Advertisement

ದೇಶಿ ಭಾಷೆಗಳ ರಕ್ಷಣೆಗೆಹೋರಾಟ ಅಗತ್ಯ: ಬಿಳಿಮಲ

11:29 AM Dec 31, 2017 | |

ಬಸವಕಲ್ಯಾಣ: ಕನ್ನಡ, ತಮಿಳು ಸೇರಿದಂತೆ ದೇಶದ ಹಲವು ದೇಶಿ ಭಾಷೆಗಳು ಬಿಕ್ಕಟ್ಟಿನಲ್ಲಿವೆ. ಇವುಗಳ ರಕ್ಷಣೆಗಾಗಿ ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡಬೇಕಾದ ಅಗತ್ಯವಿದೆ. ಕರ್ನಾಟಕ ನಾಡಿನಿಂದಲೇ ಹೋರಾಟ ಆರಂಭವಾಗಬೇಕು
ಎಂದು ದೆಹಲಿ ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ, ಸಾಹಿತಿ ಡಾ| ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಹುಲಸೂರಿನಲ್ಲಿ ಶ್ರೀ ಜಗದ್ಗುರು ಬಸವಕುಮಾರ ಶಿವಯೋಗಿಗಳ 42ನೇ ಪುಣ್ಯಸ್ಮರಣೋತ್ಸವ, ಬೀದರ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಅಳಿವಿನ ಅಂಚನಲ್ಲಿರುವ ದೇಶಿ ಭಾಷೆಗಳ ಉಳಿವಿಗೆ ರಾಷ್ಟ್ರಮಟ್ಟದಲ್ಲಿ ಆಂದೋಲನ ರೂಪಿಸಲು ಬೇರೆ, ಬೇರೆ ರಾಜ್ಯಗಳ ಭಾಷೆಗಳ ವಿದ್ವಾಂಸರನ್ನು ಒಗ್ಗೂಡಿಸುವ ವೇದಿಕೆ ಅಗತ್ಯವಿದೆ ಎಂದು ಹೇಳಿದರು. 

ರಾಷ್ಟ್ರೀಯ ಭಾಷಾ ನೀತಿ ರೂಪಿಸುವಾಗ ಕನ್ನಡ ಭಾಷೆ ಬಗ್ಗೆ ನಿರ್ಲಕ್ಷ್ಯ ಭಾವನೆ ತೆಳೆಯಲಾಗುತ್ತಿದೆ. ಹೊಸ ಶಿಕ್ಷಣ ನೀತಿಯಲ್ಲಿ ಹಿಂದಿ ಭಾಷೆ ಬಗ್ಗೆ 4 ಪುಟಗಳ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಆದರೆ ಉಳಿದ ಎಲ್ಲ ದೇಶಿಭಾಷೆಗಳ ಬಗ್ಗೆ ಕೇವಲ ಒಂದು ಸಾಲು ಇದೆ. ಇದು ಕನ್ನಡದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ತೋರುವ ತಾತ್ಸಾರವಲ್ಲದೆ ಮತ್ತೇನು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಹೃದಯದ ಭಾಷೆ, ಭಾವನೆ ಭಾಷೆ, ನಾಡಿನ ಭಾಷೆಯಾಗಿರುವುದಂತೂ ಸ್ಪಷ್ಟ. ಕನ್ನಡ ಐತಿಹಾಸಿಕ ಘನತೆ ಹೊಂದಿರುವ ಭಾಷೆಯಾಗಿದೆ. ಅದನ್ನು ನಾಶಪಡಿಸಲು ನಾವು ಯಾವುದೇ ಕಾರಣಕ್ಕೂ ಬಿಡಬಾರದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಬೆಳೆಸುವ ಕೆಲಸವಾಗಬೇಕು. ಆ ನಿಟ್ಟಿನಲ್ಲಿ ಚರ್ಚೆಗಳು ನಡೆಯಬೇಕು. ಇದಕ್ಕೆ ಜನಪ್ರತಿನಿಧಿಗಳೂ ಮುಂದಾಗಬೇಕು ಎಂದು ಸಲಹೆ ನೀಡಿದರು. 

ನಾವು ಕನ್ನಡದ ಘನತೆ ಮತ್ತು ಮುಕ್ತ ಭಾವ ಅರ್ಥ ಮಾಡಿಕೊಳ್ಳಬೇಕು. ಬಹುಮುಖೀ ಹಿನ್ನೆಲೆ ಹೊಂದಿರುವ ಕನ್ನಡ ಈಗೀಗ ಏಕಮುಖೀ ಚಿಂತನೆ ಕಡೆಗೆ ವಾಲುತ್ತಿದೆ. ಇದು ಅಪಾಯದ ಸೂಚನೆ. ಬೇರೆ ಭಾಷೆಗಳ ಹಾಗೇ ಕನ್ನಡಕ್ಕೆ ಏಕ ಚಿಂತನಾ ಕ್ರಮದ ಪದ್ಧತಿ ಇಲ್ಲ. ಇಲ್ಲೆನಿದ್ದರೂ ಬಹುಮುಖೀ ಸಂಸ್ಕೃತಿ. ಅದನ್ನು ಕಾಪಾಡಿಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದು ಹೇಳಿದರು.
 
ಪ್ರಸ್ತುತ ಎಲ್ಲ ಕ್ಷೇತ್ರಗಳು ಬದಲಾವಣೆಗೆ ಒಡ್ಡಿಕೊಂಡಿವೆ. ಶಿಕ್ಷಣ ಕ್ಷೇತ್ರ ಬದಲಾಗುತ್ತಿದೆ. ಮಾನವೀಯತೆ ಹಿಂದಕ್ಕೆ ಹೋಗುತ್ತಿದೆ. ಯುಜಿಸಿ ನಿಯಮ ಬದಲಾಗುತ್ತಿದೆ. ಆಂಗ್ಲ ಮತ್ತು ಅನ್ಯ ಭಾಷೆಗಳು ಮುಂದೆ ಬರುತ್ತಿವೆ. ಆಳುವ ರಾಜ್ಯ
ಸರ್ಕಾರಕ್ಕೆ ಕನ್ನಡದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್‌ ಹೇಳಿರುವಂತೆ ಶಿಕ್ಷಣದ ಆಯ್ಕೆ ಮಗು ಹಾಗೂ ಪೋಷಕರಿಗೆ ಬಿಟ್ಟದ್ದು. ಹಾಗಾದರೆ, ರಾಜ್ಯ ಸರ್ಕಾರ
ಇರುವುದಾದರೂ ಏತಕ್ಕೆ? ರಾಜಕಾರಣಿಗಳ ಮಕ್ಕಳು ಇಂಗ್ಲಿಷ್‌ನಲ್ಲಿ ಕಲಿಯುತ್ತಾರೆ. ಹಾಗಾಗಿ ಜನಪ್ರತಿನಿಧಿಗಳಿಗೂ ಕನ್ನಡದ ಬಗ್ಗೆ ಕಾಳಜಿ ಇಲ್ಲ ಎಂದು ಖೇದ ವ್ಯಕ್ತಪಡಿಸಿದರು.

Advertisement

ದೇಶಿ ಭಾಷೆಗಳಿಗೆ ಮೀಸಲಿಟ್ಟ ಅನುದಾನದಲ್ಲಿ ಕೇಂದ್ರ ಸರ್ಕಾರ ಶೇ.30ರಷ್ಟು ಕಡಿತಗೊಳಿಸಿದೆ. ಕನ್ನಡ ಹಾಗೂ ಕನ್ನಡದಂಥ ಅನೇಕ ಭಾಷೆಗಳ ಮೇಲಿನ ದಬ್ಟಾಳಿಕೆಗೆ ಏಕಮುಖವಿಲ್ಲ. ಸಾಯುತ್ತಿರುವ ಈ ಭಾಷೆಗಳ ರಕ್ಷಣೆಗೆ ಮುಂದಾಗದೇ ಹೋದರೆ ಬರುವ 30ವರ್ಷದಲ್ಲಿ ಕನ್ನಡ ಸೇರಿದಂತೆ ಹಲವು ಭಾಷೆಗಳು ಅಳಿವಿನಂಚಿಗೆ ಹೋಗಲಿವೆ. ದೇಶದ 71 ಭಾಷೆಗಳು . ಈಗಾಗಲೇ ಅಳಿವಿನಂಚಿನಲ್ಲಿವೆ ಎಂದು ಯುನೆಸ್ಕೋ ಆಘಾತಕಾರಿ ಮಾಹಿತಿ ಹೊರಹಾಕಿದೆ.

ಇವುಗಳ ಉಳಿವಿಗೆ ನಮ್ಮಲ್ಲಿ ಯಾವ ಯೋಜನೆಗಳೂ ಇಲ್ಲ. ಈ ಕೆಲಸವನ್ನು ಸಾಹಿತ್ಯ ಪರಿಷತ್‌, ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಸಂಸ್ಥೆಗಳು ಮಾಡಬೇಕು. ನಶಿಸುತ್ತಿರುವ ದೇಶಿ ಭಾಷೆಗಳ ಬಗ್ಗೆ ಕನ್ನಡ ಹೋರಾಟಗಾರರೇ ರಾಷ್ಟ್ರಮಟ್ಟದಲ್ಲಿ ಧ್ವನಿ ಎತ್ತಬೇಕು ಎಂದು ಕಿವಿ ಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಕನ್ನಡದ ಕರ್ಯಕ್ಕೆ ಸದಾ ತಮ್ಮ ಬೆಂಬಲವಿದೆ. ಬೀದರ ಕನ್ನಡ ಭವನ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ ಕಲ್ಪಿಸಿ ನಮ್ಮ ಸಕಾರದ ಅವಧಿಯಲಿಯೇ ಕಾಮಗಾರಿಗೆ ಚಾಲನೆ ನೀಡುವುದಾಗಿ ಭವರಸೆ ನೀಡಿದರು.

ಸಂಸತ್‌ನಲ್ಲಿ ಮೊಳಗಲಿ ರಾಜ್ಯದ ಪ್ರತಿಧ್ವನಿ
ಬಸವಕಲ್ಯಾಣ:
ನೆಲ, ಜಲ, ಭಾಷೆ ಅಭಿವೃದ್ಧಿಗಾಗಿ ಲೋಕಸಭೆಯಲ್ಲಿ ಗಟ್ಟಿಯಾಗಿ ಮಾತನಾಡಬೇಕಾದ ಅಗತ್ಯವಿದೆ ಎಂದು ದೆಹಲಿ ಜವಾಹರಲಾಲ್‌ ವಿಶ್ವವಿದ್ಯಾನಿಲಯದ (ಜೆಎನ್‌ಯು) ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ| ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

ಕರ್ನಾಟಕದ ಬಗ್ಗೆ ಮಾತಾಡಲು ನಮ್ಮ ಸಂಸದರಿಗೆ ಆಗುವುದಿಲ್ಲ. ಸರಿಯಾಗಿ ಒಂದು ವಾರ ಕೂಡ ದೆಹಲಿಯಲ್ಲಿ ಇರಲು ಸಂಸದರಿಗೆ ಸಾಧ್ಯವಾಗುವುದಿಲ್ಲ. ಏಕೆಂದರೆ, ಅವರಿಗೆ ಸರಿಯಾಗಿ ಹಿಂದಿ ಬರಲ್ಲ. ಅಲ್ಲಿ ಕನ್ನಡ ನಡೆಯಲ್ಲ. ಜನಪ್ರತಿನಿಧಿಗಳಿಗೆ ಗಂಭೀರತೆ ಇಲ್ಲ. ಆಗಾಗ ಮಾಜಿ ಪ್ರಧಾನಿ ಎಂಬ ಕಾರಣಕ್ಕೆ ಸಂಸತ್ತಿನಲ್ಲಿ ಎಚ್‌. ಡಿ. ದೇವೇಗೌಡ ಅವರ ಮಾತನ್ನು ಆಲಿಸುತ್ತಾರೆ. ಆದರೆ, ದೇವೇಗೌಡರು ಮಂಡ್ಯ ಅಥವಾ ಹುಲಸೂರು ರೈತರ ಬಗ್ಗೆ ಮಾತಾಡದೇ ಪಂಜಾಬ್‌ ರೈತರ ಬಗ್ಗೆ ಮಾತಾಡುತ್ತಾರೆ. ಇದು ರಾಜ್ಯದ ಗ್ರಹಚಾರ.

ಸಂಸತ್‌ನಲ್ಲಿ ಈ ಭಾಗವನ್ನು ಪ್ರಭಲವಾಗಿ ಪ್ರತಿನಿಧಿಸಲು ತರಬೇತಿ ನೀಡುವ ಕೆಲಸ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. 5ನೇ ತರಗತಿವರೆಗೆ ಕನ್ನಡ ಕಡ್ಡಾಯಗೊಳಿಸುವಂತೆ ಸಂಸತ್‌ನಲ್ಲಿ ಒತ್ತಡ ಹೇರಲು ನಾಡಿನ 28 ಲೋಕಸಭೆ ಸದಸ್ಯರು ಹಾಗೂ 12 ರಾಜ್ಯಸಭಾ ಸದಸ್ಯರಿಗೆ ಆಗಲಿಲ್ಲ. ಏಕೆಂದರೆ, ಪಕ್ಷವಾರು ಭಿನ್ನಾಭಿಪ್ರಾಯಗಳು, ಪ್ರಾದೇಶಿಕ ಭಿನ್ನತೆಗಳ ಕಾರಣದಿಂದ ರಾಜ್ಯ ಹಿಂದೆ ಬೀಳುತ್ತಿದೆ. ಆದರೆ, 2ಸಾವಿರ ಕಿಮಿ ದೂರ ಹೋದ ಮೇಲೂ ನಮ್ಮ ರಾಜಕಾರಣ ಮರೆಯದಿದ್ದರೆ ನಾಡು ಹೇಗೆ ಪ್ರಗತಿ ಕಾಣಲು ಸಾಧ್ಯ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next