ಅಫಜಲಪುರ: ತಾಲೂಕಿನ ಜನರಿಗೆ ಬೇಸಿಗೆ ಬಂತೆಂದರೆ ಆತಂಕ ಶುರುವಾಗುತ್ತದೆ. ಜನ-ಜಾನುವಾರುಗಳು ನೀರಿಲ್ಲದೆ ಪರಿತಪಿಸುವಂತೆ ಆಗುತ್ತಿದೆ. ಈ ಸಮಸ್ಯೆ ಇಂದು-ನಿನ್ನೆಯದಲ್ಲ. ಪ್ರತಿ ವರ್ಷವೂ ಇದ್ದದ್ದೆ. ಹೀಗಾಗಿ ಶಾಶ್ವತವಾಗಿ ಕುಡಿಯುವ ನೀರಿನ ಬವಣೆ ತಪ್ಪಿಸುವರು ಯಾರು ಇಲ್ಲವೇ ಎಂದು ತಾಲೂಕಿನ ಜನ ಪ್ರಶ್ನಿಸುತ್ತಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರ ಅನೇಕ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇವುಗಳೆಲ್ಲ ಶಾಶ್ವತ ಪರಿಹಾರವಲ್ಲ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದರಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ. ಬೇಸಿಗೆಯಲ್ಲಿ ಮಕ್ಕಳು, ಮಹಿಳೆಯರು, ಬಾಣಂತಿಯರು, ವೃದ್ಧರು ಸೇರಿದಂತೆ ಎಲ್ಲರೂ ಕುಡಿಯುವ ನೀರಿಗಾಗಿ ಕಿ.ಮೀ. ಗಟ್ಟಲೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಳ್ಳಿಗಳಲ್ಲಿ ಆಹಾಕಾರ: ತಾಲೂಕಿನ ಚಿಂಚೋಳಿ, ರೇವೂರ (ಕೆ), ಬಳೂರ್ಗಿ, ಬಳೂರ್ಗಿ ತಾಂಡಾ, ಕೋಗನೂರ, ಅಂಕಲಗಿ, ಚಿಣಮಗೇರಾ, ಚವಡಾಪುರ, ಮಾಶಾಳ, ಹೊಸೂರ, ಭೋಗನಳ್ಳಿ, ಸಿದ್ದನನೂರ, ಅತನೂರ, ಗೊಬ್ಬೂರ (ಬಿ), ಅವರಾದ, ಇಗಳಗಿ, ಹಿಂಚಗೇರಾ, ಆನೂರ, ತೆಲ್ಲೂರ, ರೇವೂರ (ಬಿ), ಅರ್ಜುಣಗಿ, ಹಳಿಯಾಳ, ಜೇವರ್ಗಿ (ಬಿ), ಕರ್ಜಗಿ, ಉಡಚಾಣ ಹಟ್ಟಿ, ಶಿವೂರ, ಹೊಸೂರ, ಬಿಂಗೋಳಿ ತಾಂಡಾ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆ ಕಾಡುತ್ತಿದೆ.
ಅಫಜಲಪುರ ನಗರಕ್ಕೂ ಈ ಸಮಸ್ಯೆ ತಪ್ಪಿಲ್ಲ. ನಗರದ ಹತ್ತಿರದಲ್ಲೇ ಭೀಮಾ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲಾಗಿದೆ. ಇಲ್ಲಿ ನೂರಾರು ಕಿ.ಮೀ ನೀರು ನಿಲ್ಲಿಸಲಾಗಿದೆ. ಆದರೂ ಪಟ್ಟಣಕ್ಕೆ ಕುಡಿಯುವ ನೀರು ಸರಿಯಾಗಿ ಸಿಗುತ್ತಿಲ್ಲ. ನದಿಯಲ್ಲಿ ನೀರಿದ್ದರೂ ಶುದ್ಧೀಕರಿಸದೇ ಸರಬರಾಜು ಮಾಡಲಾಗುತ್ತಿದೆ.
ಇದರಿಂದ ಪಟ್ಟಣದ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರಿತಪಿಸುವಂತೆ ಆಗಿದೆ. ಒಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಅಂತಜರ್ಲ ಮಟ್ಟದ ಕುಸಿತ ಹಾಗೂ ನೀರಿನ ಮೂಲಗಳ ಕೊರತೆ ಕಾರಣದಿಂದ ನೀರು ಲಭ್ಯವಾಗುತ್ತಿಲ್ಲ. ಅದರಂತೆ ಪಟ್ಟಣಕ್ಕೆ ಸರಿಯಾಗಿ ನದಿ ನೀರು ಪೂರೈಕೆಯಾಗುತ್ತಿಲ್ಲ. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಭೀಕರ ಸಮಸ್ಯೆ ಎದುರಿಸಬೇ ಕಾದ ಸಂದರ್ಭ ಬಂದರೂ ಬರಬಹುದು.
ಬಹುಗ್ರಾಮ ಕುಡಿಯುವ ನೀರು ಯೋಜನೆ: ತಾಲೂಕಿನ ಮಾಶಾಳ, ಉಡಚಾಣ, ದೇಸಾಯಿ ಕಲ್ಲೂರ ಸೇರಿದಂತೆ ಅನೇಕ ಕಡೆಗಳಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಅಡಿಯಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿ ನೀರಿನ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ ಯೋಜನೆ ವಿಫಲವಾಗಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಗಳು ಕೆಲವು ಕಡೆ ಪೂರ್ಣಗೊಂಡಿವೆ. ಕೆಲವು ಕಡೆ ಪೂರ್ಣಗೊಂಡಿಲ್ಲ. ಹನಿ ನೀರು ಸಹ ಈ ಯೋಜನೆಯಿಂದ ಜನರಿಗೆ ಲಭ್ಯವಾಗಿಲ್ಲ. ತಪ್ಪದ ಅಲೆದಾಟ: ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಮಹಿಳೆಯರು, ಬಾಣಂತಿಯರು, ವಿದ್ಯಾರ್ಥಿಗಳು, ವೃದ್ಧರು ಎನ್ನದೆ ಕೊಡಗಳನ್ನು ಹಿಡಿದುಕೊಂಡು ದಿನವಿಡಿ ಖಾಸಗಿಯವರ ಹೊಲ ಗದ್ದೆಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಸದ್ಯ 150 ಬೋರವೇಲ್‌ಗಳ ಬೇಡಿಕೆ ಬಂದಿದೆ. ಆದಷ್ಟು ಬೇಗ ಬೋರವೆಲ್ ಕೊರೆಸಿ ಗ್ರಾಮಸ್ಥರಿಗೆ ನೀರು ಒದಗಿಸಲಾಗುವುದು.
ಎಂ.ವೈ. ಪಾಟೀಲ, ಶಾಸಕರು
ಮಲ್ಲಿಕಾರ್ಜುನ ಹಿರೇಮಠ