ಬೀಳಗಿ: ತಾಂಡಾಗಳಲ್ಲಿ ವಾಸಿಸುವ ಲಂಬಾನಿ ಜನಾಂಗ ನಿತ್ಯಕಾಯಕ ಜೀವಿಗಳು ಇತರರ ಏಳಿಗೆಯ ಜತೆಗೆ ತಮ್ಮ ಹಿತ ಕಾಯ್ದುಕೊಳ್ಳುವ ಸ್ವಾಭಿಮಾನಿ ಸಮಾಜದವರುತಮ್ಮ ಬದುಕಿಗಾಗಿ ಸಮಾಜದ ಅಭಿವೃದ್ಧಿಗಾಗಿ ಹೊರರಾಜ್ಯಕ್ಕೆ ದುಡಿಯಲು ಸಾಗುವ ಜನರು ಅಂತಹ ಸಮಾಜದ ತಾಂಡಾಗಳ ಅಭಿವೃದ್ಧಿಗೆ ಸರ್ಕಾರ ಅಗತ್ಯ ತಗೆದುಕೊಂಡಿದೆ ಎಂದು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಪಿ.ರಾಜೀವ ಹೇಳಿದರು.
ಇಲ್ಲಿನ ಸುನಗ ತಾಂಡಾ ನಂ.1 ರಲ್ಲಿ ತಾಂಡಾ ಅಭಿವೃದ್ಧಿ ನಿಗಮದಿಂದ ಹಮ್ಮಿಕೊಂಡಿದ್ದ ಮಂಜೂರಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಹಾಗೂ ಸಂತ ಸೇವಾಲಾಲರ 283ನೇ ಜಯಂತಿ ಉತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ತಾಂಡಾಗಳಲ್ಲಿ ವಾಸಿಸುವ ಜನರು ಪರೋಪಕಾರಿಯಾಗಿ ಇತರರ ಕಾಳಜಿ ಹೊಂದಿದವರು. ಬಂಜಾರ ಸಮಾಜದವರು ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿದ್ದಾರೆ. ಅಂತಹ ಸಮಾಜವನ್ನು ಎಲ್ಲ ರಂಗದಲ್ಲೂ ಮುಂದೆ ಬರುವಂತೆ ಮಾಡುವ ಕೆಲಸವು ಇಂದಿನ ದಿನಗಳಲ್ಲಿ ನಡೆಯುತ್ತಿದೆ. ತಾಂಡಾಗಳ ಅಭಿವೃದ್ಧಿಯಾಗಬೇಕು.
ಆರೋಗ್ಯ, ಶಿಕ್ಷಣ, ನೀರಾವರಿ, ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹಲವಾರು ಯೋಜನೆ ರೂಪಿಸಲಾಗಿದೆ. ಈಗಾಗಲೇ ಬೀಳಗಿ ಮತಕ್ಷೇತ್ರದ ತಾಂಡಾಗಳ ಅಭಿವೃದ್ಧಿ 4 ಕೋಟಿ ರೂ. ಮಂಜೂರು ಮಾಡಲಾಗಿದ್ದು, ತಾಂಡಾಗಳಲ್ಲಿ ಅಗತ್ಯ ಸಮಸ್ಯೆಗಳ ಕೆಲಸಗಳು ಆಗಲಿವೆ ಎಂದರು.ಸಚಿವ ಮುರುಗೇಶ ನಿರಾಣಿ ಅವರು ಬಂಜಾರ ಸಮಾಜದ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸ ನೋಡಿದರೆ ಸಮಾಜ ಅಭಿವೃದ್ಧಿಗೆ ಇವರ ಕೊಡುಗೆ ಅಪಾರವಾಗಿದೆ ಎಂದರು.
ಕಲಬುರ್ಗಿ ಸಂಸದ ಉಮೇಶ ಜಾಧವ ಮಾತನಾಡಿ, ಶತಮಾನಗಳಿಂದ ಯಾವುದೇ ರೀತಿಯ ಅಭಿವೃದ್ಧಿ ಕಾಣದೆ ಸದಾ ಸೇವಕರಂತೆ ಕೆಲಸ ಮಾಡುತ್ತಿದ್ದ ಬಂಜಾರ ಸಮುದಾಯ ಇಂದು ಅಭಿವೃದ್ಧಿ ಮಾರ್ಗದತ್ತ ಸಾಗುತಿದೆ. ದೆಹಲಿಯಲ್ಲಿ ಸಂತ ಸೇವಾಲಾಲರ ಜಯಂತಿ ಆಚರಣೆ ಮಾಡಬೇಕು ಎನ್ನುವ ಕನಸನ್ನು ಪ್ರಧಾನಿ ಮೋದಿಯವರು ಈಡೇರಿಸಿ ದೆಹಲಿಯಲ್ಲಿ ಜಯಂತಿ ಆಚರಣೆ ಮಾಡಲಾಯಿತು.
ದೆಹಲಿಯಲ್ಲಿ ಬಂಜಾರ ಸಮುದಾಯ ಭವನ ನಿರ್ಮಾಣ ಮಾಡುವ ಗುರಿ ಹೊಂದಿದ್ದು, ಈಗಾಗಲೇ ಮಾತುಕತೆ ನಡೆದಿದೆ ಎಂದರು. ಸಚಿವ ಮುರುಗೇಶ ನಿರಾಣಿ ಮಾತನಾಡಿ, ಬಂಜಾರ ಸಮಾಜದ ಅಭಿವೃದ್ಧಿಗಾಗಿ ಈಗಾಗಲೇ ಹಲವಾರು ಯೋಜನೆ ಮಾಡಲಾಗಿದೆ. ತಾಂಡಾಗಳ ಅಭಿವೃದ್ಧಿಗಾಗಿ ಒಟ್ಟು 8 ಕೋಟಿ ರೂ. ಜತೆಗೆ ಕುಡಿವ ನೀರು, ವಿವಿಧ ಸೌಲಭ್ಯಕ್ಕಾಗಿ 10 ಕೋಟಿ ರೂ. ಮಂಜೂರು ಮಾಡಲಾಗಿದ್ದು, ಕಾಮಗಾರಿಗಳು ಆರಂಭವಾಗಲಿವೆ ಎಂದು ತಿಳಿಸಿದರು.
ನೀಲಾ ನಗರದ ಶಕ್ತಿಪೀಠದ ಕುಮಾರ ಮಹಾರಾಜರು, ಕೇಸರಟ್ಟಿಮಠ ಸೋಮಲಿಂಗ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಪಿ.ಎಚ್. ಪೂಜಾರ, ಹೂವಪ್ಪ ರಾಠೊಡ, ಕಾವೇರಿ ರಾಠೊಡ, ಸಂಗಪ್ಪ ಕಟಗೇರಿ, ಹೊಳೆಬಸು ಬಾಳಾಶೆಟ್ಟಿ, ಜಗತ್ತ ಕಣವಿ, ಈರಣ್ಣ ತೋಟದ ಮುಂತಾದವರು ಉಪಸ್ಥಿತರಿದ್ದರು.