Advertisement

ಮಗನ ಟ್ರೋಫಿಗಳನ್ನು ಹರಿದ ಸೀರೆಯಲ್ಲಿ ಸುತ್ತಿಟ್ಟ ಬಡತಾಯಿ!

11:13 PM Aug 10, 2022 | Team Udayavani |

ಕೋಲ್ಕತಾ: ಭಾರತದ ಬಹುತೇಕ ಕ್ರೀಡಾಪ್ರತಿಭೆಗಳೆಲ್ಲ ಬಡತನದ ಬೆಂಕಿಯಲ್ಲಿ ಅರಳಿ ಮಿಂಚಿದ ಕಥನ ಏಕಕಾಲಕ್ಕೆ ನೋವು ಮತ್ತು ಸಂಭ್ರಮವೆರಡನ್ನೂ ತೆರೆದಿಡುತ್ತದೆ. ಇದಕ್ಕೆ ಅಚಿಂತ ಶೆಯುಲಿ ಕೂಡ ಹೊರತಲ್ಲ.
ಮೊನ್ನೆಯ ಕಾಮನ್ವೆಲ್ತ್‌ ಗೇಮ್ಸ್‌ನ 73 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದ ಸಾಧಕನೀತ.

Advertisement

ಪಶ್ಚಿಮ ಬಂಗಾಲದ ಹೌರಾ ಜಿಲ್ಲೆಯ ದೇವಲ್ಪುರ್‌ ಎಂಬ ಕುಗ್ರಾಮದಲ್ಲಿ ಇವರ ಮನೆ ಇದೆ. ಇದನ್ನು ಮನೆ ಎನ್ನುವುದಕ್ಕಿಂತ ಪುಟ್ಟದೊಂದು ಗೂಡು ಎನ್ನಬಹುದು. ಇದರಲ್ಲಿರುವುದು ಎರಡೇ ಕೋಣೆ. ಕಪಾಟು ಇಲ್ಲವೇ ಇಲ್ಲ. ಹೀಗಾಗಿ ಮಗ ಗೆದ್ದ ಟ್ರೋಫಿಗಳನ್ನೆಲ್ಲ ಪೂರ್ಣಿಮಾ ಶೆಯುಲಿ ತಮ್ಮ ಅರ್ಧ ಹರಿದ ಸೀರೆಗಳಲ್ಲಿ ಸುತ್ತಿಟ್ಟಿದ್ದಾರೆ. ಇನ್ನು ಇದೆಲ್ಲ ನೂತನ ಕಪ್‌ಬೋರ್ಡ್‌ ಮತ್ತು ಶೋಕೇಸ್‌ಗಳನ್ನು ಅಲಂಕರಿಸಲಿದೆ ಎಂಬುದು ಅವರ ಪಾಲಿನ ಬಹು ದೊಡ್ಡ ಸಂತಸ!

“ಅಚಿಂತ ಬಂದ ಬಳಿಕ ಮಾಧ್ಯಮದವರು, ಛಾಯಾ ಚಿತ್ರಗ್ರಾಹಕರೆಲ್ಲ ನಮ್ಮ ಮನೆಗೆ ಆಗಮಿಸ ಲಿದ್ದಾರೆ ಎಂಬುದು ನನಗೆ ಗೊತ್ತು. ಅವನು ಗೆದ್ದ ಪದಕ, ಟ್ರೋಫಿಗಳನ್ನೆಲ್ಲ ಸ್ಟೂಲ್‌ ಒಂದರ ಮೇಲೆ ರಾಶಿ ಹಾಕಿಟ್ಟಿದ್ದೇನೆ. ಇದನ್ನು ಇಷ್ಟು ಕಾಲ ಹರಿದ ಸೀರೆಗಳಲ್ಲಿ ಜೋಪಾನವಾಗಿರಿಸಿದ್ದೆ’ ಎಂದು ಪೂರ್ಣಿಮಾ ಶೆಯುಲಿ ಖುಷಿಯಲ್ಲೇ ನುಡಿದಿದ್ದಾರೆ. ಆಗ ಅವರ ಕಣ್ಣಂಚಿನಲ್ಲಿ ಬಡತನದ ರೇಖೆ ಗೋಚರಿಸುತ್ತಲೇ ಇರಲಿಲ್ಲ.

2013ರಲ್ಲಿ ಅಚಿಂತ ಅವರ ತಂದೆಯ ನಿಧನ ವಾಗಿತ್ತು. ಅಂದಿನಿಂದ ಮಕ್ಕಳಾದ ಆಲೋಕ್‌ ಮತ್ತು ಅಚಿಂತ ಅವರನ್ನು ಬೆಳೆಸುವ ಸಂಪೂರ್ಣ ಹೊಣೆಯನ್ನು ಪೂರ್ಣಿಮಾ ಅವರೇ ಹೊತ್ತಿದ್ದರು.

“ಇಂದು ನನಗೆ ದೇವರಲ್ಲಿ ನಂಬಿಕೆ ಮೂಡಿತು. ಅದೆಷ್ಟು ಕಷ್ಟಪಟ್ಟು ಇಬ್ಬರು ಮಕ್ಕಳನ್ನು ಬೆಳೆಸಿದೆ ಎಂಬುದು ನನಗಷ್ಟೇ ಗೊತ್ತು. ಕೆಲವು ದಿನ ಊಟಕ್ಕೂ ಕಷ್ಟವಾಗುತ್ತಿತ್ತು. ಮಕ್ಕಳು ಹಸಿವಿನಿಂದ ನಿದ್ದೆ ಹೋದ ದಿನಗಳೂ ಇದ್ದವು. ಇದನ್ನೆಲ್ಲ ಹೇಗೆ ಹೇಳಬೇಕೆಂಬುದೇ ನನಗೆ ತಿಳಿಯುತ್ತಿಲ್ಲ’ ಎಂದು ಪೂರ್ಣಿಮಾ ಹೇಳಿದರು.

Advertisement

ಕೆಲಸ ಅನಿವಾರ್ಯವಾಗಿತ್ತು
ಅಚಿಂತ ಮತ್ತು ಅವರ ಹಿರಿಯ ಸಹೋದರ ಆಲೋಕ್‌ ಸ್ಥಳೀಯ ಉತ್ಪಾದನಾ ಘಟಕದಲ್ಲಿ ಸೀರೆಗಳ ಮೇಲೆ ಜರಿ ಕೆಲಸ ಮಾಡುವುದರ ಜತೆಗೆ ಸರಕುಗಳನ್ನು ಲೋಡ್‌ ಮತ್ತು ಅನ್‌ಲೋಡ್‌ ಮಾಡಬೇಕಾಗಿತ್ತು ಎಂದು ತಾಯಿ ನೆನಪಿಸಿಕೊಂಡರು. ನನ್ನ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವುದನ್ನು ಬಿಟ್ಟು ನನಗೆ ಬೇರೆ ದಾರಿ ಇರಲಿಲ್ಲ. ಇಲ್ಲದಿದ್ದರೆ ನಾವು ಬದುಕುವುದು ಕಷ್ಟಕರವಾಗಿತ್ತು” ಎಂದು ಹೇಳಿದರು.

ತನ್ನ ಬಾಲ್ಯದ ಬಡತನ ಮತ್ತು ಕಷ್ಟವನ್ನು ನೆನಪಿಸಿಕೊಂಡ 20ರ ಹರೆಯದ ಅಚಿಂತ ತನ್ನ ಸಾಧನೆಯನ್ನು ತಾಯಿ ಮತ್ತು ತರಬೇತುದಾರ ಅಸ್ತಮ್‌ ದಾಸ್‌ ಅವರಿಗೆ ಅರ್ಪಿಸಿದ್ದರು.

“ಒಳ್ಳೆಯ ಕೆಲಸ ಮಾಡಿದ ಅನಂತರ ಮನೆಗೆ ಹಿಂದಿರುಗುತ್ತಿರುವುದು ತುಂಬಾ ಸಂತೋಷವಾಗಿದೆ. ನನ್ನ ತಾಯಿ ಮತ್ತು ತರಬೇತುದಾರ ಅಸ್ತಮ್‌ ದಾಸ್‌ ಅವರಿಂದ ಈ ಸಾಧನೆ ಮಾಡುವಂತಾಗಿದೆ. ಅವರಿಬ್ಬರೂ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಅವರಿಂದಾಗಿಯೇ ನಾನು ಇಷ್ಟು ಎತ್ತರಕ್ಕೆ ಏರಲು ಸಾಧ್ಯವಾಗಿದೆ’ ಎಂದು ಅಚಿಂತ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next