Advertisement

ಉತ್ತಮ ದಾಖಲಾತಿಯ ಶಾಲೆಗೆ ಬೇಕಿದೆ ಹೆಚ್ಚುವರಿ ಶಿಕ್ಷಕರು

08:03 PM Oct 03, 2021 | Team Udayavani |

ಕುಂದಾಪುರ: ಕಳೆದ 2-3 ವರ್ಷಗಳಿಂದ ದಾಖಲಾತಿಯಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿರುವ ಆಲೂರು- ಹರ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಕ್ಕ ಮಟ್ಟಿಗೆ ಬಹುತೇಕ ಎಲ್ಲ ಸೌಕರ್ಯಗಳಿದ್ದು, ಆದರೆ ಮಕ್ಕಳ ಸಂಖ್ಯೆ ಏರುತ್ತಿರುವುದರಿಂದ ಹೆಚ್ಚುವರಿ ಶಿಕ್ಷಕರು ಹಾಗೂ ಪೀಠೊಪಕರಣಗಳ ಬೇಡಿಕೆಯಿದೆ.

Advertisement

ಆಲೂರು- ಹರ್ಕೂರು ಹಿ.ಪ್ರಾ. ಶಾಲೆಯಲ್ಲಿ ಒಟ್ಟು 227 ಮಂದಿ ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದಾರೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ 234 ಮಂದಿ ಮಕ್ಕಳಿದ್ದರು. ಆದರೆ ಇವರಲ್ಲಿ ಈ ಸಾಲಿನಲ್ಲಿ 58 ಮಂದಿ ವಿದ್ಯಾರ್ಥಿಗಳು ಈ ಬಾರಿ 8ನೇ ತರಗತಿಗೆ ತೇರ್ಗಡೆಗೊಂಡಿದ್ದು, ಇನ್ನು 5-6 ಮಂದಿ ಮಕ್ಕಳು ಕೆಲವು ತರಗತಿಗಳಿಂದ ಆಂಗ್ಲ ಮಾಧ್ಯಮಕ್ಕೆ ತೆರಳಿದ್ದಾರೆ.

ಶಿಕ್ಷಕರ ಬೇಡಿಕೆ
2015ರಲ್ಲಿ 130ಕ್ಕೂ ಹೆಚ್ಚು ಮಂದಿ ಮಕ್ಕಳಿದ್ದ ವೇಳೆಯಲ್ಲಿಯೇ ಈ ಶಾಲೆಯಲ್ಲಿ 7 ಮಂದಿ ಶಿಕ್ಷಕರು ಬೋಧಿಸುತ್ತಿದ್ದರು. ಈಗ ಮಕ್ಕಳ ಸಂಖ್ಯೆ 220 ಕ್ಕಿಂತ ಹೆಚ್ಚಾದಾಗಲೂ ಇಷ್ಟೇ ಮಂದಿ ಶಿಕ್ಷಕರಿದ್ದಾರೆ. ಮಕ್ಕಳ ಸಂಖ್ಯೆ ಹೆಚ್ಚಿರುವುದರಿಂದ ಈ ಶಾಲೆಗೆ ಕನಿಷ್ಠ 2-3 ಮಂದಿ ಹೆಚ್ಚುವರಿ ಶಿಕ್ಷಕರ ಅಗತ್ಯವಿದೆ. ಆಟದ ಮೈದಾನ, ಆವರಣ ಗೋಡೆ, ಶೌಚಾಲಯ ಇನ್ನಿತರ ಸಮಸ್ಯೆ ಯನ್ನು ಈಗಾಗಲೇ ದಾನಿಗಳು, ಶಿಕ್ಷಕರು, ಊರವರು, ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿ ಸಂಘಟನೆಗಳೆಲ್ಲ ಸೇರಿ ಬಗೆಹರಿಸಿದ್ದಾರೆ.

ಪೀಠೊಪಕರಣದ ಅಗತ್ಯ
ಮಕ್ಕಳ ಸಂಖ್ಯೆ ಹೆಚ್ಚಾಗುತ್ತ ಹೋದಂತೆ ಶಾಲೆಯಲ್ಲಿರುವ ಬೆಂಚ್‌, ಡೆಸ್ಕ್ ಸಹಿತ ಇನ್ನಿತರ ಪೀಠೊಪಕರಣಗಳ ಕೊರತೆಯೂ ಎದುರಾಗುತ್ತದೆ. ಇನ್ನೇನು ಪೂರ್ಣ ಪ್ರಮಾಣದಲ್ಲಿ ಈ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭ ಆಗುತ್ತಿರುವುದರಿಂದ ಆದಷ್ಟು ಬೇಗ ಇಲ್ಲಿನ ಅಗತ್ಯಗಳನ್ನು ಪೂರೈಸಬೇಕಿದೆ. ಶಿಕ್ಷಣ ಇಲಾಖೆ, ಸಂಬಂಧಪಟ್ಟ ಜನಪ್ರತಿನಿಧಿಗಳು ಈ ಎಲ್ಲ ಬೇಡಿಕೆಯನ್ನು ಈಡೇರಿಸಬೇಕು ಎನ್ನುವ ಬೇಡಿಕೆ ಸಾರ್ವಜನಿಕರದ್ದಾಗಿದೆ.

ಇದನ್ನೂ ಓದಿ:ಉಡುಪಿ ಜಿಲ್ಲೆಯಲ್ಲಿ ಶೇ.80ರಷ್ಟು ಪಡಿತರ ಕಾರ್ಡ್‌ಗಳ ಇ-ಕೆವೈಸಿ ಪೂರ್ಣ

Advertisement

ಉತ್ತಮ ದಾಖಲಾತಿ
ಒಟ್ಟಾರೆ ಮಕ್ಕಳ ಸಂಖ್ಯೆಯಲ್ಲಿ ಕಳೆದ ಸಾಲಿಗಿಂತ ಈ ಸಾಲಿನಲ್ಲಿ 7 ಮಕ್ಕಳ ಸಂಖ್ಯೆ ಕಡಿಮೆಯಿದ್ದರೂ, ಈ ಸಾಲಿನಲ್ಲಿಯೂ ಉತ್ತಮ ದಾಖಲಾತಿಯಾಗಿದೆ. ಒಂದನೇ ತರಗತಿಗೆ 31 ಮಂದಿ ಹಾಗೂ ಆರನೇ ತರಗತಿಗೆ 25 ಸೇರಿ ಒಟ್ಟು ಈ ಬಾರಿ 56 ಮಂದಿ ಹೊಸದಾಗಿ ಈ ಶಾಲೆಗೆ ಸೇರ್ಪಡೆಯಾಗಿದ್ದಾರೆ. 2015 ರಲ್ಲಿ ಈ ಶಾಲೆಯಲ್ಲಿ 137 ಮಂದಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಅಂದರೆ ಕಳೆದ 6 ವರ್ಷಗಳಲ್ಲಿ ಈ ಶಾಲೆಯ ಮಕ್ಕಳ ಸಂಖ್ಯೆ ಸರಿ ಸುಮಾರು 100 ರಷ್ಟು ಹೆಚ್ಚಳವಾಗಿದೆ.

ಶಿಕ್ಷಕರ ಬೇಡಿಕೆ
ಈ ನಮ್ಮ ಆಲೂರು ಶಾಲೆಗೆ ಕಟ್ಟಡ, ಆಟದ ಮೈದಾನ, ಆವರಣ ಗೋಡೆ, ಶೌಚಾಲಯ ಇನ್ನಿತರ ಬೇಡಿಕೆಗಳು ಈಗಾಗಲೇ ತಕ್ಕ ಮಟ್ಟಿಗೆ ಈಡೇರಿದೆ. ಆದರೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಶಿಕ್ಷಕರ ಬೇಡಿಕೆಯಿದೆ. ಮೂಲಗಳ ಪ್ರಕಾರ ಈ ಶಾಲೆಗೆ 3 ಶಿಕ್ಷಕರ ಮಂಜೂರಾತಿಯಾಗಿದೆ ಎನ್ನುವ ಮಾಹಿತಿಯಿದ್ದು, ಆದರೆ ಅದಿನ್ನು ಅಧಿಕೃತವಾಗಿಲ್ಲ.
– ಶಶಿಧರ್‌ ಶೆಟ್ಟಿ, ಮುಖ್ಯೋಪಾಧ್ಯಾಯರು

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next