ಉಳ್ಳಾಲ: ವಿದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಯಾಗುತ್ತಿದ್ದು, ಭಾರತದಲ್ಲಿಯೂ ಇಂದಿನ ಆಧುನಿಕತೆಗೆ ತಕ್ಕಂತೆ ಪೊಲೀಸರಿಗೆ ಸೂಕ್ತವಾದ ಮೂಲ ಭೂತ ವ್ಯವಸ್ಥೆಗಳನ್ನು ವಿಸ್ತರಿಸಿ, ಸುವ್ಯವಸ್ಥೆ ಕಾಪಾಡಲು ತಂತ್ರಜ್ಞಾನ ಸೌಲಭ್ಯಗಳನ್ನು ವಿಸ್ತರಿಸುವ ಅಗತ್ಯತೆ ಇದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ| ಕೆ. ಭೈರಪ್ಪ ಅಭಿಪ್ರಾಯಪಟ್ಟರು.
ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ರವಿವಾರ ನಡೆದ ಕೊಣಾಜೆ ಪೊಲೀಸ್ ಠಾಣೆ ಸುಧಾರಿತ ಗಸ್ತು ವ್ಯವಸ್ಥೆ (ಜನಸ್ನೇಹಿ ಪೊಲೀಸ್-ಪ್ರದೇಶಕ್ಕೊಬ್ಬ ಪೊಲೀಸ್) ಕಾರ್ಯ ಕ್ರಮದಡಿಯಲ್ಲಿ ಕೊಣಾಜೆ ಠಾಣಾ ವ್ಯಾಪ್ತಿಯ ಸರ್ವ ಗಸ್ತು ಸದಸ್ಯರ ಸಭೆ ಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವಿದೇಶಗಳಲ್ಲಿರುವ ಪೊಲೀಸ್ ವ್ಯವಸ್ಥೆಗೆ ಹೋಲಿಸಿದರೆ ದೇಶದಲ್ಲಿನ ವ್ಯವಸ್ಥೆ ಬಹಳ ಕುಂಠಿತವಾಗಿದೆ. ಇದನ್ನು ಅಭಿವೃದ್ಧಿಪಡಿಸುವಲ್ಲಿ ಶ್ರಮ ವಹಿಸಬೇಕಿದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಯು ಉತ್ತಮ ಪರಿಕಲ್ಪನೆಯಾ ಗಿದ್ದು, ಪೊಲೀಸರು ಹಾಗೂ ಜನರ ನಡುವೆ ಉತ್ತಮ ಬಾಂಧವ್ಯ ವೃದ್ಧಿಗೊಂಡು ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಅವರು ಹೇಳಿದರು.
ಎಸಿಪಿ ರಾಮರಾವ್ ಮಾತನಾಡಿ, ಹಿಂದೆ ಜನಸಂಪರ್ಕ ಸಭೆಯ ಮೂಲಕ ಆಯಾ ಪ್ರದೇಶದ ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಯತ್ನಿಸಲಾಗುತ್ತಿತ್ತು. ಈಗ ಸುಧಾರಿತ ಗಸ್ತು ವ್ಯವಸ್ಥೆಯಿಂದಾಗಿ ಆಯಾ ಪ್ರದೇಶದ ಜವಾಬ್ದಾರಿ ವಹಿಸಿದ ಪೊಲೀಸರ ಜತೆಗೆ 50 ಜನ ಸ್ಥಳೀಯರ ಸಹಕಾರವೂ ದೊರೆಯಲಿರುವುದರಿಂದ ಪೊಲೀಸ್ ವ್ಯವಸ್ಥೆಗೆ ಬಲ ಸಿಕ್ಕಿದಂತಾಗಿದೆ. ಅಲ್ಲದೆ, ಸಮಾಜದಲ್ಲಿ ಎದುರಾಗುವ ಯಾವುದೇ ಸಮಸ್ಯೆಯನ್ನು ಈ ತಂಡದ ಮೂಲಕ ನಿವಾರಿಸಿಕೊಳ್ಳಲು ಬಹಳಷ್ಟು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ಕೈ ಜೋಡಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕೆಂದು ಹೇಳಿದರು.
ಕೇಂದ್ರ ಸರಕಾರದ ಯೋಜನೆಯಂತೆ ಮಂಗಳೂರು ಸ್ಮಾರ್ಟ್ ಸಿಟಿಗೆ ಆಯ್ಕೆ ಯಾಗಿರುವುದರಿಂದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಿ.ಸಿ. ಟಿವಿಯನ್ನು ಅಳವಡಿಸುವ ಭರವಸೆ ಸಿಕ್ಕಿದೆ. ಈಗಾಗಲೇ ಇಲಾಖೆಯಿಂದ ಕೆಮರಾ ಅಳವಡಿಸುವ ಪ್ರದೇಶಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದರು.
ಸಾರ್ವಜನಿಕ ಹಿತಾಸಕ್ತಿಯಿಂದ ಖಾಸಗಿ ಸಂಸ್ಥೆಗಳು ಆಯಾಯ ಪ್ರದೇಶಕ್ಕೆ ಸಿಸಿಟಿವಿಯನ್ನು ಅಳವಡಿಸುವಂತೆ ಇಲಾಖೆಯ ವತಿಯಿಂದ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವವ ವಿರುದ್ಧ ಕಠಿಣ ಕ್ರಮ, ಬಸ್ಸುಗಳು ನಡು ರಸ್ತೆಯಲ್ಲೇ ನಿಂತು ಜನರನ್ನು ಹತ್ತಿಸುವ ವಿಚಾರ, ಬಸ್ ಸಿಬಂದಿ ಅಶ್ಲೀಲ ಪದ ಬಳಸುವ ವಿಚಾರ, ಪಂಪ್‌ವೆಲ್ ಬಳಿಕ ಬೇರೆ ಬಸ್ಸಿಗೆ ಕ್ರಾಸಿಂಗ್ ನೀಡುವ ವಿಚಾರ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಕೊಣಾಜೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಅಶೋಕ್ ಪಿ. ಅವರು ಪ್ರಾಸ್ತಾವಿಕ ವಾಗಿ ಮಾತನಾಡಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು.
ಎಸ್‌ಐ ಸುಕುಮಾರನ್ ಉಪಸ್ಥಿತ ರಿದ್ದರು. ಕಾನ್‌ಸ್ಟೆಬಲ್ ಗುರುವಪ್ಪ ಕಾಂತಿ ಸ್ವಾಗತಿಸಿದರು. ಸುಖಲತಾ ಕಾರ್ಯಕ್ರಮ ನಿರೂಪಿಸಿದರು.