Advertisement

ಹಂಪಿ ಸ್ಮಾರಕಗಳಿಗೆ ಬೇಕಿದೆ ರಕ್ಷಣೆ

07:21 PM Mar 13, 2021 | Team Udayavani |

ಹೊಸಪೇಟೆ: ವಿಶ್ವ ಪರಂಪರೆ ತಾಣ ಹಂಪಿ ಸ್ಮಾರಕಗಳಿಗೆ ರಕ್ಷಣೆ ಕೊರತೆ ಕಾಡುತ್ತಿದ್ದು, ಪದೇ, ಪದೇ, ಸ್ಮಾರಕಗಳ ಉರುಳಿ ಬೀಳುತ್ತಿರುವ ಪ್ರಕರಣಗಳೇ ಇದಕ್ಕೆ ಸಾಕ್ಷಿಯಾಗಿವೆ.

Advertisement

ಹೌದು! ಹಂಪಿ ಸಂರಕ್ಷಣೆಗಾಗಿ ಮೂರು ಇಲಾಖೆ ನೂರಾರು ಅಧಿಕಾರಿ-ಸಿಬ್ಬಂದಿಗಳು ಇದ್ದರೂ ಸ್ಮಾರಕಗಳಿಗೆ ಧಕ್ಕೆಯಾಗುವಂತ ಪ್ರಕರಣಗಳು ಮೇಲಿಂದ ಮೇಲೆ ಘಟಿಸುತ್ತಲೇ ಇವೆ.

ಕೇಂದ್ರ ಹಾಗೂ ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸೇರಿದಂತೆ ಮೇಲಾಗಿ ಹಂಪಿ ವಿಶ್ವ ಪರಂಪರೆ ನಿರ್ವಾಹಣಾ ಪ್ರಾಧಿಕಾರವೂ ಇದ್ದರೂ ಹಂಪಿ ಸ್ಮಾರಕ ರಕ್ಷಣೆ ಕೊರತೆ ಕಾಡುತ್ತಿದೆ. ಹಂಪಿ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಖರ್ಚಾಗುತ್ತಿದ್ದರೂ ಸ್ಮಾರಕಗಳು ಒಂದು, ಒಂದಾಗಿ ಉರುಳಿ ಬೀಳುತ್ತಿರುವುದು ಇಲಾಖೆಗಳು ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಶುಕ್ರವಾರ ಕಮಲ ಮಹಲ್‌ನ ಹೊರ ಆವರಣದ ಗೋಡೆ ಕುಸಿದು ಬಿದ್ದಿರುವ ಪ್ರಕರಣವೇ ತಾಜಾ ಉದಾರಣೆಯಾಗಿದೆ. ಇದಕ್ಕೆ ಅಂಟಿಕೊಂಡಿರುವ ಕೋಟೆಯ ಕಾವಲುಗಾರ ಗೋಪುರದ ಹತ್ತಿರದ ಒಂದು ಭಾಗದ ಕೋಟೆ ಶಿಥಿಲವಾಗಿದ್ದು, ಅದು ಕೂಡ ಬೀಳುವ ಹಂತದಲ್ಲಿದೆ.

ಭೇಟಿ: ವಿಜಯನಗರ ಅರಸ ವಂಶಸ್ಥ ಶ್ರೀಕೃಷ್ಣ ದೇವರಾಯ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಉಪ ಅಧೀಕ್ಷಕ ಕಾಳಿಮುತ್ತು ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಜಾರರಾಮ ದೇವಾಲಯದ ಹಿಂಭಾಗದ ದಂಡನಾಯಕ ಕೋಟೆ, ಕಡಲೆಕಾಳು ಗಣಪತಿ

ದೇವಾಲಯದ ಹತ್ತಿರದ ಶಿವರಾಮಧೂತ ಮಠಕ್ಕೆ ಅಂಟಿಕೊಂಡಿರುವ ಕೋಟೆ ಸೇರಿದಂತೆ ಇತರೆ ಸ್ಮಾರಕಗಳು ಶಿಥಲಾವ್ಯಸ್ಥೆ ತಲುಪಿದ್ದು, ಬೀಳುವ ಮುನ್ನ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.

Advertisement

ಸ್ಮಾರಕ ಕುಸಿತ: ವಿರೂಪಾಕ್ಷೇಶ್ವರ ದೇವಾಲಯದ ರಥ ಬೀದಿಯ ಸಾಲು ಕೆಲ ಸಾಲು ಮಂಟಪ, ವಿರೂಪಾಕ್ಷ ದೇವಾಲಯ ಹಿಂಭಾಗದಲ್ಲಿರುವ ಲೋಕಪಾವಣಿ ಪುಷ್ಕರಣಿ ಹತ್ತಿರ ಶಿವಾ ಮಂದಿರದ ಗೋಡೆ, ತುಲಾಭಾರ ಮಂಟಪದ ಬಲ ಭಾಗದಲ್ಲಿರುವ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಮುಂದಿನ ಗೋಡೆ, ಕುದುರೆ ಮಂಟಪ, ಕೃಷ್ಣ ಬಜಾರ್‌ನ ಸಾಲು ಮಂಟಪ ಸೇರಿ ಅಪರೂಪದ ಸ್ಮಾರಕಗಳು ಕುಸಿದು ಬಿದ್ದಿವೆ. ಕೆಲವೆಡೆ ಜೀರ್ಣೋದ್ಧಾರ ಕಾರ್ಯ ಕೂಡ ನಡೆಯುತ್ತಿದೆ. ಕೆಲವೆಡೆ ನೆಲದ ಮೇಲೆ ಉರುಳಿ ಬಿದ್ದ ಅವಶೇಷಗಳು ಮೂಕ ವೇದನೆ ಅನುಭವಿಸುತ್ತಿವೆ.

ನಿಧಿಚೋರರ ದಾಳಿ: ನಿಧಿ ಚೋರರ ದಾಳಿಗೆ ಹಲವು ದೇವಾಲಯದ ಗರ್ಭಗೃಹಗಳನ್ನು ಅಗೆದು ಹಾನಿ ಮಾಡಲಾಗಿದೆ. ಕೆಲ ವಿಗ್ರಹಗಳನ್ನು ವಿರೂಪಗೊಳಿಸಲಾಗಿದೆ. ಈ ಹಿಂದೆ ನಿಧಿ ಆಸೆಗಾಗಿ ಮಲ್ಯಾವಂತ ರಘುನಾಥ ದೇವಾಲಯದ ಗಾಳಿಗೋಪುರವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು. ಹಂಪಿ ಸ್ಮಾರಕಗಳು ಉರುಳಿ(ಹಾನಿ)ಬೀಳುವ ಮುನ್ನ ಅಧಿ ಕಾರಿಗಳು ಅವುಗಳ ಸಂರಕ್ಷಣೆ ಅಗತ್ಯ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಮಾರಕ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ವಿಜಯನಗರ ಸಂಸ್ಕೃತಿ ಸ್ಮಾರಕ ಸಂರಕ್ಷಣಾ ಸೇನೆ ಆಗ್ರಹಿಸಿದೆ.

ಪಿ. ಸತ್ಯನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next