Advertisement

ಸಿಟಿ ಸ್ಮಾರ್ಟ್‌ಗೆ ಬೇಕಿದೆ ಸರ್ವರ ಶ್ರಮ

01:20 PM Mar 03, 2017 | Team Udayavani |

ದಾವಣಗೆರೆ: ಯಾವುದೇ ಸಿಟಿ ಸ್ಮಾರ್ಟ್‌ ಆಗಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಿದೆ ಎಂದು ಐರೆಲಂಡ್‌ನ‌ ಸ್ಮಾರ್ಟ್‌ ಸಿಟಿ ತಜ್ಞ ಮಾರ್ಟಿನ್‌ ಸೆರೆನೊ ಹೇಳಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್‌ ಸಿಟಿ ಎಂಬ ಕಲ್ಪನೆ ಯುರೋಪಿಯನ್‌ ಜನರಿಗೆ ಹಳೇದು. ಭಾರತ ಮಟ್ಟಿಗೆ ಹೊಸತು.

Advertisement

ಎಲ್ಲಾ ತಂತ್ರಜ್ಞಾನ ಬಳಸಿಕೊಂಡು ನಿರ್ಮಾಣ ಮಾಡುವ ನಗರಕ್ಕೆ ಸ್ಮಾರ್ಟ್‌ ಸಿಟಿ ಎನ್ನಲಾಗುತ್ತದೆ. ಸ್ಮಾರ್ಟ್‌ ಸಿಟಿಯ ಉದ್ದೇಶ ಈಡೇರಬೇಕಾದರೆ ಎಲ್ಲರೂ ಕೈ ಜೋಡಿಸಬೇಕಿದೆ ಎಂದರು. ಸ್ಥಳೀಯ ಆಡಳಿತ ಸಂಸ್ಥೆ, ಜನಪ್ರತಿನಿಧಿಗಳು, ಸಂಘ, ಸಂಸ್ಥೆ, ಮುಖ್ಯವಾಗಿ ನಾಗರಿಕರು ಸ್ಮಾರ್ಟ್‌ ಸಿಟಿಯ ತಳಹದಿ ಅರಿತು, ಅದರಂತೆ ಜೀವನ ಕಟ್ಟಿಕೊಳ್ಳಬೇಕು.

ತಂತ್ರಜ್ಞಾನದ ಮೂಲಕ ಜನರ ಜೀವನ ಉತ್ತಮಗೊಳಿಸುವ ಉದ್ದೇಶಕ್ಕೆ ನಿರ್ಮಾಣವಾಗುತ್ತಿರುವ ಭಾರತೀಯ ಸ್ಮಾರ್ಟ್‌ ಸಿಟಿಗಳು ಮುಂದೆ ಜನಪಯೋಗಿ ಆಗಲಿವೆ ಎಂದು ಅವರು ತಿಳಿಸಿದರು. ಯುರೋಪ್‌ನಲ್ಲಿ 250ಕ್ಕೂ ಹೆಚ್ಚು ಸ್ಮಾರ್ಟ್‌ ಸಿಟಿಗಳಿವೆ. ಪ್ರತೀ ಸ್ಮಾರ್ಟ್‌ ಸಿಟಿ ತನ್ನದೇ ಆದ ಮೂಲ ಉದ್ದೇಶ ಹೊಂದಿದೆ.

ತಂತ್ರಜ್ಞಾನ ಬಳಸಿಕೊಂಡು ಜನರು ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳುತ್ತಿದ್ದಾರೆ. ಇಡೀ ಪ್ರಪಂಚದಲ್ಲಿಯೇ ಉತ್ತಮ ಸ್ಮಾರ್ಟ್‌ ಸಿಟಿ ಅನ್ನಿಸಿಕೊಳ್ಳುವಂತಹ ನಗರಗಳು ಅಲ್ಲಿವೆ ಎಂದು ಅವರು ತಿಳಿಸಿದರು. ಭಾರತದ ಸ್ಮಾರ್ಟ್‌ ಸಿಟಿ ನಿರ್ಮಾಣ ಇನ್ನೂ ಉತ್ತಮವಾಗಿ ಮಾಡುವ ಅವಕಾಶ ಇದೆ. 

ಈಗಾಗಲೇ ಯುರೋಪ್‌ ಸೇರಿದಂತೆ ಇತರೆ ದೇಶಗಳಲ್ಲಿರುವ ಸ್ಮಾರ್ಟ್‌ ಸಿಟಿಗಳ ಅಧ್ಯಯನ ಮಾಡಿ ಅಲ್ಲಿ ಆದ ತೊಂದರೆ, ಸಮಸ್ಯೆಗಳು ಇಲ್ಲಿ ಉದ್ಭವಿಸದಂತೆ ತಡೆಯಲು ಅವಕಾಶ ಇದೆ. ಭಾರತೀಯರು ಈ ಅವಕಾಶ ಸದುಪಯೋಗ ಪಡಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಅವರು ಹೇಳಿದರು. 

Advertisement

ಜನ ಜೀವನ ಸುಧಾರಣೆ, ವಾಹನ ಸುಗಮ ಚಾಲನೆ, ಜನ ಆರೋಗ್ಯವಾಗಿರಲು ಉತ್ತಮ ವಾತಾರವಣ ಕಲ್ಪಿಸುವುದು ಸ್ಮಾರ್ಟ್‌ ಸಿಟಿಯ ಪ್ರಮುಖ ಉದ್ದೇಶ. ಜನ ಅನಾರೋಗ್ಯಕ್ಕೆ ತುತ್ತಾಗುವ ಮುನ್ನವೇ ಅವರ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಸ್ಮಾರ್ಟ್‌ ಸಿಟಿಯ ಯೋಜನೆ ಒಳಗೊಂಡಿರಬೇಕು. 

ಉತ್ತಮ ಪರಿಸರ, ಅತ್ಯಾಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬಹುದಾದ ಪರಿಕರಗಳ ಬಳಕೆ, ಜನರನ್ನು ಸೂಕ್ತವಾಗಿ ನಿರ್ದೇಶಿಸಬಲ್ಲ ತಂತ್ರಾಂಶಗಳು ಸ್ಮಾರ್ಟ್‌ ಸಿಟಿಯ ಇತರೆ ಲಕ್ಷಗಳಾಗುತ್ತವೆ ಎಂದು ಅವರು ಹೇಳಿದರು. ಭಾರತ ಕೇಳಿದಲ್ಲಿ ನಮ್ಮ ಕಡೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ. 

ಸಹಕಾರ, ಒಟ್ಟಾಗಿ ಸೇರಿ ಸ್ಮಾರ್ಟ್‌ ಸಿಟಿ ನಿರ್ಮಾಣಮಾಡುವ, ಸೂಕ್ತ ಸಲಹೆ, ಸೂಚನೆ ನೀಡಲು ನಮ್ಮ ಸಂಸ್ಥೆ ಹಿಂದೇಟು ಹಾಕುವುದಿಲ್ಲ ಎಂದು ಅವರು ಹೇಳಿದರು. ಜಿಎಂಐಟಿ ಪ್ರಾಂಶುಪಾಲ ಡಾ| ಪ್ರಕಾಶ್‌, ಇಂಜಿನಿಯರ್‌ ಆರ್‌.ಟಿ. ಅರುಣ್‌ ಕುಮಾರ್‌, ಪ್ರೊ. ಬಸವರಾಜ ಇತರರು ಸುದ್ದಿಗೋಷ್ಠಿಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next