Advertisement

ಮುಚ್ಚಿದ ಲಕೋಟೆ ಮಾಹಿತಿ ಬೇಕೇ? ಬೇಡವೇ?

12:13 AM Jun 04, 2022 | Team Udayavani |

ಸ್ಥಳೀಯ ಕೋರ್ಟ್‌ಗಳು, ಹೈಕೋರ್ಟ್‌ಗಳು ಮತ್ತು ಸುಪ್ರೀಂಕೋರ್ಟ್‌ನಲ್ಲಿ ತನಿಖಾಧಿಕಾರಿಗಳು ನೀಡುವ ಮುಚ್ಚಿದ ಲಕೋಟೆ ಮಾಹಿತಿ ಈಗ ವಿವಾದದ ಕೇಂದ್ರ ಬಿಂದು. ಹಾಲಿ ಸಿಜೆಐ ಎನ್‌.ವಿ. ರಮಣ ಅವರೂ ಈ ಮುಚ್ಚಿದ ಲಕೋಟೆ ಅಭ್ಯಾಸವನ್ನು ಟೀಕಿಸಿದ್ದಾರೆ. ಈ ಮೂಲಕ ಪ್ರತಿವಾದಿಗಳಿಂದ ಮಾಹಿತಿ ಮುಚ್ಚಿ ಇಟ್ಟಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಾದರೆ, ಈ ಮುಚ್ಚಿದ ಲಕೋಟೆ ಮಾಹಿತಿ ಎಂದರೇನು?  ಈ ಬಗ್ಗೆ ಏಕೆ ವಿವಾದವೆದ್ದಿದೆ? ಇಲ್ಲಿದೆ ಮಾಹಿತಿ…

Advertisement

ಏನಿದು ಮುಚ್ಚಿದ ಲಕೋಟೆ?
ಸಾಮಾನ್ಯವಾಗಿ ಅತ್ಯಂತ ಸೂಕ್ಷ್ಮ ಪ್ರಕರಣಗಳು, ರಾಷ್ಟ್ರೀಯ ಭಛfrತೆಗೆ ಅಪಾಯವನ್ನುಂಟು ಮಾಡುವ ಪ್ರಕರಣಗಳು, ಪ್ರಕರಣದ ತನಿಖೆಗೆ ಪ್ರಭಾವ ಬೀರುವ ಪ್ರಕರಣಗಳ ಸಂದರ್ಭದಲ್ಲಿ ತನಿಖಾಧಿಕಾರಿಗಳು ಅಥವಾ ಸರಕಾರಗಳು ಸುಪ್ರೀಂಕೋರ್ಟ್‌ ಸೇರಿದಂತೆ ದೇಶದಲ್ಲಿನ ವಿವಿಧ ನ್ಯಾಯಾಲಯಗಳಿಗೆ ಮುಚ್ಚಿದ ಲಕೋಟೆಯಲ್ಲಿ ತನಿಖಾ ಮಾಹಿತಿಯನ್ನು ಸಲ್ಲಿಸುತ್ತವೆ. ಆದರೆ ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ಸಲ್ಲಿಸಬಹುದು ಎಂಬುದಕ್ಕೆ ಕಾನೂನಿನ ನೆರವಿಲ್ಲ. ಆದರೆ, ಸುಪ್ರೀಂ ಕೋರ್ಟ್‌ ರೂಲ್‌ 7ರ ಆದೇಶ 13, ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ 1872ರ ಸೆಕ್ಷನ್‌ 127 ಅನ್ನು ಬಳಸಿಕೊಂಡು ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ಪಡೆಯುತ್ತದೆ.

ಯಾವಾಗೆಲ್ಲ ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ನೀಡಬಹುದು?
ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಅಥವಾ ಸ್ಥಳೀಯ ಕೋರ್ಟ್‌ ತಾನೇ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಕೇಳಬಹುದು. ಇದಕ್ಕೆ ಬೇರೆ ಬೇರೆ ಕಾರಣಗಳಿವೆ. ತನಿಖಾಧಿಕಾರಿ ಅಥವಾ ಸರಕಾರ ಮಾಹಿತಿ ಬಹಿರಂಗವಾದರೆ ತನಿಖೆಗೆ ಸಮಸ್ಯೆಯುಂಟಾಗಬಹುದು ಎಂಬ ಕಾರಣದಿಂದ ಮುಚ್ಚಿದ ಲಕೋಟೆಯಲ್ಲೇ ತನಿಖಾ ವರದಿ ಸಲ್ಲಿಸಬಹುದು. ಈ ಎರಡೂ ಸಂದರ್ಭಗಳಲ್ಲೂ ಮುಚ್ಚಿದ ಲಕೋಟೆಯಲ್ಲಿ ಅರ್ಜಿದಾರರು ಅಥವಾ ಪ್ರತಿವಾದಿಗಳಿಗೆ ಈ ಮಾಹಿತಿ ಸಿಗುವ ಸಾಧ್ಯತೆಗಳಿಲ್ಲ. ಅವರಿಗೆ ಬೇಕೇ ಬೇಕು ಎಂದಾದಲ್ಲಿ ಈ ಮಾಹಿತಿ ಪಡೆದ ಕೋರ್ಟ್‌ಗಳು ನೀಡಬಹುದು.

ಮುಚ್ಚಿದ ಲಕೋಟೆಯ ಪ್ರಮುಖ ಉದ್ದೇಶ
ಆರಂಭದಲ್ಲೇ ಹೇಳಿದ ಹಾಗೆ, ದೇಶದ ಭದ್ರತೆಗೆ ಧಕ್ಕೆ ಬರುವ ಸಂಗತಿಗಳು, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದಂಥ ಪ್ರಕರಣಗಳು, ತನಿಖೆಗೆ ಅಡ್ಡಿಪಡಿಸುವಂಥ ಪ್ರಕರಣಗಳ ಸಂದರ್ಭದಲ್ಲಿ ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ನೀಡಲಾಗುತ್ತದೆ. ತನಿಖಾಧಿಕಾರಿಗಳು ಪಡೆದ ಕೆಲವೊಂದು ಮಾಹಿತಿಗಳು, ದೇಶದ ಭದ್ರತೆಗೆ ಧಕ್ಕೆಯುಂಟು ಮಾಡುವ ಸಾಧ್ಯತೆ ಇರುತ್ತವೆ. ಅಂದರೆ, ರಫೇಲ್‌ ಪ್ರಕರಣದಲ್ಲಿ ಯಾವುದೇ ಮಾಹಿತಿಯನ್ನು ಸುಪ್ರೀಂ ಕೋರ್ಟ್‌ ಬಹಿರಂಗ ಮಾಡಿಲ್ಲ. ಅಲ್ಲದೆ ಒಂದು ವೇಳೆ ಮಾಹಿತಿ, ಸಾರ್ವಜನಿಕರಿಗೆ ಬಹಿರಂಗಗೊಂಡರೆ ಬೇರೊಂದು ಸಮಸ್ಯೆಯುಂಟಾಗಬಹುದು ಎಂಬ ಕಾರಣವೂ ಇದೆ. ಇಂಥವನ್ನು ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಕಾಣಬಹುದಾಗಿದೆ.

ಹಿಂದೆ ಏನಾಗಿತ್ತು?
ಈ ಹಿಂದಿನ ಸಿಜೆಐ ರಂಜನ್‌ ಗೊಗೋಯ್‌ ಅವರ ಅವಧಿಯಲ್ಲಿ ಬಹಳಷ್ಟು ಪ್ರಕರಣಗಳ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲೇ ಸಲ್ಲಿಕೆ ಮಾಡಲಾಗಿತ್ತು. ಇದಕ್ಕೆ ಆಗಿನ ಹಿರಿಯ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಪ್ರಕರಣಗಳೆಂದರೆ:

Advertisement

1.ರಫೇಲ್‌ ಡೀಲ್‌ ಪ್ರಕರಣ
ಈ ಪ್ರಕರಣದಲ್ಲಿ ಆಗಿನ ಸಿಜೆಐ ರಂಜನ್‌ ಗೋಗೋಯ್‌ ಅವರು, ರಫೇಲ್‌ ಡೀಲ್‌ ಕುರಿತ ಎಲ್ಲ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿದ್ದರು. ಅಫಿಶಿಯಲ್‌ ಸಿಕ್ರೇಟ್‌ ಆ್ಯಕ್ಟ್ ಮತ್ತು ಡೀಲ್‌ನಲ್ಲಿನ ಸೆಕ್ರೆಸಿ ಕ್ಲಾಸಸ್‌ ಮೇರೆಗೆ, ಇದನ್ನು ಮುಚ್ಚಿದ  ಲಕೋಟೆಯಲ್ಲಿ ಪಡೆದಿದ್ದರು.

2.ರಾಷ್ಟ್ರೀಯ ಜನಸಂಖ್ಯಾನೋಂದಣಿ(ಎನ್‌ಆರ್‌ಸಿ)
ಅಸ್ಸಾಂನಲ್ಲಿ ನಡೆಸಲಾಗುತ್ತಿದ್ದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಕುರಿತಂತೆಯೂ ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ಪಡೆಯಲಾಗಿತ್ತು. ಈ ಮಾಹಿತಿಗಳನ್ನು ಸರಕಾರದ ಬಳಿಯಾಗಲಿ ಅಥವಾ ಪ್ರತಿವಾದಿಗಳಿಗಾಗಲಿ ನೀಡಿರಲಿಲ್ಲ. ಎನ್‌ಆರ್‌ಸಿ ಸಂಚಾಲಕ ಪ್ರತೀಕ್‌ ಹಜೇಲಾ ಅವರಿಂದಲೇ ಎಲ್ಲಾ ಮಾಹಿತಿಯನ್ನು ಪಡೆಯಲಾಗಿತ್ತು.

3. ಅಲೋಕ್‌ ವರ್ಮ ಮತ್ತು ರಾಕೇಶ್‌ ಆಸ್ಥಾನ ಕೇಸ್‌
ಹಿಂದೆ ಇವರಿಬ್ಬರೂ ಸಿಬಿಐ ಅಧಿಕಾರಿಗಳಾಗಿದ್ದು, ಪರಸ್ಪರ ಭ್ರಷ್ಟಾಚಾರದ ಆರೋಪ ಮಾಡಿಕೊಂಡಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ವಿಚಕ್ಷಣ ದಳ(ಸಿವಿಸಿ)ಕ್ಕೆ ಸೂಚಿಸಿದ್ದ ಸುಪ್ರೀಂ ಕೋರ್ಟ್‌, ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡುವಂತೆ ಸೂಚಿಸಿತ್ತು.

4.2014ರ ಬಿಸಿಸಿಐ ಕೇಸ್‌
ಈ ಕುರಿತಂತೆ ತನಿಖೆ ನಡೆಸಿದ್ದ ಸಮಿತಿಗೆ ಮುಚ್ಚಿದ ಲಕೋಟೆಯಲ್ಲೇ ವರದಿ ಕೊಡುವಂತೆ ಸೂಚಿಸಲಾಗಿತ್ತು. ಅಲ್ಲದೆ, ಮ್ಯಾಚ್‌ ಫಿಕ್ಸಿಂಗ್‌ ಮತ್ತು ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದ 9 ಮಂದಿ ಕ್ರಿಕೆಟಿರ ಹೆಸರನ್ನು ಬಹಿರಂಗಗೊಳಿಸದಂತೆಯೂ ಸೂಚನೆ ನೀಡಲಾಗಿತ್ತು.

5.ಭೀಮಾ ಕೊರೆಂಗಾವ್‌ ಪ್ರಕರಣ
ಕಾನೂನು ವಿರೋಧಿ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಭೀಮಾ ಕೊರೆಂಗಾವ್‌ ಕೇಸ್‌ನಲ್ಲಿ ಹಲವಾರು ಮಂದಿಯನ್ನು ಬಂಧಿಸಲಾಗಿತ್ತು. ಈ ಸಂಬಂಧ ಮಹಾರಾಷ್ಟ್ರ ಸರಕಾರ ತನಿಖೆ ನಡೆಸಿದ್ದು, ಈ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಕೊಡುವಂತೆ ಸುಪ್ರೀಂಕೋರ್ಟ್‌ ಅಲ್ಲಿನ ಪೊಲೀಸರಿಗೆ ಸೂಚನೆ ನೀಡಲಾಗಿತ್ತು.  ಇದರ ಜತೆಗೆ, 2ಜಿ ಸ್ಪೆಕ್ಟ್ರಂ ಕೇಸ್‌, ರಾಮಜನ್ಮಭೂಮಿ ಕೇಸ್‌, ನ್ಯಾಯಾಧೀಶ ಬಿ.ಎಚ್‌.ಲೋಯಾ ಸಾವಿನ ಪ್ರಕರಣದಲ್ಲೂ ಮುಚ್ಚಿದ ಲಕೋಟೆಯಲ್ಲೇ ತನಿಖಾ ವರದಿ ಪಡೆಯಲಾಗಿತ್ತು.

ಮುಚ್ಚಿದ ಲಕೋಟೆಗೇಕೆ ಟೀಕೆ?
ಈ ಸಂಪ್ರದಾಯ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಪಾರದರ್ಶಕ ಮತ್ತು ಹೊಣೆದಾಯಿತ್ವ ತತ್ತÌಗಳಿಗೆ ವಿರುದ್ಧವಾಗಿದೆ ಎಂಬುದು ವಕೀಲರ ಅಭಿಪ್ರಾಯ. ಅಲ್ಲದೆ ಇದು ಮುಕ್ತ ನ್ಯಾಯಾಲಯಕ್ಕೆ ವಿರುದ್ಧವಾಗಿದ್ದು, ಪ್ರತೀ ಸಂಗತಿಯೂ ಸಾರ್ವಜನಿಕರಿಗೆ ಗೊತ್ತಾಗಬೇಕು ಎಂದು ಹೇಳುತ್ತಾರೆ. ಅಲ್ಲದೆ ಇದರಿಂದಾಗಿ ಮುಕ್ತ ಮತ್ತು ನ್ಯಾಯ ಸಮ್ಮತ ವಿಚಾರಣೆ ನಡೆಯದಿರಬಹುದು ಎಂದು ಟೀಕಿಸುತ್ತಾರೆ. 2019ರ ಐಎನ್‌ಎಕ್ಸ್‌ ಮೀಡಿಯಾ ಕೇಸಿನಲ್ಲಿ ದಿಲ್ಲಿ ಹೈಕೋರ್ಟ್‌ ಮುಚ್ಚಿದ ಲಕೋಟೆಯ ಕಾರಣವನ್ನು ನೀಡಿ ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂಗೆ ಜಾಮೀನು ನಿರಾಕರಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್‌, ಜಾರಿ ನಿರ್ದೇಶನಾಲಯದವರು ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡಿದ್ದಾರೆ ಎಂಬ ಕಾರಣಕ್ಕಾಗಿ ಜಾಮೀನು ನಿರಾಕರಿಸುವಂತಿಲ್ಲ ಎಂದಿತ್ತು.

 

 

Advertisement

Udayavani is now on Telegram. Click here to join our channel and stay updated with the latest news.

Next