Advertisement

ಪ್ರಾಮಾಣಿಕ ಚೌಕಿದಾರ ಬೇಕೋ ಭ್ರಷ್ಟ ನಾಮ್‌ದಾರ್‌ ಬೇಕೋ?

09:00 AM Apr 14, 2019 | mahesh |

ಹೊಸದಿಲ್ಲಿ: “ಈ ಲೋಕಸಭೆ ಚುನಾವಣೆಯು ನನ್ನ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನಡುವಿನ ಸಮರವಾಗಿದ್ದು, ನಿಮಗೆ “ಪ್ರಾಮಾಣಿಕ ಚೌಕಿದಾರ’ ಬೇಕೋ ಅಥವಾ “ಭ್ರಷ್ಟಾಚಾರಿ ನಾಮ್‌ದಾರ್‌’ ಬೇಕೋ ಎಂಬುದನ್ನು ನೀವು ನಿರ್ಧರಿಸಿ. ಅಷ್ಟೇ ಅಲ್ಲ, ನಿಮಗೆ “ಭಾರತದ ಹೀರೋಗಳು’ ಬೇಕೋ, “ಪಾಕಿಸ್ಥಾನದ ಬೆಂಬಲಿಗರು’ ಬೇಕೋ ಎಂಬುದನ್ನೂ ನೀವೇ ಯೋಚಿಸಿ, ನಿರ್ಧಾರಕ್ಕೆ ಬನ್ನಿ.’

Advertisement

ಹೀಗೆಂದು ಮತದಾರರಿಗೆ ಕರೆ ನೀಡಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ. ಶುಕ್ರವಾರ ಮಹಾರಾಷ್ಟ್ರದ ಅಹಮದ್‌ನಗರದಲ್ಲಿ ಚುನಾವಣಾ ಪ್ರಚಾರ ರ್ಯಾಲಿ ನಡೆಸಿ ಮಾತನಾಡಿದ ಅವರು, ದೇಶದ ಭವಿಷ್ಯವನ್ನು ಮತ್ತು ಈ ಚುನಾವಣೆಯಲ್ಲಿ ದೇಶವನ್ನು ಯಾವ ದಿಕ್ಕಿಗೆ ಒಯ್ಯುತ್ತೀರಿ ಎಂಬುದನ್ನು ನೀವೇ ನಿರ್ಧರಿಸಬೇಕು ಎಂದರು.

ಕಠಿನ ನಿರ್ಧಾರಗಳು: ಕಳೆದ 5 ವರ್ಷಗಳಲ್ಲಿ ಈ ಚೌಕಿದಾರನ ಸರಕಾರವು ಹಲವು ಕಠಿನ ನಿರ್ಧಾರಗಳನ್ನು ಕೈಗೊಂಡಿದೆ. ಹಿಂದಿನ ಯುಪಿಎ ಸರಕಾರವಿದ್ದಾಗ, ರೈಲು, ಬಸ್ಸುಗಳು, ಸ್ಟೇಷನ್‌ಗಳಲ್ಲಿ ಬಾಂಬ್‌ ಸ್ಫೋಟಗಳು ನಡೆಯುತ್ತಿದ್ದವು. ಹಲವು ರೈತರು, ಮಧ್ಯಮ ವರ್ಗದ ಜನರು, ವ್ಯಾಪಾರಿಗಳು ಸಾಯುತ್ತಿದ್ದರು. ಆದರೆ, ಈ ಚೌಕಿದಾರನ ಆಡಳಿತದಲ್ಲಿ ಒಂದೇ ಒಂದು ಬಾಂಬ್‌ ಸ್ಫೋಟವೂ ನಡೆದಿಲ್ಲ, ಒಂದೇ ಒಂದು ಭಯೋತ್ಪಾದಕ ಕೃತ್ಯವೂ ನಡೆದಿಲ್ಲ. ಈ ಚೌಕಿದಾರನು ಭಯೋತ್ಪಾದಕರು ನರಕದಲ್ಲಿದ್ದರೂ ಹಿಡಿದು, ಶಿಕ್ಷಿಸುತ್ತಾನೆ ಎಂದು ಹೇಳಿದ್ದಾರೆ.

ಎ.15ಕ್ಕೆ ವಿಚಾರಣೆ: “ಪಿಎಂ ನರೇಂದ್ರ ಮೋದಿ’ ಸಿನಿಮಾ ಬಿಡುಗಡೆಗೆ ತಡೆ ನೀಡಿರುವ ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ಸಿನಿಮಾದ ನಿರ್ಮಾಪಕರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಅರ್ಜಿಯನ್ನು ಸ್ವೀಕರಿಸಿ ರುವ ನ್ಯಾಯಾಲಯ, ಎ. 15ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ.

ಮಾರುಕಟ್ಟೆಯಲ್ಲಿ ಎಲ್ಲೆಲ್ಲೂ ಚೀನದ ಉತ್ಪನ್ನಗಳೇ: ರಾಹುಲ್‌
ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ರ್ಯಾಲಿ ನಡೆಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಅವರು, ಪ್ರಧಾನಿ ಮೋದಿಯ ಮೇಕ್‌ ಇನ್‌ ಇಂಡಿಯಾ ಘೋಷಣೆ ಬಗ್ಗೆ ವ್ಯಂಗ್ಯವಾಡಿದ್ದಾರೆ. “ಮೋದಿಯವರು ಹೋದಲ್ಲೆಲ್ಲ ಮೇಕ್‌ ಇನ್‌ ಇಂಡಿಯಾ ಎಂಬ ಸ್ಲೋಗನ್‌ ಹೇಳುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ನೋಡಿದಲ್ಲೆಲ್ಲ ಮೇಡ್‌ ಇನ್‌ ಚೈನಾ ವಸ್ತುಗಳೇ ಕಾಣಸಿಗುತ್ತವೆ’ ಎಂದು ರಾಹುಲ್‌ ಹೇಳಿದ್ದಾರೆ. ಅಲ್ಲದೆ, ಮೋದಿ ಸರಕಾರದ ಆಡಳಿತದಲ್ಲಿ ಒಬ್ಬ ತಮಿಳು ಯುವಕ ಉದ್ಯಮ ಆರಂಭಿಸಬೇಕೆಂದರೆ, ವಿವಿಧ ಸರಕಾರಿ ಕಚೇರಿಗಳ ಕದ ತಟ್ಟಬೇಕು ಮತ್ತು ಅವರಿಗೆ ಲಂಚ ನೀಡಬೇಕು. ಅವನಿಗೆ ಉದ್ಯಮ ನಡೆಸಲು ಅನುಮತಿ ಸಿಗುವಾಗ, ಎಲ್ಲವೂ ಮುಗಿದಿರುತ್ತದೆ. ಹೀಗಾಗಿಯೇ, ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹೊಸ ಐಡಿಯಾ ಘೋಷಿಸಿದೆ. ಹೊಸ ಉದ್ಯಮವನ್ನು ನೀವು ಸ್ಥಾಪಿಸಬೇಕೆಂದರೆ, ಮೂರು ವರ್ಷಗಳ ಕಾಲ ಸರಕಾರದ ಅನುಮತಿಯನ್ನೇ ಪಡೆಯಬೇಕಾಗಿಲ್ಲ. ನಿಮ್ಮ ಉದ್ದಿಮೆಯು ಒಂದು ಹಂತಕ್ಕೆ ಬಂದ ಬಳಿಕ ಅನುಮತಿ ಪಡೆದರೆ ಸಾಕು ಎಂದಿದ್ದಾರೆ ರಾಹುಲ್‌. ಅಲ್ಲದೆ, ಸಾವಿರಾರು ಕೋಟಿ ರೂ.ಗಳನ್ನು ದೊಡ್ಡ ದೊಡ್ಡ ಉದ್ಯಮಿಗಳಿಗೆ ನೀಡುವ ಪ್ರಧಾನಿ ಮೋದಿ ಅವರು, ತಮಿಳುನಾಡಿನ ಅನ್ನದಾತರು ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಸೌಜನ್ಯಕ್ಕಾದರೂ ನಿಮ್ಮ ಬಳಿಕ ಬಂದು, ಒಂದೇ ಒಂದು ಮಾತೂ ಕೇಳಲಿಲ್ಲ ಎಂದೂ ಟೀಕಿಸಿದ್ದಾರೆ.

Advertisement

ರಾಹುಲ್‌ ವಿರುದ್ಧ ಆಯೋಗ, ಸುಪ್ರೀಂಗೆ ಬಿಜೆಪಿ ದೂರು
ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವಹೇಳನಕಾರಿ ಪದ ಬಳಕೆ ಮಾಡುತ್ತಿದ್ದಾರೆ ಮತ್ತು ಸುಪ್ರೀಂ ಕೋರ್ಟ್‌ನ ಆದೇಶ ವನ್ನು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ದುರ್ಬಳಕೆ ಮಾಡಿಕೊಳ್ಳು ತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ನಿಯೋಗ ಶುಕ್ರವಾರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಒಂದು ಕಡೆ ರಕ್ಷಣಾ ಸಚಿವೆ ನಿರ್ಮಲಾ ಸೀತಾ ರಾಮನ್‌ ನೇತೃತ್ವದ ಬಿಜೆಪಿ ನಿಯೋಗವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಮೋದಿ ವಿರುದ್ಧ ರಾಹುಲ್‌ ಆಧಾರರಹಿತ ಆರೋಪ ಮಾಡು ತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಇನ್ನೊಂದೆಡೆ, ಬಿಜೆಪಿ ಸಂಸದೆ ಮೀನಾಕ್ಷಿ ಲೇಖೀ ಅವರು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಸಿದ್ದು, ರಾಹುಲ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದನ್ವಯ ಕ್ರಮ ಕೈಗೊ ಳ್ಳಬೇಕು ಎಂದು ಮನವಿ ಮಾಡಿದ್ದಾರೆ. ರಫೇಲ್‌ ಕುರಿತು ಸುಪ್ರೀಂ ನೀಡಿರುವ ಆದೇಶವನ್ನು ತಮ್ಮ ಚುನಾವಣಾ ಭಾಷಣ ದಲ್ಲಿ ಪ್ರಸ್ತಾಪಿಸಿದ್ದ ರಾಹುಲ್‌, “ಸುಪ್ರೀಂ ಕೋರ್ಟ್‌ ಕೂಡ ಚೌಕಿದಾರ್‌ ಚೋರ್‌ ಹೆ ಎಂದು ಹೇಳಿದೆ’ ಎಂದಿದ್ದರು.

ಸಚಿವೆ ಸ್ಮತಿ ಇರಾನಿ “ಸರಣಿ ಸುಳ್ಳುಗಾತಿ’ ಎಂದ ಕಾಂಗ್ರೆಸ್‌
ಕೇಂದ್ರ ಸಚಿವೆ ಸ್ಮತಿ ಇರಾನಿ ಅವರನ್ನು “ಸರಣಿ ಸುಳ್ಳುಗಾತಿ’ ಎಂದು ಕರೆದಿರುವ ಕಾಂಗ್ರೆಸ್‌, ಚುನಾವಣಾ ಆಯೋಗಕ್ಕೆ ತಮ್ಮ ವಿದ್ಯಾಭ್ಯಾಸದ ಬಗ್ಗೆ ಸುಳ್ಳು ಮಾಹಿತಿ ನೀಡಿದ ಸ್ಮತಿ ಅವರನ್ನು ಕೂಡಲೇ ಅನರ್ಹಗೊಳಿಸಬೇಕು ಎಂದು  ಆಗ್ರಹಿಸಿದೆ.

ಶುಕ್ರವಾರ ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್‌ ವಕ್ತಾರೆ ಪ್ರಿಯಾಂಕಾ ಚತುರ್ವೇದಿ, “ಸ್ಮತಿ ಇರಾನಿ ಪದವೀಧರೆ ಅಲ್ಲ ಎಂದು ಕಾಂಗ್ರೆಸ್‌ ಎಷ್ಟೇ ಬಾರಿ ಹೇಳಿದರೂ, ಆ ವಾದವನ್ನು ತಿರಸ್ಕರಿಸುತ್ತಲೇ ಬಂದಿದ್ದ ಸ್ಮತಿ ಈಗ ಗುರುವಾರ ಸಲ್ಲಿಸಿದ ಅಫಿದವಿತ್‌ನಲ್ಲಿ ಕೊನೆಗೂ ಸತ್ಯ ಬಾಯಿಬಿಟ್ಟಿದ್ದಾರೆ. ತಮ್ಮ ಶೈಕ್ಷಣಿಕ ಅರ್ಹತೆ ಬಗ್ಗೆ ಹಿಂದಿನ ಚುನಾವಣೆಗಳ ಅಫಿದವಿತ್‌ನಲ್ಲಿ ಸುಳ್ಳೇ ಸುಳ್ಳು ಮಾಹಿತಿ ನೀಡುವ ಮೂಲಕ ದೇಶದ ಜನರ ಹಾದಿ ತಪ್ಪಿಸಿರುವ ಸ್ಮತಿ ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ನೇರವಾಗಿ ಯಾವುದೇ ಪ್ರತಿಕ್ರಿಯೆ ನೀಡದ ಸ್ಮತಿ, “ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅಮೇಠಿಗಾಗಿ ಕೆಲಸ ಮಾಡುತ್ತೇನೆ’ ಎಂದಷ್ಟೇ ಹೇಳಿದ್ದಾರೆ.

ಲಾಲು ಭೇಟಿಯಾಗಿದ್ದರೇ ಪ್ರಶಾಂತ್‌ ಕಿಶೋರ್‌?
ಆರ್‌ಜೆಡಿ ಜತೆಗಿನ ಮಹಾಮೈತ್ರಿಯಿಂದ ಹೊರ ಬಂದು ಬಿಜೆಪಿ ಜತೆ ಕೈಜೋಡಿಸಿದ ಬಳಿಕವೂ ಜೆಡಿಯು, ಮತ್ತೆ ಲಾಲು ಜತೆ ಕೈಜೋಡಿಸಲು ಯತ್ನಿ ಸಿತ್ತು ಎಂದು ಲಾಲು ಪತ್ನಿ ರಾಬ್ರಿ ದೇವಿ ತಿಳಿಸಿದ್ದಾರೆ. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಬಳಿಕವೂ ಸತತ 5 ಬಾರಿ ಜೆಡಿಯು ನಾಯಕ ಪ್ರಶಾಂತ್‌ ಕಿಶೋರ್‌ ಅವರು ಆರ್‌ಜೆಡಿ ಧುರೀಣ ಲಾಲು ಪ್ರಸಾದ್‌ ಯಾದವ್‌ ಅವರನ್ನು ಭೇಟಿಯಾಗಿ ತಮ್ಮ ಪ್ರಸ್ತಾವ ಮುಂದಿಟ್ಟಿದ್ದರು. ಹಾಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಈ ಎರಡೂ ಪಕ್ಷಗಳು ಸಮ್ಮಿಲನ ಗೊಂಡು ಅನಂತರ ರೂಪುಗೊಳ್ಳುವ ಹೊಸ ಪಕ್ಷದ ಮೂಲಕ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವ ವಿಚಾರವನ್ನೂ ಪ್ರಶಾಂತ್‌ ಪ್ರಸ್ತಾವಿಸಿದ್ದರು ಎಂದು ರಾಬ್ರಿ ತಿಳಿಸಿದ್ದಾರೆ. ಒಂದು ವೇಳೆ ಅಂಥದ್ದೇನೂ ನಡೆ ದಿಲ್ಲ ಎಂದು ಕಿಶೋರ್‌ ಹೇಳಿದರೆ, ಅದಕ್ಕಿಂತ ದೊಡ್ಡ ಬೇರೊಂದಿರಲಿಕ್ಕಿಲ್ಲ. ಅವರು ಮನೆಗೆ ಬಂದಿದ್ದಕ್ಕೆ ಸಾಕಷ್ಟು ಸಾಕ್ಷಿಗಳೂ ಇವೆ ಎಂದಿದ್ದಾರೆ ಲಾಲು ಪತ್ನಿ.

ಉದ್ಯೋಗ ಬೇಕಂದ್ರೆ ನನಗೆ ಮತ ಹಾಕಿ
“ಮುಸ್ಲಿಮರಿಗೆ ಉದ್ಯೋಗ ಪಡೆಯುವ ಆಸೆಯಿದ್ದರೆ ತಮಗೆ ಮತ ಹಾಕಬೇಕು’ ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಸಂಸದೆ ಮನೇಕಾ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಕಾಂಗ್ರೆಸ್‌, ಮನೇಕಾ ಅವರ ಉಮೇದುವಾರಿಕೆ ರದ್ದುಗೊಳಿಸುವಂತೆ ಆಗ್ರಹಿಸಿದೆ. ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ಶುಕ್ರವಾರ ನಡೆಸಿದ ಪ್ರಚಾರದ ವೇಳೆ, “ಮುಸ್ಲಿಮರು ನನಗೆ ಮತ ಹಾಕದಿದ್ದರೂ ನಾನು ಗೆಲ್ಲುತ್ತೇನೆ. ಆದರೆ, ಮುಂದೊಂದು ದಿನ ತಮಗೆ ಕೆಲಸ ಕೊಡಿಸಿ ಎಂದು ಮುಸ್ಲಿಮರು ಬಂದು ಕೇಳಿದಾಗ ನಾನು ಅವರಿಗೆ ಹೇಗೆ ಕೆಲಸ ಕೊಡಿಸಲಿ? ಕೆಲಸ ಕೊಡಿಸುವುದೂ ಒಂದು ಕೊಡು-ತಗೋ ವ್ಯವಹಾರವಲ್ಲವೇ?’ ಎಂದು ಮನೇಕಾ ಹೇಳಿರುವ ದೃಶ್ಯಗಳು ವೈರಲ್‌ ಆಗಿವೆ.

ಶಾಯಿ ಅಳಿಸುವ ಬಗ್ಗೆ ಸಖತ್‌ ಹುಡುಕಾಟ!
ಚುನಾವಣೆ ಬಂತೆಂದರೆ, ಕಂಪ್ಯೂಟರ್‌ ಜ್ಞಾನ ಹೊಂದಿರುವವರು ಅಂತರ್ಜಾಲದಲ್ಲಿ ಚುನಾವಣೆ ಸಂಬಂಧಿತ ಕೆಲವು ಮಾಹಿತಿಗಳಿಗಾಗಿ ಹುಡುಕಾಟ ನಡೆಸುವುದು ವಾಡಿಕೆ. ಅಂತ ರ್ಜಾಲ ಸರ್ಚ್‌ ಎಂಜಿನ್‌ ಸಂಸ್ಥೆಯಾದ ಗೂಗಲ್‌ ಹೇಳುವ ಪ್ರಕಾರ, ಗುರುವಾರ ನಡೆದ ಮೊದಲ ಹಂತದ ಮತದಾನದಂದು ಅತಿ ಹೆಚ್ಚು ಜನರು ಗೂಗಲ್‌ನಲ್ಲಿ “ಮತದಾನದ ವೇಳೆ ಬೆರಳಿಗೆ ಹಾಕಲಾಗುವ ಶಾಯಿಯ ಗುರುತನ್ನು ಅಳಿಸುವುದು ಹೇಗೆ’ ಎಂಬ ಬಗ್ಗೆ ಜಾಲಾಡಿದ್ದಾರಂತೆ. ಜತೆಗೆ “ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕಾಟ’ ಹಾಗೂ “ವಿದ್ಯುನ್ಮಾನ ಮತಯಂತ್ರಗಳ ದೋಷ ನಿವಾರಣೆ’ ಬಗ್ಗೆ ತಿಳಿಯಲೂ ಬಹುತೇಕ ಮಂದಿ ಅಂತರ್ಜಾಲದಲ್ಲಿ ಹುಡುಕಾಡಿದ್ದಾರೆ ಎಂದು ಗೂಗಲ್‌ ಹೇಳಿದೆ.

ಸಿಂಧಿಯಾ, ತಿವಾರಿಗೆ ಕಾಂಗ್ರೆಸ್‌ ಟಿಕೆಟ್‌
ಕೇಂದ್ರದ ಮಾಜಿ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಮನೀಷ್‌ ತಿವಾರಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಶುಕ್ರವಾರ ಬಿಡುಗಡೆ ಮಾಡಿದ ಹೊಸ ಪಟ್ಟಿಯಲ್ಲಿ ಮಧ್ಯಪ್ರದೇಶದ ಗುನಾದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾಗೆ, ಪಂಜಾಬ್‌ನ ಆನಂದ್‌ಪುರ ಸಾಹಿಬ್‌ನಿಂದ ಮನೀಷ್‌ ತಿವಾರಿಗೆ ಟಿಕೆಟ್‌ ನೀಡಲಾಗಿದೆ. ಈ ಮೂಲಕ ಪಕ್ಷವು ಒಟ್ಟಾರೆ ಈ ಲೋಕಸಭೆ ಚುನಾವಣೆಗೆ 386 ಅಭ್ಯರ್ಥಿಗಳ ಹೆಸರು ಘೋಷಿಸಿದಂತಾಗಿದೆ. ಸಿಂಧಿಯಾ ಅವರು ಪ್ರಸ್ತುತ ಗುನಾ ಕ್ಷೇತ್ರವನ್ನೇ ಪ್ರತಿನಿಧಿಸುತ್ತಿದ್ದಾರೆ. ಆದರೆ, ತಿವಾರಿ ಕಳೆದ ಚುನಾವಣೆಯಲ್ಲಿ ಅನಾರೋಗ್ಯ ಹಿನ್ನೆಲೆಯಲ್ಲಿ ಕಣಕ್ಕಿಳಿಯಲು ಒಪ್ಪಿರಲಿಲ್ಲ.

ತ.ನಾಡಲ್ಲಿ ಐಟಿ ದಾಳಿ
ತಮಿಳುನಾಡಿಗೆ ಮತ್ತೂಮ್ಮೆ ಐಟಿ ದಾಳಿಯ ಬಿಸಿ ಮುಟ್ಟಿದ್ದು, ಶುಕ್ರವಾರ 18 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಚೆನ್ನೈ, ತಿರುನ ಲ್ವೇಲಿ, ನಾಮಕ್ಕಲ್‌ ಸಹಿತ 18 ಪ್ರದೇಶಗಳಲ್ಲಿ ಗುತ್ತಿಗೆದಾರ ಸಂಸ್ಥೆ ಪಿಎಸ್‌ಕೆ ಎಂಜಿನಿಯರಿಂಗ್‌ ಕನ್‌ಸ್ಟ್ರಕ್ಷನ್‌ ಕಂಪನಿ, ಫೈನಾನ್ಶಿಯರ್‌ಗಳ ನಿವಾಸ, ಕಚೇರಿ  ಗಳಲ್ಲಿ ಶೋಧ ಕಾರ್ಯ ನಡೆದಿದೆ. ಈ ನಡುವೆ, ಹೈದರಾಬಾದ್‌ನಲ್ಲಿ ಬಿಜೆಪಿಯಿಂದ 8 ಕೋಟಿ ರೂ.ಗಳನ್ನು ವಶಪಡಿಸಿಕೊಂಡ 4 ದಿನಗಳ ಬಳಿಕ, ಅದು ಪಕ್ಷದ ಬ್ಯಾಂಕ್‌ ಖಾತೆಯಿಂದಲೇ ವಿತ್‌ಡ್ರಾ ಮಾಡಿದ ಹಣ ಎಂದು ಐಟಿ ಇಲಾಖೆ ಸ್ಪಷ್ಟಪಡಿಸಿದೆ.

ಅಮಿತ್‌ ಶಾ ಭೇಟಿಯಾದ ಪಟೇಲ್‌ ನಾಯಕರು
ಮಹತ್ವದ ಬೆಳವಣಿಗೆಯಲ್ಲಿ, ಗುಜರಾತ್‌ನ ಪಟೇಲ್‌ ಸಮುದಾಯದ ನಾಯಕರು ಶುಕ್ರವಾರ ಬಿಜೆಪಿ ಅಧ್ಯಕ್ಷ ಅಮಿತ್‌ ಶಾರನ್ನು ಭೇಟಿಯಾಗಿದ್ದಾರೆ. ಸಮುದಾಯಕ್ಕೆ ಸಂಬಂಧಿಸಿ ಇನ್ನೂ ಈಡೇರದ ಕೆಲವು ವಿಚಾರಗಳ ಬಗ್ಗೆ ಚರ್ಚಿಸಲೆಂದು ಈ ಭೇಟಿ ಮಾಡಲಾಗಿದೆ. ಈ ಭೇಟಿಗೂ ಲೋಕಸಭೆ ಚುನಾವಣೆಗೂ ಸಂಬಂಧವಿಲ್ಲ ಎಂದಿದ್ದಾರೆ.

ಎಲ್‌ಡಿಎಫ್, ಯುಡಿಎಫ್ ವಿರುದ್ಧ ಪಿಎಂ ಮೋದಿ ವಾಗ್ಧಾಳಿ
ಕೇರಳದಲ್ಲಿ ಆಡಳಿತಾರೂಢ ಎಲ್‌ಡಿಎಫ್ ಮತ್ತು ಪ್ರತಿಪಕ್ಷ ಯುಡಿಎಫ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಗುಡುಗಿದ್ದಾರೆ. ಕೇರಳದ ಕಲ್ಲಿಕೋಟೆಯಲ್ಲಿ ಚುನಾವಣಾ ಪ್ರಚಾರ ರ್ಯಾಲಿ ನಡೆಸಿದ ಅವರು, ಹಲವು ದಶಕಗಳ ಕಾಲ ರಾಜ್ಯ ರಾಜಕೀಯದಲ್ಲಿ ಪ್ರಬಲರಾಗಿದ್ದ ಎರಡೂ ಪಕ್ಷಗಳೂ ಜನರಿಗೆ ಮೋಸ ಮಾಡಿದವು ಎಂದು ಆರೋಪಿಸಿದ್ದಾರೆ. ಕಮ್ಯೂನಿಸ್ಟ್‌ ಎಲ್‌ಡಿಎಫ್ ಮತ್ತು ಕಮ್ಯೂನಲ್‌(ಕೋಮುವಾದಿ) ಯುಡಿಎಫ್ ಕೇರಳ ರಾಜಕೀಯವನ್ನು ಆಳಿದವು. ಆದರೆ, ಜನರಿಗೆ ವಂಚಿಸುತ್ತಲೇ ಬಂದವು. ಈಗ ನಾವು ರಾಜ್ಯಕ್ಕೆ ಹೊಸ ಪರ್ಯಾಯ ಶಕ್ತಿಯನ್ನು ಪರಿಚಯಿಸುತ್ತಿದ್ದೇವೆ. ಅದು ಎಲ್ಲರನ್ನೊಳಗೊಂಡ, ಪ್ರಜಾ ಸತ್ತಾತ್ಮಕ ಹಾಗೂ ಸಹಾನುಭೂತಿಯ ಆಡಳಿತ ನೀಡಲಿದೆ ಎಂದು ಮೋದಿ ಹೇಳಿದ್ದಾರೆ. ಕಾಂಗ್ರೆಸ್‌ ಮತ್ತು ಎಲ್‌ಡಿಎಫ್ ಅನ್ನು ಗೆಲ್ಲಿಸುವು ದೆಂದರೆ, ಆ ಪಕ್ಷಗಳ ನಾಯಕರಿಗೆ ಭ್ರಷ್ಟಾಚಾರ ಮಾಡಲು ಲೈಸೆನ್ಸ್‌ ಕೊಟ್ಟಂತೆ ಎಂದ ಮೋದಿ, ಜನರ ಸೇವೆಗೈದ ಬಿಜೆಪಿ ಕಾರ್ಯಕರ್ತರನ್ನು ಇಲ್ಲಿ ಹತ್ಯೆಗೈಯ್ಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಛತ್ತೀಸ್‌ಗಢದ ದಂತೇವಾಡದಲ್ಲಿ ಇತ್ತೀಚೆಗೆ ನಡೆದ ನಕ್ಸಲ್‌ ದಾಳಿಯಲ್ಲಿ ನಮ್ಮ ಶಾಸಕ ಭೀಮ ಮಾಂಡವಿ ಪ್ರಾಣ ಕಳೆದುಕೊಳ್ಳಬೇಕಾಯಿತು. ಅದು ಸಾಮಾನ್ಯ ದಾಳಿಯಲ್ಲ, ಅದು ರಾಜಕೀಯ ಸಂಚು ಆಗಿದ್ದು, ಅದರ ಬಗ್ಗೆ ಸಿಬಿಐ ತನಿಖೆಯಾಗಬೇಕು.
ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ

ಅಧಿಕಾರಕ್ಕೆ ಬಂದರೆ “ದೇಶದ್ರೋಹ’ ಕಾನೂನು ತೆಗೆದುಹಾಕುವುದಾಗಿ ಕಾಂಗ್ರೆಸ್‌ ಹೇಳಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಆ ಕಾನೂನನ್ನು ಮತ್ತಷ್ಟು ಶಕ್ತಿಶಾಲಿಯಾಗಿ ಮಾರ್ಪಡಿಸಲಾಗುತ್ತದೆ.
ರಾಜನಾಥ್‌ ಸಿಂಗ್‌, ಕೇಂದ್ರ ಸಚಿವ

ನಮಗೆ ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ ಇದೆ. ಆದರೆ ಯಾವತ್ತೂ ಸೇನೆಯ ಸಾಧನೆ ಹೆಸರ‌ಲ್ಲಿ ಮತ ಕೇಳಿಲ್ಲ. ಸೇನೆಯ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಸಿಡಿದೆದ್ದ ನಿವೃತ್ತ ಯೋಧರ ಜೊತೆ ನಾವಿದ್ದೇವೆ.
ಮಮತಾ ಬ್ಯಾನರ್ಜಿ, ಪ.ಬಂ. ಸಿಎಂ

ನಾನು ಇಡೀ ಚುನಾವಣೆಯಲ್ಲಿ ನಾನೊಬ್ಬಳು ಸ್ಟಾರ್‌ ಎಂಬಂತೆ ನಡೆದುಕೊಳ್ಳುತ್ತಿಲ್ಲ. ನಾನು ತಳ ಮಟ್ಟದ ಜನರ ಜೊತೆ ಸಂಪರ್ಕ ಸಾಧಿಸಿ, ಅವರ ಸಂಕಷ್ಟಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.
ಊರ್ಮಿಳಾ, ಕಾಂಗ್ರೆಸ್‌ ಅಭ್ಯರ್ಥಿ

ಚೀನ ಸಮುದ್ರದಡಿ ರೈಲ್ವೆ ಹಳಿ ನಿರ್ಮಿಸುತ್ತಿದೆ, ಅಮೆರಿಕ ಬಾಹ್ಯಾಕಾಶದಲ್ಲಿ ಜೀವಿಸುವ ಬಗ್ಗೆ ಆವಿಷ್ಕರಿಸುತ್ತಿದೆ, ರಷ್ಯಾವು ಅದ್ಭುತ ರೊಬೋಟ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆದರೆ, ಮೋದಿ ಸರಕಾರ ಮಾತ್ರ ದೇಶದ ಜನರನ್ನು “ಚೌಕಿದಾರ’ ಮಾಡುವಲ್ಲಿ ನಿರತವಾಗಿದೆ.
ನವಜೋತ್‌ ಸಿಧು, ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next