Advertisement

150 ವರ್ಷದ ಹಳೆಯ ಉಪನೋಂದಣಿ ಕಚೇರಿ ಕಟಡಕ್ಕೆ  ಬೇಕು ಮಾಹಿತಿ ಫ‌ಲಕ

11:31 AM Dec 06, 2018 | Team Udayavani |

ನಗರ : ನೂರೈವತ್ತು ವರ್ಷಗಳ ಇತಿಹಾಸದ ಉಪನೋಂದಣಿ ಕಚೇರಿ ಪ್ರಸ್ತುತ ಪುತ್ತೂರು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಂಡಿದೆ. ಮೊದಲಿದ್ದ ಕಟ್ಟಡದಲ್ಲಿ ಕಚೇರಿ ಇಲ್ಲ ಎನ್ನುವ ಮಾಹಿತಿ ಹಲವರಿಗಿಲ್ಲ. ಹಾಗಾಗಿ ಹಳೆ ಕಟ್ಟಡದತ್ತ ಜನರು ಹೋಗುತ್ತಲಿದ್ದಾರೆ. ಕಚೇರಿಗೆ ರಜೆಯೆಂದು ಭಾವಿಸಿ ಜನ ಹಿಂತಿರುಗುತ್ತಿದ್ದಾರೆ.

Advertisement

ಸ್ಥಳಾಂತರಗೊಂಡ ಕುರಿತು ಕನಿಷ್ಠ ಬೋರ್ಡ್‌ (ನಾಮಫ‌ಲಕ) ಹಾಕಿದ್ದರೆ ಉತ್ತಮ ಎನ್ನುವ ಅಭಿಪ್ರಾಯ ಜನರದ್ದು. ಪ್ರಸ್ತುತ ಹಳೆ ಕಟ್ಟಡದತ್ತ ಹೋಗಿ ಅನಂತರ ಹೊಸ ಕಚೇರಿಯತ್ತ ಜನ ಸಾಗುತ್ತಿದ್ದಾರೆ. ಕೆಲವರಿಗೆ ಮಾಹಿತಿಯ ಕೊರತೆಯಿಂದ ಹಿಂದಕ್ಕೆ ಹೋಗುತ್ತಿದ್ದಾರೆ.

ಪುತ್ತೂರು ಸರಕಾರಿ ಆಸ್ಪತ್ರೆಗೆ ಹೊಂದಿಕೊಂಡು ಇರುವ ಜಾಗದಲ್ಲಿ ಸುಮಾರು 120 ವರ್ಷಗಳ ಕಾಲ ಪುತ್ತೂರು ಉಪನೋಂದಣಿ ಇಲಾಖೆ ಕಾರ್ಯನಿರ್ವಹಣೆ ಮಾಡುತ್ತಿತ್ತು. ಡಿ. 1ರಂದು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಂಡು, ಡಿ. 3ರಂದು ಉದ್ಘಾಟನೆಗೊಂಡಿದೆ. ಇದೀಗ ತನ್ನೆಲ್ಲ ಕಾರ್ಯವೈಖರಿಯನ್ನು ಮಿನಿ ವಿಧಾನಸೌಧದಿಂದಲೇ ನಿರ್ವಹಿಸುತ್ತಿದೆ. ಹಳೆ ಕಚೇರಿಯ ಕಟ್ಟಡದ ಆವರಣ ಗೋಡೆಯ ಗೇಟ್‌ಗೆ ಬೀಗ ಹಾಕಲಾಗಿದೆ. ನೋಂದಣಿಗಾಗಿ ಬರುವ ಜನಸಾಮಾನ್ಯರನ್ನು ಇದೇ ಸ್ವಾಗತಿಸುತ್ತಿದೆ.

ಒಂದಷ್ಟು ಮಂದಿಗೆ ಪಕ್ಕದಲ್ಲೇ ಇರುವ ಪತ್ರಕರ್ತರು, ರಿಕ್ಷಾ ಚಾಲಕರು ತಿಳಿಸುತ್ತಾರೆ. ಇಲ್ಲದೇ ಇದ್ದರೆ ಉಪನೋಂದಣಿ ಕಚೇರಿಗೆ ಇಂದು ರಜೆ ಎಂದು ಭಾವಿಸಿಕೊಳ್ಳುವ ಜನರು ತಮ್ಮ ಮನೆ ದಾರಿ ಹಿಡಿಯುತ್ತಿದ್ದಾರೆ. ಆದ್ದರಿಂದ ಉಪನೋಂದಣಿ ಕಚೇರಿಯ ಹಳೆ ಕಟ್ಟಡದ ಮುಂಭಾಗ ಒಂದು ಮಾಹಿತಿ ಫ‌ಲಕ ಅಳವಡಿಸುವ ಅಗತ್ಯ ಇದೆ.

ದುರುಪಯೋಗ ಆಗಬಹುದು
ಹಲವು ದಾಖಲಾತಿಗಳಿಗಾಗಿ ಉಪನೋಂದಣಿ ಕಚೇರಿಯನ್ನು ಜನರು ಅವಲಂಬಿಸಿದ್ದಾರೆ. ಮದುವೆ ನೋಂದಣಿಯಿಂದ ಹಿಡಿದು ಬ್ಯಾಂಕ್‌ ಸಾಲಕ್ಕೆ ಇಸಿ ನೀಡುವವರೆಗೆ ಉಪನೋಂದಣಿ ಇಲಾಖೆಯ ಕೆಲಸ ಇದೆ. ಇಂತಹ ಪುಟ್ಟ ಹಾಗೂ ಅಷ್ಟೇ ಮಹತ್ವದ ಕೆಲಸಗಳಿಗೆ ಜನರು ದಿನನಿತ್ಯ ಈ ಕಚೇರಿಯನ್ನು ಅವಲಂಬಿಸಿರುತ್ತಾರೆ.

Advertisement

ಇದಲ್ಲದೆ, ಜಾಗದ ನೋಂದಣಿ, ಭೂ ವ್ಯವಹಾರಗಳಿಗೆ ನೋಂದ ಣಿಯ ಅಗತ್ಯ ಇದೆ. ಇಂತಹ ದೊಡ್ಡ ಮಟ್ಟಿನ ವ್ಯವಹಾರಗಳಿಗೆ ಮಧ್ಯವರ್ತಿ ಅಥವಾ ದಸ್ತಾವೇಜು ಬರಹಗಾರರ ಸಹಾಯ ಪಡೆದುಕೊಳ್ಳಬಹುದು. ಆದರೆ ಸಣ್ಣಪುಟ್ಟ ಕೆಲಸಗಳಿಗಾಗಿ ಬರುವವರು ನೇರವಾಗಿ ನೋಂದಣಿ ಇಲಾಖೆಯನ್ನು ಸಂಪರ್ಕಿಸುತ್ತಾರೆ. ಇಂತಹ ಜನರ ಅಮಾಯಕತೆಯನ್ನು ಬ್ರೋಕರ್‌ಗಳು ಸರಿಯಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಅವಕಾಶ ನೀಡದಂತೆ ಸಂಬಂಧಪಟ್ಟವರು ಮಾಹಿತಿ ಇರುವ ನಾಮ ಫ‌ಲಕ ಅಳವಡಿಸುವ ಅಗತ್ಯ ಇದೆ. 

ಅಸ್ಪಷ್ಟ ಸೂಚನ ಫ‌ಲಕ!
ಗೇಟ್‌ನಿಂದ ಸಾಕಷ್ಟು ದೂರದಲ್ಲಿ ಇರುವ ಉಪನೋಂದಣಿ ಇಲಾಖೆ ಕಟ್ಟಡದಲ್ಲಿ ಸಣ್ಣದೊಂದು ಬೋರ್ಡ್‌ ಕಾಣಿಸುತ್ತಿದೆ. ಆದರೆ ಇದರಲ್ಲೇನು ಬರೆದಿದ್ದಾರೆ ಎಂದು ಕಾಣಿಸುತ್ತಿಲ್ಲ. ಮಾತ್ರವಲ್ಲ, ಇದನ್ನು ಬರೆದಿರುವುದು ಮಾರ್ಕರ್‌ ಪೆನ್‌ನಿಂದ. ಯಾವುದೇ ಕಾರಣಕ್ಕೂ ದೂರದಲ್ಲಿರುವ ಗೇಟ್‌ನಲ್ಲಿ ನಿಂತವರಿಗೆ ಇದು ಕಾಣಿಸದು. ಆದ್ದರಿಂದ ಗೇಟ್‌ ಬಳಿಯೇ ಬೋರ್ಡ್‌ ಅಳವಡಿಸಬೇಕು ಎನ್ನುವ ಆಗ್ರಹ ಕೇಳಿಬಂದಿದೆ.

ಜಾಗ ಯಾರದ್ದು?
ಸ್ವಲ್ಪ ಸಮಯಗಳ ಮೊದಲಿನವರೆಗೆ ಇದು ಉಪನೋಂದಣಿ ಕಚೇರಿಯ ಜಾಗ ಆಗಿತ್ತು. ಆದರೆ ಇಬ್ರಾಹಿಂ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ಆರ್‌ ಟಿಸಿಯನ್ನು ಪಕ್ಕದ ಸರಕಾರಿ ಆಸ್ಪತ್ರೆ ಹೆಸರಿಗೆ ವರ್ಗಾಯಿಸಿದ್ದರು. ಆದ್ದರಿಂದ ಈಗ ಈ ಜಾಗ ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತಕ್ಕೆ ಸೇರಿದ್ದು. ಹಾಗೆಂದು ಸರಕಾರಿ ಆಸ್ಪತ್ರೆಯ ಆಡಳಿತ ಇಲ್ಲಿ ನೋಟಿಸ್‌ ಬೋರ್ಡ್‌ ಹಾಕಬೇಕೆಂದಲ್ಲ. ಉಪನೋಂದಣಿ ಇಲಾಖೆ ಹಾಕುವ ಬೋರ್ಡ್‌ಗೆ ಸರಕಾರಿ ಆಸ್ಪತ್ರೆಯ ಯಾವ ತಕರಾರೂ ಇರುವುದಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next