟೇರ್‌ ಬದಲು ಎರಡು ಹೆಕ್ಟೇರ್‌ ಹಾನಿ ಎಂದು ಸರ್ಕಾರವೇ ಪರಿಗಣಿಸಿ ರೈತನಿಗೆ 13,600 ರೂ. ಪರಿಹಾರ ನೀಡಿದೆ. ಆದರೆ ಕಲಬುರಗಿಯಲ್ಲಿ ಮಾತ್ರ 6,800 ರೂ. ಮಾತ್ರ ಇನ್‌ಪುಟ್‌ ಸಬ್ಸಿಡಿ ಪರಿಹಾರ ದೊರಕುವ ಸಾಧ್ಯತೆಗಳಿವೆ. ಕೊರೊನಾದಿಂದ ತೀವ್ರ  ಆರ್ಥಿಕ ಸಂಕಷ್ಟ ಉಂಟಾಗಿರುವುದೇ ಪರಿಹಾರ ಕಡಿಮೆ ಸಿಗಲು ಕಾರಣ ಎನ್ನಲಾಗುತ್ತಿದೆ.

Advertisement

ಕಳೆದ ವರ್ಷ ಮಳೆ ಇಲ್ಲದೆ ಬರದಿಂದ ಜಿಲ್ಲೆಯ ರೈತರಿಗೆ 70 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ ಪರಿಹಾರ ದೊರಕಿದ್ದರೆ ಈ ಸಲ ಅತಿವೃಷ್ಟಿಯಿಂದ ಅದರ ಹತ್ತು ಪಟ್ಟು ಹೆಚ್ಚು ಹಾನಿಯಾಗಿರುವುದರಿಂದ ಕನಿಷ್ಠ 1,000 ಕೋಟಿ ರೂ.ದಿಂದ 1,200 ಕೋಟಿ ರೂ. ಪರಿಹಾರವಾದರೂ ದೊರಕಬೇಕು ಎಂಬುದು ಲೆಕ್ಕಾಚಾರ. ಆದರೆ ಪರಿಹಾರ ಎಷ್ಟು ದೊರಕಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಬೆಳೆವಿಮೆಯಿಂದಲೂ ರೈತ ವಂಚಿತ :  ಈ ಹಿಂದೆ ಕಲಬುರಗಿ ಜಿಲ್ಲೆಯಲ್ಲಿ ಕನಿಷ್ಠ 2.50 ಲಕ್ಷ ರೈತರು ಬೆಳೆವಿಮೆ ಮಾಡಿಸುತ್ತಿದ್ದರು. ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‌ನ ಮೂಲಕವೇ 1.20 ಲಕ್ಷ ರೈತರು ಬೆಳೆವಿಮೆಗಾಗಿ ಪ್ರೀಮಿಯಂ ತುಂಬುತ್ತಿದ್ದರು. ಉಳಿದ ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದ ಸಾಲದ ಆಧಾರದ ಮೇಲೆ ಬೆಳೆವಿಮೆ ಮಾಡಿಸಲಾಗುತ್ತಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಾದ್ಯಂತ ಕೇವಲ 32 ಸಾವಿರ ರೈತರು ಮಾತ್ರ ಬೆಳೆವಿಮೆ ಮಾಡಿಸಿದ್ದಾರೆ. ಡಿಸಿಸಿ ಬ್ಯಾಂಕ್‌ನಲ್ಲಂತೂ ಈ ವರ್ಷ ಕೇವಲ ಮೂರು ಸಾವಿರ ರೈತರು ಮಾತ್ರ ಬೆಳೆವಿಮೆ ಮಾಡಿಸಿದ್ದಾರೆ. ಒಂದು ವೇಳೆ 2.50 ಲಕ್ಷ ರೈತರು ಬೆಳೆವಿಮೆ ಮಾಡಿಸಿದ್ದಲ್ಲಿ ಜಿಲ್ಲೆಗೆ ಏನಿಲ್ಲವೆಂದರೂ 1000 ಕೋಟಿ ರೂ. ಬೆಳೆವಿಮೆ (ಪರಿಹಾರ) ಬರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಬೆಳೆವಿಮೆ ಬಾರದೆ ಪರಿಹಾರಕ್ಕಿಂತ ರೈತರು ಕಟ್ಟಿದ್ದ ಪ್ರೀಮಿಯಂ ಮೊತ್ತವೇ ಜಾಸ್ತಿಯಾಗುತ್ತಿರುವುದರಿಂದ ಜತೆಗೆ ಸಾಲ ಮನ್ನಾವಾಗಿ ಹೊಸದಾಗಿ ರೈತರಿಗೆ ಸಾಲ ಸಿಗದೆ ಇರುವುದರಿಂದ ಬೆಳೆವಿಮೆ ಮಾಡಿಸಲಿಕ್ಕಾಗಿಲ್ಲ. ಕಳೆದ ವರ್ಷ ರೈತರು 1.05 ಕೋಟಿ ಬೆಳೆವಿಮೆಗೆಂದು ಪ್ರೀಮಿಯಂ ತುಂಬಿದ್ದರೆ ವಿಮಾ ಕಂಪನಿಯಿಂದ 60 ಲಕ್ಷ ರೂ. ಮಾತ್ರ ಪರಿಹಾರ ಬಂದಿದೆ. 2018-19ರಲ್ಲಿ 70 ಕೋಟಿ ರೂ. ಪ್ರೀಮಿಯಂ ತುಂಬಿದ್ದರೆ ವಿಮೆ ಮಾತ್ರ 10 ಕೋಟಿ ರೂ. ಬಂದಿದೆ.

ಜುಲೈ, ಆಗಸ್ಟ್‌, ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ನಲ್ಲಿ ಸುರಿದ ಭಾರಿ ಮಳೆಯಿಂದ ಒಟ್ಟಾರೆ 346 ಕೋಟಿ ರೂ. ಬೆಳೆ ಹಾನಿಯಾಗಿದೆ ಎಂದು ಜಂಟಿ ಸರ್ವೆ ವರದಿ ಆಧಾರದ ಮೇಲೆ ಸರ್ಕಾರಕ್ಕೆ ಮಾಹಿತಿ ಸಲ್ಲಿಸಲಾಗಿದೆ.  –ರತೀಂದ್ರನಾಥ್‌ ಸುಗೂರ, ಜಂಟಿ ಕೃಷಿ ನಿರ್ದೇಶಕ

 

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next