Advertisement

ಮಕ್ಕಳ ಮನ ಅರಳಿಸುವ ಸಾಹಿತ್ಯ ಅಗತ್ಯ: ಚರಂತಿಮಠ

02:46 PM Nov 16, 2021 | Team Udayavani |

ಬಾಗಲಕೋಟೆ: ಪಠ್ಯೇತರ ಚಟುವಟಿಕೆಗಳಿಂದ ವಿಮುಖರಾಗುತ್ತಿರುವ ಮಕ್ಕಳಿಗೆ ಅವರ ಮನ ಅರಳಿಸುವ ಸಾಹಿತ್ಯದ ಅವಶ್ಯಕತೆ ಇದೆ ಎಂದು ಶಾಸಕ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ| ವೀರಣ್ಣ ಚರಂತಿಮಠ ಹೇಳಿದರು.

Advertisement

ನಗರದಲ್ಲಿ ಹಮ್ಮಿಕೊಂಡಿದ್ದ 2020-21 ನೇ ಸಾಲಿನ ಸಂಧ್ಯಾ ಮಕ್ಕಳ ಸಾಹಿತ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಸಾಹಿತ್ಯದ ಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಂಡಿರುವ ಸಂಧ್ಯಾ ಸಾಹಿತ್ಯದ ಕಾರ್ಯ ಅಭಿನಂದನೀಯ ಎಂದರು.

ಧಾರವಾಡ ಆಕಾಶವಾಣಿ ಕೇಂದ್ರದ ನಿರ್ದೇಶಕ ಡಾ| ಬಸು ಬೇವಿನಮರದ ಮಾತನಾಡಿ, ಮಕ್ಕಳು ಸಸಿಗಳಿದ್ದಂತೆ. ಅವರನ್ನು ಒಳ್ಳೆಯ ಫಲ ಕೊಡುವ ಮರಗಳನ್ನಾಗಿ ಬೆಳೆಸಬೇಕು. ಸರಸ್ವತಿ ಎನ್ನುವಳು ದೊಡ್ಡವಳು. ಜಾಣತನ ಎನ್ನುವುದು ಒಬ್ಬರ ಗುತ್ತಿಗೆಯಲ್ಲ. ಅದನ್ನು ಶ್ರಮದಿಂದ ಪಡೆಯಬೇಕು.

ಮಾತನ್ನು ಜ್ಯೋತಿಯಾಗಿಸಬೇಕು. ಮಕ್ಕಳಿಗೆ ರುಚಿ ಹಚ್ಚಿಸುವ ಸಾಹಿತ್ಯ ರಚನೆಯಾಗಬೇಕು. ರಾಜಶೇಖರ ಕುಕ್ಕುಂದಾ ಅವರ “ಸೋನ ಪಾಪಡಿ’ ಮತ್ತು ವಿನಾಯಕ ಕಮತದ ಅವರ ಅಜ್ಜಿ ಅಂದ್ರ ಹೆಂಗಿರ್ತಾಳ ಈ ಎರಡೂ ಕೃತಿಗಳು ಇದರಲ್ಲಿ ಯಶಸ್ವಿಯಾಗಿವೆ ಎಂದು ಹೇಳಿದರು. ಎರಡೂ ಕೃತಿಗಳನ್ನು ಬಿವಿವಿ ಸಂಘದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಗುರುಬಸವ ಸೂಳಿಭಾವಿ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಉಡುಪಿಯ ಬಾಲ ಲೇಖಕಿ ಸುರಭಿ ಕೊಡವೂರು ಮತ್ತು ಶಿಗ್ಗಾಂವಿಯ ಬಾಲ ಲೇಖಕ ಮಣಿಕಂಠ ಗೊದಮನಿ ಅವರಿಗೆ ವಿದ್ಯಾಸಾಗರ ಬಾಲ ಪುರಸ್ಕಾರ ಪ್ರದಾನ ಮಾಡಲಾಯಿತು.

ಉಡುಪಿಯ ಮಾನಸಿ ಸುಧೀರ ಅವರ ಕಥಾಕಥನ ಕಾರ್ಯಕ್ರಮ, ಸೌಜನ್ಯ ಕೃಷ್ಣ ಮೊಹರೆ ಅವರ ನೃತ್ಯರೂಪಕ ಮತ್ತು ಡಾ| ರೇವಣಸಿದ್ದೇಶ ಬೆಣ್ಣೂರ ಅವರ ಸಂಗೀತ ಸಂಯೋಜನೆಯ ಕಾರ್ಯಕ್ರಮ, ಕಾವ್ಯ ಸಮಯ ಎಲ್ಲರ ಮನ ಸೆಳೆಯಿತು. ಮಂಡಲಗಿರಿ ಪ್ರಸನ್ನ ನಿರೂಪಿಸಿದರು. ರಾಜಶೇಖರ ಕುಕ್ಕುಂದಾ ಪ್ರಾಸ್ತಾವಿಕ ಮಾತನಾಡಿದರು.

Advertisement

ಡಾ| ವಿನಾಯಕ ಕಮತದ ಕಾವ್ಯ ಸಮಯ ಕಾರ್ಯಕ್ರಮ ನಿರೂಪಿಸಿದರು. ರವಿ ಹಿರೇಮಠ ವಂದಿಸಿದರು. ಎಸ್‌. ಎನ್‌. ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಅಶೋಕ ಸಜ್ಜನ (ಬೇವೂರ) ಅವರು ಮತ್ತು ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ವಿಜಯಕುಮಾರ ಕಟಗಿಹಳ್ಳಿಮಠ ಉಪಸ್ಥಿತರಿದ್ದರು .

Advertisement

Udayavani is now on Telegram. Click here to join our channel and stay updated with the latest news.

Next