Advertisement

ಅರ್ಥಿಕ ಸದೃಢತೆಗೆ ತೆರಿಗೆ ಸಂಗ್ರಹಣೆ ಅಗತ್ಯ

06:42 AM May 19, 2019 | Lakshmi GovindaRaj |

ಚಾಮರಾಜನಗರ: ಗ್ರಾಮ ಪಂಚಾಯಿತಿಗಳ ಅರ್ಥಿಕ ಸದೃಢತೆಗೆ ತೆರಿಗೆ ಸಂಗ್ರಹಣೆ ಅವಶ್ಯವಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌. ಲತಾಕುಮಾರಿ ಹೇಳಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಗ್ರಾಪಂಗಳ ಬಿಲ್‌ ಕಲೆಕ್ಟರ್‌ಗಳು ಹಾಗೂ ಡಾಟಾ ಎಂಟ್ರಿ ಅಪರೇಟರ್‌ಗಳಿಗೆ 14ನೇ ಹಣಕಾಸು ಯೋಜನೆಯಡಿ ತಂತ್ರಾಂಶಗಳ ನಿರ್ವಹಣೆ ಮತ್ತು ತೆರಿಗೆ ನಿರ್ಧರಣೆ, ಪರಿಷ್ಕರಣೆ ಹಾಗೂ ವಸೂಲಾತಿ ಕುರಿತು ಅಯೋಜಿಸಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ತೆರಿಗೆ ಬಲವರ್ಧನೆ: ಗ್ರಾಮೀಣಾಭಿವೃದ್ಧಿಯಲ್ಲಿ ಗ್ರಾಪಂಗಳ ಪಾತ್ರ ಪ್ರಮುಖವಾಗಿದೆ. ಗ್ರಾಮಗಳಲ್ಲಿ ವಾಸಿಸುವ ಎಲ್ಲರೂ ಯಾವುದಾದರೊಂದು ತೆರಿಗೆ ಕಟ್ಟಲೇಬೇಕು. ತೆರಿಗೆಯಿಂದ ಯಾರು ಸಹ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮನೆ, ನೀರು, ನಿವೇಶನ ಸೇರಿದಂತೆ ಇತರೆ ಬಗೆಯ ಆಸ್ತಿಗಳಿಗೆ ಪ್ರತಿಯೊಬ್ಬರೂ ತೆರಿಗೆಯನ್ನು ಪಾವತಿಸಬೇಕಾಗಿದೆ.

ವಸೂಲಾದ ತೆರಿಗೆ ಹಣವನ್ನು ಸಂಗ್ರಹಿಸಿ ಗ್ರಾಮಗಳ ಜನೋಪಯೋಗಿ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಗ್ರಾಮೀಣ ಮೂಲಭೂತ ಸೌಲಭ್ಯಗಳಿಗೆ ಬಳಸಿಕೊಳ್ಳಲಾಗುವುದು. ಆಗ ಅದು ಮಾದರಿ ಗ್ರಾಮವಾಗುವ ಮೂಲಕ ಗ್ರಾಪಂಗಳ ಬಲವರ್ಧನೆಗೂ ಸಹಕಾರಿಯಾಗುತ್ತದೆ ಎಂದರು.

ಇತಿಹಾಸ: ತೆರಿಗೆ ಎಂದರೆ ಕಾನೂನಾತ್ಮಕವಾಗಿ ಪ್ರತಿಯೊಬ್ಬರಿಂದ ಅವರ ಆಸ್ತಿ ಸೃಜನೆ ಆಧಾರದ ಮೇಲೆ ಕರ ವಸೂಲಿ ಮಾಡುವುದು ಎಂದರ್ಥ. ತೆರಿಗೆಗೂ ಇತಿಹಾಸವಿದೆ. ತೆರಿಗೆ ಸಂಗ್ರಹಣೆಯನ್ನು 5 ಸಾವಿರ ವರ್ಷಗಳ ಹಿಂದೆ ಈಜಿಪ್ಟ್ ದೇಶ ಜಾರಿಗೆ ತಂದಿತು.

Advertisement

ತದನಂತರ ಎಲ್ಲಾ ದೇಶಗಳು ಇದನ್ನು ಅಳವಡಿಸಿಕೊಂಡು ಪ್ರಗತಿಯ ಪಥದತ್ತ ಸಾಗುತ್ತಿವೆ. ವಿವಿಧ ರಾಷ್ಟ್ರಗಳು ತೆರಿಗೆ ಸಂಗ್ರಹಣೆಯನ್ನು ತಮ್ಮ ಅಭಿವೃದ್ಧಿಯ ಮೂಲವಾಗಿಸಿಕೊಂಡಿವೆ. ನಮ್ಮಲ್ಲಿ ಚಾಣಕ್ಯನ ತೆರಿಗೆ ನೀತಿ ಪ್ರಸಿದ್ಧವಾಗಿತ್ತು ಎಂದು ತಿಳಿಸಿದರು.

ಮಾಹಿತಿ ಕೊರತೆ: ಪ್ರತಿ ಅರ್ಥಿಕ ವರ್ಷದಲ್ಲಿ ಎಲ್ಲಾ ಗ್ರಾಮಪಂಚಾಯಿತಿಗಳಿಗೆ ನಿಗದಿತ ಕರ ವಸೂಲಾತಿಗಾಗಿ ಗುರಿ ನೀಡಲಾಗುತ್ತಿದೆ. 2018-19ನೇ ಸಾಲಿನಲ್ಲಿ ನಮ್ಮ ಜಿಲ್ಲೆಯಲ್ಲಿ ಗ್ರಾಪಂಗಳಿಂದ ಶೇ. 26ರಷ್ಟು ತೆರಿಗೆ ವಸೂಲಿಯಾಗಿದೆ.

ಇದು ಅತೀ ಕಡಿಮೆಯಗಿದೆ. ಗ್ರಾಪಂಗಳ ತೆರಿಗೆ ಸಂಗ್ರಾಹಕರು (ಬಿಲ್‌ ಕಲೆಕ್ಟರ್‌) ಹಾಗೂ ಡಾಟಾ ಎಂಟ್ರಿ ಅಪರೇಟರ್‌ಗಳಿಗೆ ಮಾಹಿತಿ ಅರಿವಿನ ಕೊರತೆ ಇರುವುದೇ ಇದಕ್ಕೆ ಮುಖ್ಯ ಕಾರಣವಾಗಿದ್ದು, ಈ ಪ್ರಸ್ತುತ ತರಬೇತಿ ಆಯೋಜನೆ ಮಾಡಲಾಗಿದೆ ಎಂದು ಸಿಇಒ ತಿಳಿಸಿದರು.

ತೆರಿಗೆ ಸಂಗ್ರಹಣೆಯನ್ನು ಸುಲಭೀಕರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಪರಿಷ್ಕೃತ ನಿರ್ದೇಶನ, ಸುತ್ತೋಲೆ‌ಗಳನ್ನು ಹೊರಡಿಸಿವೆ. ನಮ್ಮ ಗ್ರಾಪಂ ಅಧಿಕಾರಿ, ಸಿಬ್ಬಂದಿ ಅವುಗಳನ್ನು ಮನವರಿಕೆ ಮಾಡಿಕೊಳ್ಳಬೇಕು.

ಜವಾಬ್ದಾರಿ ಅರಿತು ಈ ಬಾರಿ ಗ್ರಾಪಂ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಣೆಯಲ್ಲಿ ಶೇ. 100 ರಷ್ಟು ಪ್ರಗತಿ ಸಾಧಿಸುವಲ್ಲಿ ಸಕ್ರಿಯವಾಗಿ ಕಾರ್ಯೋನ್ಮುಖರಾಗಬೇಕು. ಇದರಿಂದ ಗ್ರಾಪಂಗಳು ಸ್ವಾವಲಂಬನೆ ಸಾಧಿಸಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸಂಪನ್ಮೂಲ ವ್ಯಕ್ತಿಗಳಾದ ಮೈಸೂರಿನ ಅಬ್ದುಲ್‌ ನಜೀರ್‌ಸಾಬ್‌ ಗ್ರಾಮೀಣಾಭಿವೃದ್ಧಿ (ಎಸ್‌.ಐ.ಆರ್‌.ಡಿ) ಸಂಸ್ಥೆಯ ಬೋಧಕ ಡಾ. ಜಿ.ಎಸ್‌. ಗಣೇಶ್‌ಪ್ರಸಾದ್‌, ಜಿ. ಮಲ್ಲಿಕಾರ್ಜುನಸ್ವಾಮಿ, ಗಿರಿಧರ್‌ 14ನೇ ಹಣಕಾಸು ಯೋಜನೆಯಡಿ ತಂತ್ರಾಂಶಗಳ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರದ ಮನಶಾಸ್ತ್ರಜ್ಞ ಡಾ. ಭರತ್‌ ಅವರು ಗ್ರಾಪಂ ಕಾರ್ಯನಿರ್ವಹಣೆಯಲ್ಲಿ ಒತ್ತಡ ನಿರ್ವಹಣೆ ಕುರಿತು ಮಾತನಾಡಿದರು. ಜಿಪಂ ಉಪಕಾರ್ಯದರ್ಶಿ ಹನುಮನರಸಯ್ಯ, ಮುಖ್ಯ ಯೋಜನಾಧಿಕಾರಿ ಪದ್ಮಶೇಖರ್‌ ಪಾಂಡೆ ಇತರರು ಇದ್ದರು.

ಪ್ರಗತಿ ಗುರಿ: 14ನೇ ಹಣಕಾಸು ಯೋಜನೆಯಡಿ ಗ್ರಾಮಪಂಚಾಯಿತಿಗಳು ವಾರ್ಷಿಕ ಲೆಕ್ಕ ಪರಿಶೋಧನೆ ಮಾಡಿಸಿರಬೇಕು. ತಮ್ಮ ವ್ಯಾಪ್ತಿಯಲ್ಲಿ ನಿಗಧಿತ ಗುರಿಗಿಂತ ಹೆಚ್ಚಿನ ಕರ ವಸೂಲಾತಿಯಾಗಿರಬೇಕು. ಬಯಲು ಶೌಚಮುಕ್ತ ಗ್ರಾಮವಾಗಿಬೇಕು.

ಮಗುವಿಗೆ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಉತ್ತಮ ಪ್ರಗತಿ ಸಾಧಿಸಿರಬೇಕು. ಆಗ ಮಾತ್ರ ಸರ್ಕಾರದಿಂದ ಕಾರ್ಯಕ್ಷಮತೆ ನಿಧಿಯನ್ನು ಪ್ರೋತ್ಸಾಹಧನ ರೂಪದಲ್ಲಿ ಪಡೆಯಲು ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಲತಾಕುಮಾರಿ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next