ಬೆಂಗಳೂರು: ದೇಶದ ಪ್ರಜಾಪ್ರಭುತ್ವದ ಹಿತ ದೃಷ್ಟಿಯಿಂದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಜತೆಗೆ ಸೀಟು ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ 12 ಕ್ಷೇತ್ರಗಳನ್ನು ಬಿಟ್ಟುಕೊಡುವ ಬಗ್ಗೆ ಕೇಳಿರುವುದರ ಬಗ್ಗೆ ಅನಗತ್ಯ ಹೇಳಿಕೆ ನೀಡಿ ಗೊಂದಲ ಸೃಷ್ಠಿಸುವ ಅಗತ್ಯವಿಲ್ಲ. ಈ ಕುರಿತು ಎರಡೂ ಪಕ್ಷಗಳ ಮುಖಂಡರು ಕುಳಿತು ಚರ್ಚಿಸಿದಾಗ ಯಾರಿಗೆ ಎಷ್ಟು ಸೀಟು ಎಂದು ತೀರ್ಮಾನವಾಗುತ್ತದೆ. ಜೆಡಿಎಸ್‌ನವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಹಾಗಂತ ಅದೇ ಅಂತಿಮವಲ್ಲ. ಚರ್ಚೆಯ ನಂತರ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಹೇಳಿದರು.
ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಜೆಡಿಎಸ್ ಸೀಟಿಗೆ ಬೇಡಿಕೆ ಇಟ್ಟಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರ ನಡುವೆ ಏನು ಮಾತುಕತೆಯಾಗಿದೆ ಎನ್ನುವುದು ನನಗೆ ಗೊತ್ತಿಲ್ಲ ಎಂದರು.
ಮುಂಬಡ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳಲ್ಲಿ ಗೊಂದಲ ನಡೆಯುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಸದ್ಯ ಸಮ್ಮಿಶ್ರ ಸರ್ಕಾರ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ವಿಚಾರ ಕಳೆದ ಐವತ್ತು ವರ್ಷಗಳಿಂದ ಕೇಳುತ್ತ ಬಂದಿದ್ದೇನೆ. ಕಾಂಗ್ರೆಸ್‌ನಲ್ಲಿ ದಲಿತ ಮುಖ್ಯಮಂತ್ರಿ ಮಾಡುವುದು ನಮಗೆ ಬಿಟ್ಟಿದ್ದು,ಜೆಡಿಎಸ್‌ನವರ ವಿಚಾರ ಅವರಿಗೆ ಬಿಟ್ಟಿದ್ದು, ಈಗ ಲೋಕಸಭೆ ಚುನಾವಣೆ ಎದುರಿಸುವ ಕಡೆಗೆ ಗಮನ ಹರಿಸಬೇಕಿದೆ ಎಂದು ತಿಳಿಸಿದರು.