ಬೆಂಗಳೂರು: ಆಡಳಿತದಲ್ಲಿ ತಂತ್ರಜ್ಞಾನ ಇಂದಿನ ಅಗತ್ಯ ಮತ್ತು ಅನಿವಾರ್ಯ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನ, ತಂತ್ರಾಂಶಗಳಿಲ್ಲದೆ ಫಲಾನುಭವಿಗಳಿಗೆ ಸಮರ್ಪಕವಾಗಿ ಸೌಲಭ್ಯ ಒದಗಿಸುವುದು ಕಷ್ಟ ಸಾಧ್ಯ. ನಿಗಮಗಳು ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಬೇಕು ಹಾಗೂ ಯೋಜನೆಗಳನ್ನು ನಿಜವಾದ ಫಲಾನುಭವಿಗಳಿಗೆ ತಲುಪಿಸಿದಾಗ ಮಾತ್ರ ಸರಕಾರದ ಉದ್ದೇಶ ಸಾರ್ಥಕ ಎಂದು ಹೇಳಿದರು.
ಕಳೆದ 4 ವರ್ಷಗಳಿಂದ ವಿವಿಧ ಕಾರಣಗಳಿಂದ ಗಂಗಾ ಕಲ್ಯಾಣ ಕೊಳವೆಬಾವಿ ಕೊರೆಯಲಾಗಿಲ್ಲ. ಪ್ರಸ್ತುತ ಎಲ್ಲ ಅಡೆತಡೆಗಳು ಬಗೆಹರಿದಿದ್ದು ಪ್ರಸಕ್ತ ಸಾಲಿನಲ್ಲಿ ಫಲಾನುಭವಿಗಳಿಗೇ ನೇರ ನಗದು ವರ್ಗಾವಣೆ ಯೋಜನೆಯಡಿ ರಾಜ್ಯಾ ದ್ಯಂತ 17 ಸಾವಿರಕ್ಕೂ ಹೆಚ್ಚು ಕೊಳವೆಬಾವಿ ಕೊರೆಯ ಬೇಕಾಗಿದ್ದು. ಶೀಘ್ರ ಅಧಿಕಾರಿಗಳು ಯೋಜನೆ ಅನುಷ್ಠಾನಕ್ಕೆ ಕ್ರಮವಹಿಸಬೇಕು ಎಂದರು.
ನಿಗಮವು ಪಾರದರ್ಶಕ ಆಡಳಿತ ನೀಡಲು ವಿವಿಧ ತಂತ್ರಾಂಶಗಳ ಅಳವಡಿಕೆ ಮೂಲಕ ಗುಣಾತ್ಮಕ ಹಾಗೂ ತ್ವರಿತಗತಿ ಸೇವೆಯನ್ನು ಫಲಾನುಭವಿಗಳಿಗೆ ನೀಡಿ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ಬಹುಮುಖ್ಯ ಪಾತ್ರ ವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ನಿಗಮವು ರಾಜ್ಯಾದ್ಯಂತ ಎಲ್ಲ ಕಚೇರಿಗಳ ಕೇಂದ್ರೀತ ಕಣ್ಗಾವಲಿನಲ್ಲಿದ್ದು ಪಾರಾದರ್ಶಕ ಆಡಳಿತಕ್ಕೆ ಒಗ್ಗಿಕೊಂಡಿರುವುದು ಶ್ಲಾಘನೀಯ ಎಂದರು.
ಶಾಸಕರಾದ ಎನ್. ಮಹೇಶ್, ಛಲವಾದಿ ನಾರಾಯಣ ಸ್ವಾಮಿ, ಪ. ಜಾ. ಮತ್ತು ಪ. ವರ್ಗಗಳ ಕಲ್ಯಾಣ ಸಮಿತಿ ಆಧ್ಯಕ್ಷ ಎಂ.ಪಿ.ಕುಮಾರಸ್ವಾಮಿ, ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮ ಅಧ್ಯಕ್ಷ ಡಿ.ಎಸ್. ಮುಂತಾದವರಿದ್ದರು.