Advertisement

ಕೇಂದ್ರ 5000 ಕೋಟಿ ಕೊಡಲಿ

11:36 AM Aug 11, 2019 | Suhan S |

ಬೆಳಗಾವಿ: ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ತಕ್ಷಣ ಪರಿಹಾರ ಕಾರ್ಯಗಳಿಗಾಗಿ ಕೇಂದ್ರ ಸರಕಾರ 4 ರಿಂದ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದರು.

Advertisement

ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸಂಜೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪದಿಂದ 50 ರಿಂದ 60 ಸಾವಿರ ಕೋಟಿ ರೂ ಹಾನಿಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸರಕಾರ ಗಮನಹರಿಸಬೇಕು ಎಂದರು.

ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರ ಸೂಚನೆ ಮೇರೆಗೆ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆಗೆ ಬಂದಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಅವರ ಸಲಹೆಯಂತೆ ಬಂದಿರುವ ಮುಖ್ಯಮಂತ್ರಿಗಳು ರಾಜ್ಯಕ್ಕೆ ಈ ಸಮಯದಲ್ಲಿ ಹೆಚ್ಚಿನ ಅನುದಾನ ತರಬೇಕು ಎಂದು ಹೇಳಿದರು.

ಕೇಂದ್ರ ಹಣಕಾಸು ಸಚಿವರು ಶನಿವಾರ ಬೆಳಗಾವಿಗೆ ಬಂದು ಎರಡು ಜಿಲ್ಲೆಗಳ Óಮೀಕ್ಷೆ ಮಾಡಿ ಹೋಗಿದ್ದಾರೆ. ಆದರೆ ಅವರಿಂದ ತುರ್ತು ಪರಿಹಾರವಾಗಿ ಯಾವುದೇ ಹಣಕಾಸು ನೆರವಿನ ಘೋಷಣೆ ಆಗಲಿಲ್ಲ. ನನಗೆ ಈ ಸರಕಾರದ ಮೇಲೆ ನಂಬಿಕೆ ಇಲ್ಲ. ಇದರಿಂದ ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಬಹಳ ನಿರಾಸೆಯಾಗಿದೆ ಎಂದರು.

ಯಡಿಯೂರಪ್ಪ ಅವರು ಬಹಳ ಶ್ರಮಪಟ್ಟು ಮುಖ್ಯಮಂತ್ರಿಗಳಾಗಿದ್ದಾರೆ. ಈ ಹಂತದಲ್ಲಿ ಅವರಿಗೆ ಬಹಳ ತಾಳ್ಮೆ ಬೇಕು. ಏಕಾಂಗಿ ಸರಕಾರವಾಗಿರುವ ಅವರ ಮೇಲೆ ರಾಜ್ಯದ ಜನರ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಧಿಕಾರಿಗಳ ಮೇಲೆ ರೇಗಾಡಿದರೆ ಕೆಲಸ ಆಗುವುದಿಲ್ಲ. ಬದಲಾಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

Advertisement

ನಾನು 14 ತಿಂಗಳ ಕಾಲ ಅಧಿಕಾರ ನಡೆಸಿದ ವೇಳೆ ಎಲ್ಲ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಿದ್ದರಿಂದಲೇ ಇವತ್ತು ಯಡಿಯೂರಪ್ಪ ಅವರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಜನರಿಗೆ ನಮ್ಮದು ಸುರಕ್ಷಿತ ಸರಕಾರ ಎಂಬ ವಿಶ್ವಾಸವನ್ನು ಮೊದಲು ಮೂಡಿಸಲಿ. ನಾವು ಅಸಹಾಯಕತೆ ತೋರಿಸಿದರೆ ಜನರು ಏನು ಮಾಡಬೇಕು. ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳಾಗಲು ತಕ್ಷಣ ಕೆಲ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ಎಂದು ಕುಮಾರಸ್ವಾಮಿ ಆಗ್ರಹಪಡಿಸಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಇದು ಸರಕಾರಕ್ಕೆ ದೊಡ್ಡ ಸವಾಲು. ಮೊದಲೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೆ ದೊಡ್ಡ ಪ್ರಮಾಣದ ಹಾನಿ ಕಡಿಮೆ ಮಾಡುವ ಅವಕಾಶ ಇತ್ತು ಎಂದು ಕುಮಾರಸ್ವಾಮಿ ಹೇಳಿದರು.

ಬೆಂಬಲ ನೀಡಿದ ಕ್ಷೇತ್ರಕ್ಕೆ ಗಮನ ಕೊಡದ ಸಿಎಂ: ಎ‍ಚ್ಡಿಕೆ ವ್ಯಂಗ್ಯ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಕಾಗವಾಡ, ಅಥಣಿ ಮತ್ತು ಗೋಕಾಕ ಕ್ಷೇತ್ರಗಳ ಶಾಸಕರ ಬೆಂಬಲದಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಆ ಕ್ಷೇತ್ರದ ಜನರ ಸಮಸ್ಯೆ ನೋಡದ ಅವರು ಇನ್ಯಾವ ಕ್ಷೇತ್ರದ ಸಮಸ್ಯೆ ಆಲಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಬಿಎಸ್‌ವೈ ವಿರುದ್ಧ ವ್ಯಂಗ್ಯವಾಡಿದರು. ತಾಲೂಕಿನ ಪ್ರವಾಹ ಪೀಡಿತ ಅಂಕಲಿ, ನಿಪ್ಪಾಣಿ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ವಯೋಸಹಜ ಸಮಸ್ಯೆಯಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು. ಸರ್ಕಾರದಲ್ಲಿ ಸಮರ್ಪಕ ಅಧಿಕಾರಿಗಳಿದ್ದಾರೆ, ಅವರ ಸಲಹೆ ಪಡೆದು ಹಿಂದಿನ ಸರ್ಕಾರದ ಕಡತಗಳಲ್ಲಿ ಏನೇನಿವೆ ಎಂಬುದನ್ನು ನೋಡಿಕೊಳ್ಳಬೇಕು. ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ಜನರು ಪ್ರವಾಹದಿಂದ ತತ್ತರಿಸಿ ಹೋಗಿದ್ದಾರೆ. ಅವರ ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ ಎಂದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಶಾಸಕರಾದ ಸಾ.ರಾ. ಮಹೇಶ, ಬಂಡೇಪ್ಪ ಕಾಶಂಪೂರ, ಮಾಜಿ ಶಾಸಕ ಕಲ್ಲಪ್ಪಣ್ಣಾ ಮಗೇನ್ನವರ, ರಾಜು ಪಾಟೀಲ, ಕಾಡಗೌಡ ಪಾಟೀಲ ಇದ್ದರು.
Advertisement

Udayavani is now on Telegram. Click here to join our channel and stay updated with the latest news.

Next