Advertisement

ಬಿಸಿಲ ತಾಪದಿ ಬೆಂಡಾಗುವ ಪ್ರಾಣಿ-ಪಕ್ಷಿಗಳಿಗೆ ಬೇಕಿದೆ ನೀರಿನಾಸರೆ

06:25 AM Mar 13, 2018 | |

ಕೋಟ: ಇದೀಗ ಬೇಸಿಗೆಯ ಬಿಸಿಲ ತಾಪಕ್ಕೆ ಭೂಮಿ ಕೆಂಡದಂತೆ ಸುಡುತ್ತಿದೆ. ಎಲ್ಲಾ ಜೀವಿಗಳಿಗೂ ನೀರಿನ ಕೊರತೆ ಎದುರಾಗುತ್ತಿದೆ. ಇಂತಹ ಸಂದರ್ಭ ಮನುಷ್ಯ ಎಷ್ಟೇ ಕಷ್ಟವಾದರು ನೀರು ದಕ್ಕಿಸಿಕೊಳ್ಳುತ್ತಾನೆ. ಆದರೆ ಪ್ರಾಣಿ-ಪಕ್ಷಿಗಳ ಪಾಡು ಹೇಳತೀರದು.ಅವುಗಳು ನೀರು ಸಿಗದೆ ಕೆಲವೊಮ್ಮೆ ಸಾವನ್ನಪ್ಪುತ್ತವೆ. ಆದ್ದರಿಂದ ಇವುಗಳ ದಾಹ ನೀಗುವ ಕುರಿತು ಮನುಷ್ಯ ಯೋಚಿಸಬೇಕಿದೆ.

Advertisement

ಸಾಸ್ತಾನ ಮಿತ್ರರು ಎನ್ನುವ ಸಾಮಾಜಿಕ ಸಂಘಟನೆ ಕಳೆದ ವರ್ಷದಿಂದ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದು, ಈ ಬಾರಿ ಮೂಕ-ಸ್ಪಂದನೆ-2018 ಎನ್ನುವ ಅಭಿಯಾನ ಕೈಗೊಂಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರ ಪ್ರಚಾರ ನೀಡುತ್ತಿದೆ.


ಹೇಗೆ ನೆರವಾಗಬಹುದು?
ಮನೆಯ ಸಮೀಪ ಜಮೀನು ಅಥವಾ ಇತರ ಸ್ಥಳಗಳಲ್ಲಿ  ತೊಟ್ಟಿ ನಿರ್ಮಿಸಿ, ಪಾತ್ರೆಗಳಲ್ಲಿ ನೀರು ಸಂಗ್ರಹಿಸಿಟ್ಟರೆ ಪ್ರಾಣಿ-ಪಕ್ಷಿಗಳು ತಮ್ಮ ಜಲದಾಹ ತೀರಿಸಿಕೊಳ್ಳುತ್ತವೆ ಹಾಗೂ ಪಕ್ಷಿಗಳಿಗೆ ಮನೆಯ ಛಾವಣಿಯ ಮೇಲೆ, ಇತರ ತೆರೆದ ಸ್ಥಳಗಳಲ್ಲಿ ಬಾಟಲಿ, ಕುಂಡಗಳಲ್ಲಿ ನೀರು ಹಾಕಿದಬಹುದು.  ನೀರಿನ  ಜತೆಗೆ ಸ್ವಲ್ಪ ಅಕ್ಕಿ ಮುಂತಾದ ಆಹಾರ ಧಾನ್ಯಗಳನ್ನು ಇಟ್ಟರೆ ಪಕ್ಷಿಗಳಿಗೆ  ಅನುಕೂಲವಾಗುತ್ತದೆ.

ಒಟ್ಟಾರೆ ಪ್ರಾಣಿ-ಪಕ್ಷಿಗಳಿಗೆ ಪ್ರತಿದಿನ ನೀರಿಡುವ ಮೂಲಕ ಅವುಗಳ ದಾಹತಣಿಸಬಹುದು, ಜೀವ ಉಳಿಸಬಹುದು.
ಎಲ್ಲರೂ ಕೂಡ ಈ ಕುರಿತು ಕಾರ್ಯಪ್ರವೃತ್ತ ರಾದರೆ ಸಾವಿರಾರು ಜೀವಗಳನ್ನು ಉಳಿಸಬಹುದು ಎನ್ನುವುದು ಪ್ರಕೃತಿ ಪ್ರೇಮಿಗಳ ಅನಿಸಿಕೆಯಾಗಿದೆ.

ಪುಣ್ಯ ಲಭಿಸುತ್ತದೆ
ಬೇಸಗೆಯಲ್ಲಿ  ಕೆಲವೊಮ್ಮೆ ನೀರು ಸಿಗದೆ  ಪ್ರಾಣಿ-ಪಕ್ಷಿಗಳು ಮನೆಯೊಳಗೆ ಲಗ್ಗೆ ಇಡುತ್ತವೆ. ಇನ್ನೂ ಕೆಲವೊಮ್ಮೆ ಜಲದಾಹ ಅತಿಯಾದರೆ ಸಾವನ್ನಪ್ಪುತ್ತವೆ.ಇವುಗಳಿಗೆ ಆಹಾರ-ನೀರು ನೀಡುತ್ತ ಬಂದರೆ ಕ್ರಮೇಣ ನಮ್ಮ ಜತೆ ಸ್ನೇಹ ಸಂಪಾದಿಸುತ್ತವೆ. ಪ್ರತಿ  ನಿತ್ಯ ಮನೆಗೆ ಭೇಟಿ ನೀಡಿ ಸಲುಗೆ ಬೆಳೆಸಿಕೊಳ್ಳುತ್ತವೆ. ಒಂದು  ವೇಳೆ ನೀರು ಖಾಲಿಯಾದರೆ ತಮ್ಮದೇ ಭಾಷೆಯಲ್ಲಿ ಕರೆ ನೀಡುತ್ತವೆ. ಮಾಡಿದ ಉಪಕಾರಕ್ಕೆ  ಪ್ರತಿಯಾಗಿ ನಾವು ಹೇಳಿದಂತೆ ನಡೆದುಕೊಳ್ಳುತ್ತವೆ. ಹಸಿದವನಿಗೆ ಊಟ, ಬಾಯಾರಿದವನಿಗೆ ನೀರು ನೀಡಿದರೆ ಪುಣ್ಯ ಲಭಿಸುತ್ತದೆ ಎನ್ನುವ ಮಾತೊಂದಿದೆ. ಅದೇ ರೀತಿ ಪ್ರಾಣಿ-ಪಕ್ಷಿಗಳ ನೀರು-ಆಹಾರ ನೀಡಿದರೆ  ಪುಣ್ಯ ಲಭಿಸುತ್ತದೆ ಎನ್ನುವುದು ಈ ಕುರಿತು ಕಾರ್ಯಪೃವತರಾದವರ ಅನಿಸಿಕೆ.

ಆಯ್ದ ಫೋಟೋಗಳಿಗೆ ಬಹುಮಾನ
ಬೇಸಗೆಯಲ್ಲಿ  ನೀರು ಸಿಗದೆ ಪ್ರಾಣಿ-ಪಕ್ಷಿಗಳು ಸಾವನ್ನಪ್ಪುತ್ತವೆ. ಪ್ರತಿ ಮನೆಗಳಲ್ಲೂ ಇವುಗಳಿಗೆ  ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ ಹಲವು ಜೀವಗಳನ್ನು ಕಾಪಾಡಬಹುದು. ಈ ಕುರಿತು ಸಾಸ್ತಾನ ಮಿತ್ರರು ಎನ್ನುವ ನಮ್ಮ ಸಂಘಟನೆ ಮೂಕಸ್ಪಂದನೆ ಎನ್ನುವ ಅಭಿಯಾನ ನಡೆಸುತ್ತಿದ್ದು, ಪ್ರಾಣಿ-ಪಕ್ಷಿಗಳಿಗೆ ನೀರನ್ನು ನೀಡಿ ಅದನ್ನು ಕುಡಿಯುವಾಗ ಪೋಟೋ ತೆಗೆದು ಹೆಸರು ವಿಳಾಸ ಬರೆದು 9620417570, 8197407570 ಸಂಖ್ಯೆಗೆ ವಾಟ್ಸಾಪ್‌ ಮಾಡಿದರೆ ಆಯ್ದ ಪೋಟೋಗಳಿಗೆ ಬಹುಮಾನ ನೀಡಲಾಗುವುದು ಹಾಗೂ ಫೇಸ್‌ಬುಕ್‌ನಲ್ಲಿ ಅದನ್ನು ಪ್ರಕಟಿಸಲಾಗುವುದು.

– ವಿನಯ ಚಂದ್ರ ಸಾಸ್ತಾನ, ಮುಖ್ಯಸ್ಥರು ಸಾಸ್ತಾನ ಮಿತ್ರರು ಸಂಘಟನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next