ಹೊನ್ನಾವರ: ಉನ್ನತ ಚಿಕಿತ್ಸೆ ನೀಡುವ ಆರೋಗ್ಯ ಕೇಂದ್ರ ಜಿಲ್ಲೆಯಲ್ಲಿ ಬೇಕು ಎಂಬುದಕ್ಕೆ ಎರಡು ಮಾತಿಲ್ಲ. ಫೇಸ್‌ಬುಕ್ ಯುವಕರು ಆರಂಭಿಸಿದ ಚಳವಳಿಗೆ ಜನರ, ಜನಪ್ರತಿನಿಧಿಗಳ ಬೆಂಬಲ ಸಿಕ್ಕಿದೆ. ಕುಮಟಾದಲ್ಲಿ ಆಗಲಿ ಎಂದು ಕೆಲವರು, ಹೊನ್ನಾವರದಲ್ಲಿ ಆಗಲಿ ಅಂತ ಇನ್ನೂ ಕೆಲವರು ಚರ್ಚೆ ನಡೆಸಿದ್ದಾರೆ. ಕೆಲಸ ಮಾತ್ರ ಕಾರವಾರದಲ್ಲಿ ಪ್ರಗತಿಯಲ್ಲಿದೆ. ಅದನ್ನೂ ಅವಲೋಕಿಸೋಣ.
ಕಾರವಾರ ಮೆಡಿಕಲ್ ಕಾಲೇಜಿನ ಜೊತೆಗಿರುವ ಜಿಲ್ಲಾಸ್ಪತ್ರೆಯಲ್ಲಿ 300 ಹಾಸಿಗೆ ಸೌಲಭ್ಯವಿದೆ. ಸರ್ಕಾರಿ ಮೆಡಿಕಲ್ ಕಾಲೇಜಿನ 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಕಳೆದ ಬಜೆಟ್‌ನಲ್ಲಿ 150 ಕೋಟಿ ಘೋಷಿಸಲಾಗಿದೆ. ಸ್ಥಳ ಸಮಸ್ಯೆಯಿಂದ ನಿರ್ಮಾಣ ವಿಳಂಬವಾಗುತ್ತಿದೆ. ಮೆಡಿಕಲ್ ಕಾಲೇಜಿನ 400 ಹಾಸಿಗೆ ಆಸ್ಪತ್ರೆಯ ನೆಲಮಹಡಿಯಲ್ಲಿ ತುರ್ತು ಚಿಕಿತ್ಸಾ ಘಟಕದ ಪಕ್ಕದಲ್ಲಿ ಟ್ರೋಮಾ ಸೆಂಟರ್ ನಿರ್ಮಾಣಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಇದೇ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಆಸ್ಪತ್ರೆಗೆ ಆಟೋಮಿಕ್ ಎನರ್ಜಿ ಬೋರ್ಡ್ ಅನುಮತಿ ನೀಡಿದ್ದು 2017ರ ಬಜೆಟ್‌ನಲ್ಲಿ ಸರ್ಕಾರ 18ಕೋಟಿ ರೂ. ಘೋಷಿಸಿದೆ. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ತಜ್ಞರ ತಂಡ ಮುಖ್ಯ ಆಸ್ಪತ್ರೆ ಸಮೀಪವೇ ಕ್ಯಾನ್ಸರ್ ಆಸ್ಪತ್ರೆ ಇರಲಿ ಎಂದು ಹೇಳಿದೆ. ಸರ್ಕಾರಿ ಮೆಡಿಕಲ್ ಕಾಲೇಜಿಗೆ ಎಂಬಿಬಿಎಸ್‌ಗೆ ಅನುಮತಿ ನಿರಾಕರಿಸಲು ಕಾರವಾರಕ್ಕೆ ವೈದ್ಯರು ಬರಲು ಒಪ್ಪದಿರುವುದು ಕಾರಣ. ಡಿಪ್ಲೊಮಾ ಆರಂಭಿಸಿದರೂ ವಿದ್ಯಾರ್ಥಿಗಳು ಬರುತ್ತಿಲ್ಲ. ಮೆಡಿಕಲ್ ಕಾಲೇಜಿಗೆ ಕನಿಷ್ಠ 700 ಹಾಸಿಗೆ ಬೇಕು, 60 ರೆಸಿಡೆಂಟ್ ಡಾಕ್ಟರ್‌ಗಳು ಬೇಕು. ಕಾರವಾರದಲ್ಲಿ ಸದ್ಯ 300 ಹಾಸಿಗೆ ಸೌಲಭ್ಯ, 10 ರೆಸಿಡೆಂಟ್ ಡಾಕ್ಟರ್‌ಗಳಿದ್ದಾರೆ. ನೂತನ 400 ಹಾಸಿಗೆಗಳ ಕಟ್ಟಡ ನಿರ್ಮಾಣವಾದ ಕೂಡಲೇ ಟ್ರೋಮಾ ಸೆಂಟರ್, ಕ್ಯಾನ್ಸರ್ ಆಸ್ಪತ್ರೆ, ತುರ್ತು ಚಿಕಿತ್ಸಾ ಘಟಕ ಎಲ್ಲವೂ ಜಿಲ್ಲೆಗೆ ಲಭ್ಯವಾಗುತ್ತದೆ. ಈ ವಿವರವನ್ನು ಅಧಿಕೃತವಾಗಿ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ದೇಶಕ ಶಿವಾನಂದ ದೊಡ್ಮನಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಸರ್ಕಾರ ಇಂತಹ ವಿಷಯದಲ್ಲಿ ತಜ್ಞರ ವರದಿಗೆ ಹೆಚ್ಚು ಆದ್ಯತೆ ನೀಡುತ್ತದೆ.
ತಲೆಗೆ ಗಂಭೀರ ಗಾಯವಾದರೆ ಚಿಕಿತ್ಸೆ ನಡೆಸಲು ಜಿಲ್ಲೆಯಲ್ಲಿ ನ್ಯೂರೋ ಫಿಜಿಶಿಯನ್, ನ್ಯೂರೋ ಸರ್ಜನ್ ಇಲ್ಲ. ಹೃದಯಾಘಾತ ಆದರೆ ಎಂಜಿಯೋಪ್ಲಾಸ್ಟ್ ಅಥವಾ ಬೈಪಾಸ್ ಶಸ್ತ್ರಚಿಕಿತ್ಸೆಗೆ ಜಿಲ್ಲೆಯಲ್ಲಿ ತಜ್ಞರಿಲ್ಲ. ಇಂತಹ ಸಂದರ್ಭದಲ್ಲಿ ಎರಡು ತಾಸಿನೊಳಗೆ ಚಿಕಿತ್ಸೆ ಆಗಬೇಕು. ಈ ಚಿಕಿತ್ಸೆಗೆ ವಿಳಂಬವಾಗಿ ಸಾವನ್ನಪ್ಪುವುದು ಸತ್ಯ. ಇದರ ಹೊರತಾಗಿ ಜಿಲ್ಲೆಯ ಎಲ್ಲ ತಾಲೂಕುಗಳ ಮುಖ್ಯ ಆಸ್ಪತ್ರೆಗಳು ಮತ್ತು ಖಾಸಗಿ ದೊಡ್ಡ ಆಸ್ಪತ್ರೆಗಳು ಉಳಿದ ಚಿಕಿತ್ಸೆ ಮಾಡುವಷ್ಟು ಉಪಕರಣ, ವೈದ್ಯರನ್ನು ಹೊಂದಿವೆ. ಇಲ್ಲಿ ಸಾಧ್ಯವಿಲ್ಲದಿದ್ದರೆ ನೆರೆ ಜಿಲ್ಲೆ ಆಸ್ಪತ್ರೆಗೆ ಕಳಿಸಿಕೊಡುತ್ತವೆ. ಜಿಲ್ಲೆಯಲ್ಲಿ ಯಾವ ಸೌಲಭ್ಯವೂ ಇಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು. ಮೆಡಿಕಲ್ ಕಾಲೇಜುಗಳ ಆರಂಭಕ್ಕೆ 500 ಕೋಟಿ ಬೇಕು. ಅಲ್ಲಿ ಎಲ್ಲಾ ವಿಭಾಗದ ವೈದ್ಯರಿರುತ್ತಾರೆ. ಅಲ್ಲಿ ಮಾತ್ರ ಟ್ರೋಮಾ ಸೆಂಟರ್ ಸಾಧ್ಯ. ಬಂಡವಾಳ ಶಾಹಿಗಳು ಟ್ರೋಮಾ ಸೆಂಟರ್ ಸಹಿತ 100 ಹಾಸಿಗೆಗಳ ದೊಡ್ಡ ಆಸ್ಪತ್ರೆ ಆರಂಭಿಸಲು ಕನಿಷ್ಠ 100ಕೋಟಿ ರೂ. ತೊಡಗಿಸಬೇಕು. ಎಲ್ಲ ವಿಭಾಗದ ವೈದ್ಯರಿಗೆ ತಿಂಗಳಿಗೆ 10ಕೋಟಿ ರೂ. ಸಂಬಳಕ್ಕೆ ಬೇಕು. ವೈದ್ಯರೂ ಸಿಕ್ಕುವುದಿಲ್ಲ. ಗಂಭೀರ ಪರಿಸ್ಥಿತಿಯಲ್ಲಿರುವ ಒಂದೋ ಎರಡೋ ರೋಗಿಗಳು ಬರಬಹುದು ಎಂಬುದು ಹಿಂದಿನ ವರ್ಷದ ಲೆಕ್ಕಾಚಾರ. ಕನಿಷ್ಠ ಬಡ್ಡಿ ಹಣ ಹುಟ್ಟದಿದ್ದರೆ ಯಾರೂ ದೊಡ್ಡ ಆಸ್ಪತ್ರೆ ಕಟ್ಟುವುದಿಲ್ಲ. ಸಾಕಷ್ಟು ರೋಗಿಗಳಿಲ್ಲದಿದ್ದರೆ ವೈದ್ಯರೂ ಬರುವುದಿಲ್ಲ. ಇದು ವಾಸ್ತವಿಕ.
ಹೇಗೋ ಕಾರವಾರದಲ್ಲಿ ಮೆಡಿಕಲ್ ಕಾಲೇಜು ಆಧುನಿಕ ಆಸ್ಪತ್ರೆ ಸೌಲಭ್ಯ ಕಾರ್ಯರೂಪದಲ್ಲಿದೆ. ಶಾಸಕರು, ಸಂಸದರು, ಹಿರಿಯ ಸಾಮಾಜಿಕ ಸಂಘಟನೆಗಳು, ಸಂಘ ಸಂಸ್ಥೆಗಳು ಒಂದಾಗಿ ಬೇಗ ಜಾಗ ಕೊಡಿಸಿ, ಕಟ್ಟಡ ನಿರ್ಮಾಣಕ್ಕೆ ಉಳಿದ ಹಣ ಮತ್ತು ವೈದ್ಯರು ಬರುವಂತೆ ಮನವೊಲಿಸುವ ಕೆಲಸವನ್ನು ಬೆಂಗಳೂರು, ದೆಹಲಿಯಲ್ಲಿ ಪ್ರಯತ್ನ ನಡೆಸಿದರೆ ಎರಡೇ ವರ್ಷದಲ್ಲಿ ಕಾರವಾರ ಮಿನಿ ಮಣಿಪಾಲ ಆಗಬಹುದು.
•ಜೀಯು, ಹೊನ್ನಾವರ