Advertisement

ಬೇಕಿದೆ ದಾರಿದೀಪ, ಎಚ್ಚರಿಕೆ ಫ‌ಲಕ

10:41 AM Feb 04, 2018 | Team Udayavani |

ಪಡುಪಣಂಬೂರು: ಮೀನುಗಾರಿಕಾ ಇಲಾಖೆಯಿಂದ 2 ಕೋಟಿ ರೂ. ವೆಚ್ಚದಲ್ಲಿ ಪಡು ಪಣಂಬೂರು ಮತ್ತು ಹಳೆಯಂಗಡಿ ಗ್ರಾಮ ಪಂಚಾಯತ್‌ನ ಗಡಿ ಪ್ರದೇಶವಾಗಿರುವ ಕದಿಕೆ - ಹೊಗೆಗುಡ್ಡೆ ನೂತನ ರಸ್ತೆಯು ನಿರ್ಮಾಣವಾಗಿ ವರ್ಷ ಕಳೆದಿದೆ. ಆದರೆ ಇಲ್ಲಿ
ಅಗತ್ಯವಾಗಿ ಬೇಕಿರುವ ದಾರಿದೀಪ, ಎಚ್ಚರಿಕೆ ಫ‌ಲಕವನ್ನು ಅಳವಡಿಸಿಲ್ಲ.

Advertisement

ಅಪಾಯ ತಪ್ಪಿದ್ದಲ್ಲ
ಪಡುಪಣಂಬೂರು ಹಾಗೂ ಚಿತ್ರಾಪುವಿನ ಮೂಲಕ ಸಸಿಹಿತ್ಲು ಪ್ರದೇಶಕ್ಕೆ ಸಂಪರ್ಕಿಸುವ ಈ ನೂತನ ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ಸಂಚರಿಸುವ ವಾಹನ ಸವಾರರು ಕೊಂಚ ಎಚ್ಚರ ತಪ್ಪಿದರೂ ನೇರವಾಗಿ ನದಿಗೆ ಬೀಳುವ ಸಾಧ್ಯತೆ ಇದೆ. ರಸ್ತೆ ತಿರುವು ಮುರುವಾಗಿದ್ದು, ದಾರಿದೀಪದ ವ್ಯವಸ್ಥೆಯೂ ಇಲ್ಲ. ಹೀಗಾಗಿ ರಾತ್ರಿ ವೇಳೆಯಲ್ಲಿ ವಾಹನ ಸಂಚಾರಕ್ಕೆ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಕೂಡಲೇ ದಾರಿದೀಪ, ಎಚ್ಚರಿಕೆಯ ಫ‌ಲಕವನ್ನು ಇಲ್ಲಿ ಅಳವಡಿಸಲೇಬೇಕಿದೆ ಎನ್ನುತ್ತಾರೆ ಸ್ಥಳೀಯರು.

ಸೂಚನ ಫ‌ಲಕ ಅಗತ್ಯ
ಬೀಚ್‌ ಹಾಗೂ ಸಸಿಹಿತ್ಲಿನ ಶ್ರೀ ಭಗವತೀ ಕ್ಷೇತ್ರಕ್ಕೆ ತಲುಪುವವರು ಈ ರಸ್ತೆಯನ್ನು ಬಳಸುವುದರಿಂದ ನದಿಯ ದಡದಲ್ಲಿ ಸೂಕ್ತವಾದ ಸೂಚನ ಫಲಕವನ್ನಾದರೂ ಅಳವಡಿಸಬೇಕು. ಹಳೆಯಂಗಡಿಯಲ್ಲಿಅನೇಕ ಸಂಘ ಸಂಸ್ಥೆಗಳು ಸೇವಾ ಕಾರ್ಯನಿರ್ವಹಿಸುತ್ತಿದ್ದು, ಕನಿಷ್ಠ ಜಾಗೃತಿ ಮೂಡಿಸುವ ಎಚ್ಚರಿಕೆಯ ಫಲಕಗಳನ್ನು ರಿಫ್ಲೆಕ್ಟರ್‌ ಸ್ಟಿಕ್ಕರ್‌ಗಳ ಮೂಲಕ ಅಳವಡಿಸಲು ಮುಂದಾದರೆ ಮುಂದಾಗುವ ಅಪಾಯವನ್ನು ತಪ್ಪಿಸಬಹುದು.

ಗ್ರಾಮ ಸಭೆಯಲ್ಲಿ ಪ್ರಸ್ತಾಪ
ಹೊಸದಾಗಿ ಕದಿಕೆ ರಸ್ತೆಯನ್ನು ನಿರ್ಮಾಣ ಮಾಡುವಾಗ ಕೆಲವೊಂದು ತಾಂತ್ರಿಕ ದೋಷವನ್ನು ಕಾಣಬಹುದು. ದಾರಿ ದೀಪ ಅಥವ ಸೂಚನ ಫಲಕಗಳನ್ನು ಅಳವಡಿಸಲು ಗ್ರಾಮ ಸಭೆಯಲ್ಲಿ ಆಗ್ರಹ ಕೇಳಿ ಬಂದಿದೆ. ಈ ಬಗ್ಗೆ ಸೂಕ್ತವಾದ ಅನುದಾನ ಬಳಸಿಕೊಂಡು ಆದ್ಯತೆಯಂತೆ ಇಲ್ಲಿನ ಸಮಸ್ಯೆಗೆ ಪರಿಹಾರ ನೀಡಲು ಪ್ರಯತ್ನ ನಡೆಸುತ್ತೇವೆ.
 – ಮೋಹನ್‌ದಾಸ್‌, ಅಧ್ಯಕ್ಷರು, ಪಡುಪಣಂಬೂರು ಗ್ರಾ.ಪಂ.

ಎಚ್ಚರಿಕೆ ಅಗತ್ಯ
ಬಹು ವರ್ಷಗಳ ಬೇಡಿಕೆಯಿಂದ ಹೊಸದಾಗಿ ಸಂಪರ್ಕ ರಸ್ತೆಯಾಗಿ ನಿರ್ಮಾಣವಾಗಿದೆ. ಆದರೆ ಮೂಲ ಸೌಕರ್ಯಕ್ಕೆ ಗ್ರಾಮ ಪಂಚಾಯತ್‌ ಗಮನ ಹರಿಸಬೇಕು. ಪ್ರವಾಸಿಗರು, ಭಕ್ತರು ಅಥವಾ ಸ್ಥಳೀಯರು ಸಂಚರಿಸುವಾಗ ಬಹಳಷ್ಟು ಎಚ್ಚರಿಕೆಯ ಅವಶ್ಯಕತೆ ಇರುವುದರಿಂದ ಕೂಡಲೇ ಜನಪ್ರತಿನಿಧಿಗಳು ಇತ್ತ ಗಮಹರಿಸಬೇಕಿದೆ.
 – ಖಾದರ್‌ ಕದಿಕೆ, ಸ್ಥಳೀಯ ಗ್ರಾಮಸ್ಥರು

Advertisement

ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next