ಮಲ್ಪೆ: ಮಲ್ಪೆಯ ಸಿಟಿಜನ್‌ಸರ್ಕಲ್ ಬಳಿಯ ಕೊರಗ ಸಮುದಾಯಕ್ಕೆ ಸೇರಿದ ಯುವಕ ಸುನಿಲ್ (27) ಎಂಬವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗೆ ಸಂಬಂಧಿತ ಖರ್ಚು ವೆಚ್ಚಕ್ಕೆ ಕುಟುಂಬ ದಾನಿಗಳಿಂದ ನೆರವು ಯಾಚಿಸಿದೆ.
ಸುನಿಲ್ ಕಳೆದ 8 ವರ್ಷಗಳಿಂದ ನಗರಸಭೆಯಲ್ಲಿ ಪೌರ ಕಾರ್ಮಿಕನಾಗಿ ದುಡಿಯುತ್ತಿದ್ದು, ಕಳೆದ ಎರಡು ತಿಂಗಳಿನಿಂದ ಕಿಡ್ನಿ ವೈಫಲ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದಾರೆ. ತಾತ್ಕಾಲಿಕ ನೆಲೆಯಲ್ಲಿರುವ ಅವರು ಇದೀಗ ಕೆಲಸ ಕಳೆದುಕೊಂಡು ಯಾವುದೇ ವೇತನವು ದೊರೆಯುತ್ತಿಲ್ಲ. ಕುಟುಂಬದ ಆಧಾರವಾಗಿದ್ದ ಸುನೀಲ್ ಇದೀಗ ಹಾಸಿಗೆ ಹಿಡಿದಿರುವುದರಿಂದ ಬೇರೆ ಯಾವುದೇ ಆದಾಯವಿಲ್ಲದೆ ಮನೆ ಮಂದಿ ಕಂಗಾಲಾಗಿದ್ದಾರೆ.
ಇದನ್ನೂ ಓದಿ:ದಾಳಿ ಬಗ್ಗೆ ಸುಳಿವು : ಮುಖೇಶ್ ಅಂಬಾನಿ ನಿವಾಸದ ಭದ್ರತೆ ಹೆಚ್ಚಳ
ತನ್ನ ಹರಕುಮುರುಕು ಮನೆಯಲ್ಲಿ ಮಲಗಲು ಹಾಸಿಗೆ ಮಂಚ ಇಲ್ಲದೆ, ನೆಲದಲ್ಲಿ ಮಲಗುವ ಪರಿಸ್ಥಿತಿ ಇದೆ. ಇದೀಗ ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಬೇಕಾಗಿದೆ. ಸರಕಾರದ ನೆಲೆಯಲ್ಲಿ ಕೊರಗ ಸಮಾಜಕ್ಕೆ ಡಯಾಲಿಸಿಸ್ ಉಚಿತವಾಗಿ ನೀಡಲಾಗುತ್ತಿದ್ದರೂ ಡಯಾಲಿಸಿಸ್ ಗೆ ತೆರಳಲು ರಿಕ್ಷಾ, ಇತರ ಔಷಧ ಖರ್ಚು ಹಾಗೂ ಕುಟುಂಬದ ದೈನಂದಿನ ಖರ್ಚು ವೆಚ್ಚಗಳಿಗೆ ಅಲ್ಲಿ ಇಲ್ಲಿ ಸಾಲ ಮಾಡಿ ದಿನ ದೂಡುತ್ತಿದ್ದಾರೆ.
ನೆರವು ನೀಡುವ ದಾನಿಗಳು ಸುನೀಲ್ (ಮೊಬೈಲ್: 9686408197)ಅವರ ಉಡುಪಿಯ ಯೂನಿಯನ್ ಬ್ಯಾಂಕ್ ಖಾತೆ ಸಂಖ್ಯೆ: 502402010004116 (IFSC UBINN0550248)ಗೆ ನೀಡಬಹುದು.