ಹೊನ್ನಾವರ: ಕಳೆದೊಂದು ತಿಂಗಳಿಂದ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ಬೇಡಿಕೆ ಎಲ್ಲರ ಬೆಂಬಲ ಪಡೆದಿದೆ. ಇರುವ ವ್ಯವಸ್ಥೆಯೇ ಇನ್ನೊಂದಿಷ್ಟು ಸುಧಾರಿಸಬೇಕಾದ, ಪಾರದರ್ಶಕವಾಗಬೇಕಾದ ಅಗತ್ಯವಿದೆ ಅನ್ನುತ್ತದೆ ಜನರ ಅಭಿಪ್ರಾಯವನ್ನು ಧ್ವನಿಸಿದ ಸ್ಥಳೀಯ ಪತ್ರಿಕೆಗಳ ವರದಿ.
ಆಯುಷ್ಮಾನ್ ಯೋಜನೆ ಲಾಭ ಪಡೆಯಲು ಇರುವ ಕಂಟಕ, ರೋಗಿಗಳು ಪಡುವ ಸಂಕಟ ದಾಖಲೆ ಸಹಿತ ವರದಿಯಾಗಿದ್ದು ರಾಜ್ಯ ಆರೋಗ್ಯ ಇಲಾಖೆ ಬದಲಾಯಿಸದಿದ್ದರೆ ಜಿಲ್ಲೆಯ ಶಾಸಕರು ವಿಧಾನಸಭೆಯಲ್ಲಿ ಧ್ವನಿ ಎತ್ತಬೇಕಾದ ಅಗತ್ಯವಿದೆ.
ಕಾರವಾರದಲ್ಲಿ ಅಪಘಾತದಲ್ಲಿ ಕಾಲು ತುಂಡಾದವರನ್ನು ಜಿಲ್ಲೆಯ ಹೊರಗಿನ ಆಸ್ಪತ್ರೆಗೆ ಒಯ್ಯಲು ಸಕಾಲದಲ್ಲಿ ಸರ್ಕಾರಿ ಅಂಬ್ಯುಲೆನ್ಸ್ ಸಿಗಲಿಲ್ಲ. ಜಿಲ್ಲಾಸ್ಪತ್ರೆಯಲ್ಲಿದ್ದ ಒಂದು ಅಂಬ್ಯುಲೆನ್ಸಿಗೆ ಅನಾರೋಗ್ಯವಾದ ಕಾರಣ ಚಿಕಿತ್ಸೆಗೆ ಹುಬ್ಬಳ್ಳಿಗೆ ಹೋಗಿತ್ತು. ಇನ್ನೊಂದು ಹಳತಾಗಿ ಓಡುವ ಪರವಾನಗಿ ಕಳೆದುಕೊಂಡಿತ್ತು, 108 ಸಿಗಲಿಲ್ಲ. ಕಾರವಾರದ ಸಾಮಾಜಿಕ ಕಾರ್ಯಕರ್ತ ಮಾಧವ ನಾಯ್ಕ ಬಳಗ ಇದಕ್ಕೆ ಬೇಸರಗೊಂಡು 108 ಅಂಬ್ಯುಲೆನ್ಸಿಗೆ ಬ್ಯಾಂಡೇಜ್ ಸುತ್ತಿ ಘೋಷಣೆ ಬರೆದು ಪ್ರತಿಭಟಿಸಿದ್ದಾರೆ. ಖಾಸಗಿ ಅಂಬ್ಯುಲೆನ್ಸ್‌ನಿಂದ ಗಾಯಾಳುವನ್ನು ಕಳಿಸಿಕೊಡಲಾಯಿತಂತೆ.
ಖಾಸಗಿ ಅಂಬ್ಯುಲೆನ್ಸ್‌ಗಳು ನಿರ್ವಹಣಾ ವೆಚ್ಚವಾಗಿ ಶೇ. 25-50ರಷ್ಟು ಬಾಡಿಗೆ ಹೆಚ್ಚು ಪಡೆದರೂ ಪರವಾಗಿರಲಿಲ್ಲ. ದುಪ್ಪಟ್ಟು ಬಾಡಿಗೆ ಪಡೆಯುತ್ತವೆ. ಗಾಯಾಳು, ರೋಗಿ ಅಥವಾ ಅವರ ಸಂಬಂಧಿಕರು ಹೇಳಿದ ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಯಾವುದೋ ಆಮಿಷದಿಂದ ಅಥವಾ ಯಾವುದೋ ವೈದ್ಯರಿಗಾಗಿ ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ಎಂದು ಪತ್ರಿಕೆಗಳು ಬರೆದಿವೆ. ಖಾಸಗಿ ದೊಡ್ಡ ಆಸ್ಪತ್ರೆಗಳು ಪೈಪೋಟಿಗಿಳಿದು ಗ್ರಾಮೀಣ ಹಾಗೂ ಸಣ್ಣ ಊರಿನ ವೈದ್ಯರೊಂದಿಗೆ ಸಂಬಂಧ ಇಟ್ಟುಕೊಳ್ಳುತ್ತವೆ. ಅವರು ತಮಗೆ ಅನುಕೂಲವಿದ್ದ ಆಸ್ಪತ್ರೆಗೆ ರೋಗಿಗಳನ್ನು ಕಳಿಸುತ್ತಾರೆಯೇ ವಿನಃ ಚಿಕಿತ್ಸಾ ಸೌಲಭ್ಯವಿದ್ದ ಆಸ್ಪತ್ರೆಗೆ ಅಲ್ಲ ಎಂಬ ದೂರು ಬಹುಕಾಲದಿಂದ ಇದೆ. ಹತ್ತಿರದ ಊರಿನ ಆಸ್ಪತ್ರೆಗೆ ಪತ್ರಕೊಟ್ಟರೆ ಅದನ್ನು ಕಿಸೆಯಲ್ಲಿಟ್ಟುಕೊಂಡು ಅಂಬ್ಯುಲೆನ್ಸ್ ಚಾಲಕ ದೂರದ ಆಸ್ಪತ್ರೆಗೆ ಒಯ್ಯುತ್ತಾನೆ. ಎಲ್ಲ ಚಿಕಿತ್ಸಾ ಸೌಲಭ್ಯವಿದ್ದ ದೂರದ ಆಸ್ಪತ್ರೆಗೆ ಪತ್ರಕೊಟ್ಟರೆ ಹತ್ತಿರದ ಆಸ್ಪತ್ರೆಗೆ ಸೇರಿಸುತ್ತಾನೆ. ಇದು ಕೇವಲ ವದಂತಿ ಅಲ್ಲ. ಕಾರವಾರದಿಂದಲೋ, ಕುಮಟಾದಿಂದಲೋ ಹೃದಯಾಘಾತವಾದ ರೋಗಿಯೊಬ್ಬನನ್ನು ತುರ್ತು ಎಂಜಿಯೋಪ್ಲಾಸ್ಟ್‌ಗಾಗಿ ಒಂದು ಆಸ್ಪತ್ರೆಗೆ ಕಳಿಸಿದರೆ ಅಲ್ಲಿ ಆ ಸೌಲಭ್ಯ ಇದ್ದರೂ ತೆರೆದ ಹೃದಯ ಚಿಕಿತ್ಸೆ ಮಾಡುವ ಪರಿಸ್ಥಿತಿ ಬಂದಾಗ ಅವರೇ ಇನ್ನೊಂದು ಆಸ್ಪತ್ರೆಗೆ ಕಳಿಸಿಕೊಡುತ್ತಾರೆ.
ಹಳ್ಳಿಯ ಆಸ್ಪತ್ರೆ ವೈದ್ಯರೊಬ್ಬರು ವಿವರಗಳನ್ನು ದೊಡ್ಡ ಆಸ್ಪತ್ರೆ ವೈದ್ಯರಿಗೆ ದೂರವಾಣಿಯಲ್ಲಿ ತಿಳಿಸಿ, ಹೃದಯಾಘಾತ ಆದವರನ್ನು ಕಳಿಸಿಕೊಡುತ್ತಾರೆ. ಅಲ್ಲಿ ಆಪರೇಶನ್ ಥಿಯೇಟರ್ ಸಜ್ಜುಗೊಳಿಸಿಕೊಂಡಿರುತ್ತಾರೆ. ಆದರೆ ಆ ರೋಗಿ ಅಲ್ಲಿ ಮುಟ್ಟಿರುವುದಿಲ್ಲ, ಇನ್ನೆಲ್ಲೋ ಹೋಗಿರುತ್ತಾನೆ. ನಿತ್ಯ ಪತ್ರಿಕೆಯಲ್ಲಿ ಒಂದಲ್ಲ ಒಂದು ಊರಿನ ಸರ್ಕಾರಿ ಆಸ್ಪತ್ರೆಯ ಸುದ್ದಿ ಬರುತ್ತಲೇ ಇರುತ್ತದೆ. ಪಕ್ಕದ ತಾಲೂಕಿನ ಮಹಿಳೆಯೊಬ್ಬರಿಗೆ ಗರ್ಭಕೋಶದಲ್ಲಿ ತೊಂದರೆ ಇದೆ, ತೆಗೆಯಬೇಕು ಎಂದು ಹೇಳಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ ಏನು ಕತ್ತರಿಸಿದರೋ ಗೊತ್ತಿಲ್ಲ. ಕುಂದಾಪುರ ಆಸ್ಪತ್ರೆಯಲ್ಲಿ ಸ್ಕ್ಯಾನ್ ಮಾಡಿದಾಗ ಗರ್ಭಕೋಶ ಇದ್ದಲ್ಲೇ ಇತ್ತು.
ನಿತ್ಯ ಇಂತಹ ಹಗರಣ ಮಾಡುವವರು ರೋಗಿಗಳ ಕುಟುಂಬದವರಿಗೆ ಗೊತ್ತಾದರೆ ಕೈಕಾಲು ಹಿಡಿಯುತ್ತಾರೆ. ಇಂಥವರ ಸಹವಾಸ ಬೇಡ ಎಂದರೆ ಬೇರೆ ಜಿಲ್ಲೆಗೆ ಹೋಗಲು ಆಯುಷ್ಮಾನ್ ಪಡೆಯಲು ತೊಂದರೆ, ತುರ್ತು ಚಿಕಿತ್ಸೆಗೆ ಹೊರಟರೆ ಹೋಗಬೇಕಾದ ಆಸ್ಪತ್ರೆಗೆ ತಲುಪುವುದಿಲ್ಲ, ಮಧ್ಯವರ್ತಿಗಳ ಹಾವಳಿ. ಭಾರತೀಯ ವೈದ್ಯಕೀಯ ಸಂಘ, ಆರೋಗ್ಯ ಇಲಾಖೆ ಜೀವದೊಂದಿಗೆ ಚೆಲ್ಲಾಟವಾಡುವ ಮಧ್ಯವರ್ತಿಗಳ, ಹೊಣೆಗೇಡಿಗಳ ಕಾಟವನ್ನು ತಡೆಯಬೇಕಾಗಿದೆ. ನಿತ್ಯ ರೋಗಿಗಳ ಮಧ್ಯೆ ವ್ಯವಹರಿಸುವ, ಸಾವು ನೋವುಗಳ ಸಾಲುಸಾಲು ನೋಡುವ ವೈದ್ಯಕೀಯ ಕ್ಷೇತ್ರಕ್ಕೆ ಹಣದ ವ್ಯಾಮೋಹದ ಗರಬಡಿಯುತ್ತ ಹೋದರೆ, ಆತ್ಮಸಾಕ್ಷಿ ಮೌನವಾದರೆ ಬಡವರ ಗತಿಯೇನು ?
•ಜೀಯು, ಹೊನ್ನಾವರ