Advertisement

ಕುತ್ತಿಗೆ, ಸೊಂಟ ನೋವು 

03:17 PM Apr 30, 2017 | |

ನೋವು ಎಂದರೇನು?
ದೇಹದ ಯಾವುದೇ ಭಾಗಕ್ಕೆ ಪೆಟ್ಟು ಅಥವಾ ಹಾನಿಯಾದಾಗ ಅದನ್ನು ಸೂಚಿಸಲು ಆಗುವಂಥ ಅನುಭವವೇ ನೋವಾಗಿದೆ. ಇದು ಕೇವಲ ಸೂಚ ನೆಯೇ ಹೊರತು ಒಂದು ಕಾಯಿಲೆ ಯಲ್ಲ. ನೋವು ನಮ್ಮ ಸ್ನೇಹಿತ. ಶತ್ರುವಲ್ಲ.

Advertisement

ನೋವಿನ ಬಗ್ಗೆ ಇನ್ನಷ್ಟು ಮಾಹಿತಿ
ಶಾರೀರಿಕವಾಗಿ ಪೆಟ್ಟಾದಾಗ ನಮ್ಮಲ್ಲಿ ಮೂಡುವಂಥ ಅಭಿವ್ಯಕ್ತಿಯೇ ನೋವು. ನೋವು 2 ವಿಧಗಳು ಒಳಗೊಂಡಿದೆ. ಒಂದು-ಶಾರೀರಿಕ (ಪೆಟ್ಟು) ಮತ್ತು ಮಾನಸಿಕ ಭಾವನೆ, ಒತ್ತಡ (ಚಿಂತೆ, ಭಯ, ದಿಗಿಲು ಮುಂತಾದ ಭಾವನೆಗಳು ವಿಪರೀತವಾದಾಗ ಬರುವಂಥದ್ದು. ಇವು  ನೋವನ್ನು ಹೆಚ್ಚಿಸುತ್ತದೆ ಮತ್ತು ಜಟಿಲಗೊಳಿಸುತ್ತದೆ.)

ನೋವಿನಿಂದ ಮುಕ್ತಿ 
ಪಡೆಯುವುದು ಹೇಗೆ?

ಪೆಟ್ಟಾದಾಗ ಅದನ್ನು ಸ್ವಾಭಾವಿಕವಾಗಿ ವಾಸಿ ಮಾಡುವ ಸಾಮರ್ಥ್ಯ ಮಾನವ ದೇಹಕ್ಕಿದೆ. ಆದರೆ ಅದಕ್ಕೆ ಸ್ವಲ್ಪ ಸಮಯ ಬೇಕು. 90 ಶೇಕಡದಷ್ಟು ಜನರಿಗೆ ಯಾವುದೇ ಚಿಕಿತ್ಸೆ ಇಲ್ಲದೆ ಮೂರು ತಿಂಗಳೊಳಗೆ ನೋವಿನಿಂದ ಮುಕ್ತಿ ಪಡೆಯಲು ಸಾಧ್ಯವಿದೆ. ಸಮಸ್ಯೆ ಏನೆಂದರೆ ನಮಗೆ ತಾಳ್ಮೆಯಿರುವುದಿಲ್ಲ ಮತ್ತು ನಮ್ಮ ಮುಂದೆ ಅನೇಕ ಆಯ್ಕೆಗಳಿರುತ್ತವೆ. ನಮ್ಮ ದೇಹವೇ ಸ್ವಾಭಾವಿಕವಾಗಿ ಪೆಟ್ಟಿನಿಂದ ಚೇತರಿಸಿ ಕೊಳ್ಳಲು ನಾವು ಬಿಡುವುದೇ ಇಲ್ಲ.

2 ದಿನಕ್ಕಿಂತ ಹೆಚ್ಚು ಸಮಯ ಬೆಡ್‌ರೆಸ್ಟ್‌ ತೆಗೆದುಕೊಂಡರೆ ವಾಸಿಯಾಗುವುದು ತಡವಾಗುತ್ತದೆ:- ಇದರಿಂದ ಇನ್ನೂ ನೋವಿದೆ ಎಂದುಕೊಂಡು ಮಾನಸಿಕವಾಗಿ ನರಳುತ್ತಿರುತ್ತೇವೆ. ಚಟುವಟಿಕೆಯಿಂದ ಇದ್ದಾಗ ಮಾತ್ರ ಬೇಗನೇ ವಾಸಿಯಾಗಲು ಸಾಧ್ಯವಾಗುತ್ತದೆ.

7 ದಿನಗಳಿಗಿಂತ ಹೆಚ್ಚು ಸಮಯ ಲುಂಬರ್‌ ಬೆಲ್ಟ್‌ಗಳು/ಕುತ್ತಿಗೆ ಬೆಲ್ಟ್ ಗಳನ್ನು ಉಪಯೋಗಿಸುವುದು ಸರಿಯಲ್ಲ ಎಂದು ದೃಢೀಕರಿಸಲ್ಪಟ್ಟಿದೆ. ಇದರಿಂದ ಕುತ್ತಿಗೆ ಮತ್ತು ದೇಹದ ಮಾಂಸಖಂಡಗಳು ಹಾನಿಗೊಳಗಾಗುತ್ತವೆ. ಹಾಗಾಗಿ ಹೆಚ್ಚು ಸಮಯ ಅವುಗಳನ್ನು ಬಳಸಬಾರದು.

Advertisement

ಫಿಸಿಯೋಥೆರಪಿ ಅಥವಾ ನೋವು ನಿವಾರಕಗಳು ಸ್ವಾಭಾವಿಕವಾಗಿ ವಾಸಿಯಾಗುವುದಕ್ಕೆ ಪೂರಕವಾಗಬಲ್ಲವು. ತೀವ್ರ ನೋವಿದ್ದಾಗ ಮಾತ್ರ ನೋವು ನಿವಾರಕ ಮಾತ್ರೆಗಳನ್ನು ಸೇವಿಸಬಹುದು.

2 ವರ್ಷಕ್ಕಿಂತ ಹೆಚ್ಚು ಸಮಯ ಕುತ್ತಿಗೆ ಮತ್ತು ಬೆನ್ನು ನೋವು ಇರುವ ರೋಗಿಗಳಲ್ಲಿ ಶೇಕಡ 80ಕ್ಕಿಂತ ಹೆಚ್ಚಿನ ರೋಗಿಗಳು ಖನ್ನತೆಗೊಳಗಾಗಿದ್ದಾರೆ. ಖನ್ನತೆಯನ್ನು  ನಿವಾರಿಸುವ ಮಾತ್ರೆಗಳಿಂದ ಇವರಿಗೆ ಪ್ರಯೋಜನವಾಗಿದೆ. ಮಾನಸಿಕ ಖನ್ನತೆ ನೋವಿನ ಮೂಲ ಆಗಬಲ್ಲದು ಅನ್ನುವುದಕ್ಕೆ ಇದು ನಿದರ್ಶನ.

ಧೂಮಪಾನ ಮಾಡುವುದರಿಂದ ಕುತ್ತಿಗೆ ಮತ್ತು ಬೆನ್ನು ನೋವು ಬಂದೇ ಬರುತ್ತದೆ. ಕಾರಣ ಅದರಿಂದ ಡಿಸ್ಕ್ ಹಾನಿಯಾಗುತ್ತದೆ ಮತ್ತು ಅದನ್ನು ತೀವ್ರಗೊಳಿಸುತ್ತದೆ. ಹಾಗಾಗಿ, ಧೂಮಪಾನವನ್ನು ಬಿಟ್ಟು ಬಿಡಿ. ಅತಿಯಾದ ತೂಕ ಹೊಂದಿದ್ದರೆ ಬೆನ್ನಿಗೆ ಹೆಚ್ಚು ಒತ್ತಡ ಬಿದ್ದು. ಬೆನ್ನುನೋವು ಶುರುವಾಗುತ್ತದೆ.

ಎಂಆರ್‌ಐ (MRI)
2005ರಲ್ಲಿ ಯಜೀನ್‌ ಕ್ಯಾರಾಜ್ಜೀಯವರು (ಸ್ಟಾನ್‌ ಫೋರ್ಡ್‌ ಯೂನಿವರ್ಸಿಟಿ, ಯು ಎಸ್‌ ಎ) ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್ ಮೆಡಿಸಿನ್‌ನಲ್ಲಿ  ಪುಟ ಸಂಖ್ಯೆ 352 ಮತ್ತು 1891-98ರಲ್ಲಿ ಪ್ರಕಟಿಸಿದ ವಿಷಯ ಹೀಗಿದೆ. ಹಿಂದೆ ಯಾವತ್ತಿಗೂ ಬೆನ್ನು ನೋವೇ ಇರದಿದ್ದ 20-40ರ ವಯಸ್ಸಿನ ಸಾವಿರಾರು ಜನರು ಮಾಡಿಸಿದ ಎಂಆರ್‌ಐ ಸ್ಟಾನಿಂಗ್‌ಗಳನ್ನು ಇವರು ಗಮನಿಸಿದಾಗ ಕಂಡುಕೊಂಡಿದ್ದೇನೆಂದರೆ, ಸ್ಲಿಪ್‌ ಡಿಸ್ಕ್ (55%), ಡಿಸ್ಕ್ ಡಿಜನರೇಷನ್‌(60%), ಆನ್ಯುಲರ್‌ ಟೇರ್ಸ್‌ (30%) ಮತ್ತು ಹೈ ಇಂಟೆನ್ಸಿಟಿ ಝೋನ್‌ (25%) ಸಮಸ್ಯೆಗಳು ಸುಮಾರು 80% ಜನರಲ್ಲಿತ್ತು.

ಎಂಆರ್‌ಐ ಅತಿ ಸೂಕ್ಷ್ಮವಾದ ಮತ್ತು ಅನಿರ್ದಿಷ್ಟವಾದ ಉಪಕರಣವಾಗಿದೆ. ವೈದ್ಯರು ಮತ್ತು ರೋಗಿಗಳು ಇಬ್ಬರೂ ಇದೇ ಅನಿವಾರ್ಯವೆಂದು ಭಾವಿಸುತ್ತಾರೆ. ಎಂಆರ್‌ಐ ರಿಪೋರ್ಟ್‌ಗಳಲ್ಲಿ ಕೆಲವೊಮ್ಮೆ ತುಂಬ ಸಮಸ್ಯೆಗಳಿವೆಯೇನೋ ಎಂಬಂತೆ ಇರುತ್ತವೆ. ಎಂಆರ್‌ಐನಲ್ಲಿ ಕಂಡು ಬರುವ ಅಂಶಗಳು ಸರ್ಜರಿ ಮಾಡಿಸಲೇಬೇಕೆಂದು ಸೂಚಿಸುವಂಥ ಅಂಶಗಳೇನಲ್ಲ. ರೋಗಿಗಳಿಗೆ ಚಿಕಿತ್ಸೆ ಕೊಡಬೇಕೇ ಹೊರತು ಎಂಆರ್‌ಐ ರಿಪೋರ್ಟ್‌ಗೆ ಅಲ್ಲ. ರೋಗಿಗೆ ಶಸ್ತ್ರಚಿಕಿತ್ಸೆ ಮಾಡಲೇಬೇಕಾದ ಸಂದರ್ಭದಲ್ಲಿ ನಿರ್ದಿಷ್ಟವಾಗಿ ಎಲ್ಲಿ ಶಸ್ತ್ರಚಿಕಿತ್ಸೆ ಮಾಡಬೇಕೆಂದು ತಿಳಿದುಕೊಳ್ಳಲು ಎಂಆರ್‌ಐ ರಿಪೋರ್ಟ್‌ ಸಹಾಯ ಮಾಡುತ್ತದೆ ಅನ್ನುವುದರಲ್ಲಿ ಎರಡು ಮಾತಿಲ್ಲ.

ಮಾಡಬೇಕಾದ ಮತ್ತು 
ಮಾಡಬಾರದ ವಿಷಯಗಳು

ನಿಮಗೆ ನೋವಿದ್ದಾಗ, ಸ್ವಲ್ಪ ಮಟ್ಟಿಗಿನ ವಿಶ್ರಾಂತಿ ಸಾಕು (ನಿಮ್ಮ ದೇಹದ ಬಗ್ಗೆ ಬೇರೆಯವರಿಗಿಂತ ನಿಮಗೇ ಚೆನ್ನಾಗಿ ಗೊತ್ತಿರುತ್ತದೆ) ಮತ್ತು ಚಟುವಟಿಕೆಯುಕ್ತರಾಗಿರಿ. ತಾನಾಗಿಯೇ ವಾಸಿಯಾಗುವವರೆಗೂ ನಿಮ್ಮ ನೋವನ್ನು ಹೆಚ್ಚಿಸುವಂಥ ಯಾವುದೇ ಕೆಲಸಗಳನ್ನು ಮಾಡಬೇಡಿ.

ಶಸ್ತ್ರಚಿಕಿತ್ಸೆ ಅಥವಾ ಎಂಆರ್‌ಐಯನ್ನು 
ಯಾವಾಗ ಮಾಡಿಸಬೇಕಾಗುತ್ತದೆ?

(ಎಂಆರ್‌ಐ ಮತ್ತು ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದು ತೋರಿಸುವ ಸೂಚನೆಗಳು ಒಂದೇ ರೀತಿಯಿರುತ್ತವೆ)
1. ಖಚಿತವಾದ ಸೂಚನೆಗಳಿದ್ದಲ್ಲಿ   ಆದಷ್ಟು ಬೇಗ ವೈದ್ಯರಿಗೆ ತೋರಿಸಬೇಕು. ಎಷ್ಟು ತಡ ಮಾಡುತ್ತೀರೋ ಅಷ್ಟು ಹೆಚ್ಚು ನರಕೋಶಗಳು ಹಾನಿಗೊಳಗಾಗುತ್ತವೆ.
-ಅಂಗಗಳು ಸಂಪೂರ್ಣವಾಗಿ ಬಲಹೀನವಾಗುತ್ತವೆ.
-ಮೂತ್ರ ಮಲ ವಿಸರ್ಜನೆಯನ್ನು ನಿಯಂತ್ರಣದಲ್ಲಿಡಲು ಕಷ್ಟವಾಗುತ್ತದೆ.
2. ಖಚಿತವಿರದ ಸೂಚನೆಗಳಿದ್ದಲ್ಲಿ ನೋವಿದೆ ಅನ್ನುವ ಒಂದೇ ಕಾರಣಕ್ಕೆ ಶಸ್ತ್ರ ಚಿಕಿತ್ಸೆಯ ಅಗತ್ಯ ಇಲ್ಲ.
-ಮೂರು ತಿಂಗಳ ಸಮಯದೊಳಗೆ ನೋವು ಕ್ರಮೇಣವಾಗಿ ಕಡಿಮೆಯಾಗುತ್ತದೆ. (ಆದರೆ ಆ ವ್ಯಕ್ತಿಯಲ್ಲಿ ನೋವು ಕಡಿಮೆಯಾಗುತ್ತದೆ ಎಂಬ ನಿರೀಕ್ಷೆ ಮತ್ತು ಅದಕ್ಕೆ ತಕ್ಕಂತೆ ತಡೆದುಕೊಳ್ಳುವ ಸಾಮರ್ಥ್ಯವಿರಬೇಕು) ಇಲ್ಲಿ ಮಾನಸಿಕ ದೃಢತೆಯ ಪಾತ್ರ ಹಿರಿದಾಗಿದೆ.

ಮುಂದಿನ  ವಾರಕ್ಕೆ

ಡಾ| ವಿದ್ಯಾಧರ ಎಸ್‌.,   
ವಿಭಾಗ ಮುಖ್ಯಸ್ಥರು ಮತ್ತು ಬೆನ್ನುಹುರಿಯ ಶಸ್ತ್ರಚಿಕಿತ್ಸಾ ತಜ್ಞರು,
ಮಣಿಪಾಲ್‌ ಸ್ಪೈನ್‌ ಕೇರ್‌ ಸೆಂಟರ್‌,
ಮಣಿಪಾಲ್‌ ಆಸ್ಪತ್ರೆ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next