Advertisement

ನೆಮ್ಮದಿಯ ಬದುಕಿಗಾಗಿ ಬೇಕು: ಪಾಶ್ಚಾತ್ಯ-ಭಾರತೀಯ ತತ್ತ್ವಜ್ಞಾನದ ಅರಿವು

08:06 AM Jun 09, 2023 | Team Udayavani |

ಆರಂಭದ ಬದುಕಿನಲ್ಲಿ ಏನೆಲ್ಲ ಗಳಿಸುತ್ತಾ ಸಾಗಿ ಮುಂದೆ ಎಲ್ಲವೂ “ಶೂನ್ಯ’ ಮತ್ತು “ಬಂಧನಗಳಿಂದ ಬಿಡುಗಡೆ’ ಬೇಕೆಂಬ ಅನಿಸಿಕೆ ಉಂಟಾಗುವುದು ಬಹಳಷ್ಟು ಎಡ ವಟ್ಟುಗಳು ಆದ ಮೇಲೆಯೇ ಮತ್ತು ಪೆಟ್ಟುಗಳನ್ನು ತಿಂದ ಮೇಲೆಯೇ ಎಂದು ಅನುಭವಿಗಳು ಹೇಳುತ್ತಲೇ ಬಂದಿದ್ದಾರೆ.

Advertisement

ಬದುಕಿನ ಆರಂಭದಲ್ಲಿಯೇ ಅಧ್ಯಾತ್ಮ ಮತ್ತು ತತ್ತ್ವಜ್ಞಾನವನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನದ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ ಎಂದೂ ಕೇಳಿದ್ದೇವೆ. ಆದರೆ ಅಧ್ಯಾತ್ಮವನ್ನು ಅವಲಂಬಿಸುವುದರ ಬದಲಾಗಿ ತಿರಸ್ಕರಿಸುವವರ ಸಂಖ್ಯೆ ಬಹು ದೊಡ್ಡದು.

ಭಾರತೀಯ ಮತ್ತು ಪಾಶ್ಚಾತ್ಯ ತತ್ತ್ವಶಾಸ್ತ್ರ ಶಾಖೆ ಗಳೆರೆಡೂ ಮನುಕುಲದ ಉನ್ನತಿಗಾಗಿನ ಆಶಯಗಳನ್ನೇ ಹೊಂದಿವೆ. ವೈಜ್ಞಾನಿಕ, ತಾರ್ಕಿಕ ಮತ್ತು ಮುಕ್ತ ಚಿಂತನೆಗಳ ತಳಹದಿಯ ಮೇಲೆ ರೂಪುಗೊಂಡ ಪಾಶ್ಚಾತ್ಯ ತತ್ತ್ವಶಾಸ್ತ್ರ ಮತ್ತು ಕೈವಲ್ಯ ಅಥವಾ ಮುಕ್ತಿ ಮಾರ್ಗ ತೋರುವ ಭಾರತೀಯ ತತ್ತ್ವಶಾಸ್ತ್ರ ಎರಡನ್ನೂ ನಾವು ಸಕಾರಾತ್ಮಕವಾಗಿ ಸ್ವೀಕರಿಸುವುದು ಪ್ರಸ್ತುತ ದಿನಗಳಲ್ಲಿ ಅತ್ಯಗತ್ಯ ಎನ್ನುತ್ತಾರೆ ಭಾರತವು ಕಂಡ ಒಬ್ಬ ಶ್ರೇಷ್ಠ ತತ್ತ್ವಶಾಸ್ತ್ರಜ್ಞ ಎಸ್‌. ರಾಧಾಕೃಷ್ಣನ್‌.

ಗ್ರೀಕ್‌ ತತ್ತ್ವಜ್ಞಾನಿಗಳಿಂದ ಆರಂಭಗೊಂಡ ತಾತ್ವಿಕ ಜಿಜ್ಞಾಸೆಗಳು ಮತ್ತು ತತ್ತ್ವಜ್ಞಾನ ಅಧ್ಯಯನಗಳು ರೋಮನ್‌, ಈಜಿಪ್ಟಿಯನ್‌, ಬ್ರಿಟಿಷ್‌, ಅಮೆರಿಕನ್‌ ಮುಂತಾದ ಜಗತ್ತಿನ ಎಲ್ಲ ಪಾಶ್ಚಾತ್ಯ ಸತ್ಯಾನ್ವೇಷಣೆಗಳ ಮೇಲೆ ಪ್ರಭಾವ ಬೀರಿವೆ. ಪಾಶ್ಚಾತ್ಯ ತತ್ತ್ವಜ್ಞಾನವು ಅತಿಯಾದ ವೈಜ್ಞಾನಿಕ ಮತ್ತು ತಾರ್ಕಿಕ ಸ್ವರೂಪವನ್ನು ಹೊಂದಿದ್ದು, ಭಾರತೀಯ ತತ್ತ್ವಜ್ಞಾನದ ಪರಂಪರೆಯ ಹಾಗೆ ಆಕರ್ಷಕವೆನಿಸುವುದಿಲ್ಲ. ಜ್ಞಾನಕ್ಕಾಗಿ ದೇವರು- ದೈವಜ್ಞಾನಕ್ಕಿಂತ ವಿಜ್ಞಾನದ ತಳಹದಿ ಮಾತ್ರ ಸರಿಯಾದುದೆಂದು ಅವರ ನಂಬಿಕೆ. ಸರಿಯಾದ ಜ್ಞಾನವೆಂದು ಇದ್ದರೆ, ಆ ಜ್ಞಾನ ಯಾವುದು? ಅದನ್ನು ವೈಜ್ಞಾನಿಕವಾಗಿ ಪರಿಶೀಲಿಸಲಾಗಿದೆಯೇ? ಮತ್ತು ಕಾರ್ಯ-ಕಾರಣ ಸಂಬಂಧಗಳಿಗೆ ಕಣ್ಣಿಗೆ ಕಾಣದ ಆ ಅಂಶ ಯಾವುದೆಂದು ಪಾಶ್ಚಾತ್ಯ ತತ್ತ್ವಜ್ಞಾನವು ಹುಡುಕಲು ಪ್ರೇರೇಪಿಸುತ್ತದೆ.

ಪ್ಲೇಟೋ ತನ್ನ “ರಿಪಬ್ಲಿಕ್‌’ ಪುಸ್ತಕದಲ್ಲಿ ಸತ್ಯವೆಂದರೇನು ಎಂದು ತಿಳಿಸುವ ಪ್ರಯತ್ನ ಮಾಡಿದ್ದು ತುಂಬಾ ಮನೋಜ್ಞವಾಗಿದೆ. ಗುಹೆಯೊಂದರಲ್ಲಿ ಕೆಲವರನ್ನು ಬಲವಂತದಿಂದ ಕೂಡಿಹಾಕಿ ಅವರನ್ನು ಅತ್ತಿತ್ತ ಸರಿಯದಂತೆ ಕಟ್ಟಿಹಾಕಿ, ಗುಹೆಯ ದ್ವಾರದ ವಿರುದ್ಧದ ಗೋಡೆಯೊಂದನ್ನೇ ಅವರು ನೋಡುತ್ತಿರುವಂತೆ ಮಾಡಿ, ಆ ಗುಹೆಯ ಮುಂದೆ ಬೆಳಕಿನಲ್ಲಿ ಓಡಾಡುವ ವ್ಯಕ್ತಿಗಳು, ಪ್ರಾಣಿಗಳು ಮತ್ತು ಚಲಿಸುತ್ತಿರುವ ವಸ್ತುಗಳ ನೆರಳು ಗೋಡೆಯ ಮೇಲೆ ಬಿದ್ದಾಗ ಅವೇನೆಂದು ಕೇಳಲಾಗಿ, ಒಬ್ಬೊಬ್ಬನೂ ಒಂದೊಂದು ವಿಭಿನ್ನ ಉತ್ತರ ಕೊಡುತ್ತಾನೆ. ಅವರಲ್ಲಿ ಒಬ್ಬನು ಗುಹೆಯಿಂದ ತಪ್ಪಿಸಿಕೊಂಡು ಹೊರಹೋಗಿ ನೋಡಿದ ಸತ್ಯವೇ ಬೇರೆಯಾಗಿತ್ತು. ಇದನ್ನೇ ಪ್ಲೇಟೋ ನಮ್ಮ ಕಣ್ಣುಗಳು ನೋಡಿದ್ದು ಮಾತ್ರವೇ ಸತ್ಯ ಎಂದು ಪ್ರತಿಪಾದಿಸುತ್ತಾನೆ.

Advertisement

ತತ್ತ್ವಜ್ಞಾನಿಗಳ ಪ್ರಕಾರ ಮನುಷ್ಯನು ಎರಡು ವಿಭಿನ್ನ ಪ್ರಪಂಚಗಳಲ್ಲಿ ವಾಸಿಸುತ್ತಾನೆ, ಒಂದು ಬಾಹ್ಯ ಜಗತ್ತು, ಮತ್ತೂಂದು ನಮ್ಮ ಆಂತರಿಕ ಜಗತ್ತು. ಮುಖ್ಯವಾಗಿ ಈ ಆಂತರಿಕ ಜಗತ್ತು ನಾವು ಇದುವರೆಗೆ ಪ್ರತಿನಿಧಿಸಿದ ಚಿಂತನೆಗಳು, ಮತ್ತು ಈ ಕ್ಷಣದಿಂದ ಮುಂದಿನ ದಿನಗಳಿಗಾಗಿ ಮಾಡುವ ಸಂಕಲ್ಪ, ಈ ಎರಡು ಅಂಶಗಳಿಂದ ಜಗತ್ತು ಮುನ್ನಡೆಯುತ್ತಿದೆ ಎನ್ನುತ್ತಾರೆ ಜರ್ಮನಿಯ ಖ್ಯಾತ ತತ್ತ್ವಶಾಸ್ತ್ರಜ್ಞ ಆರ್ಥರ್‌ ಶೋಪೆನಾರ್‌. ಇವೆರೆಡರ ಮಧ್ಯೆ ಸಿಲುಕಿ ಮನುಷ್ಯನು ದುಃಖ, ನೋವು, ಮತ್ತವುಗಳಿಂದ ಪಲಾಯನಗೈಯಲು ಮತ್ತೆ ಮತ್ತೆ ಪ್ರಯತ್ನಗಳನ್ನು ನಡೆಸುತ್ತಲೇ ಇರುತ್ತಾನೆ. ಶೋಪೆನಾರ್‌ ಹೇಳುವಂತೆ ಇದರಿಂದ ಮುಕ್ತಿ ಪಡೆಯಲು ಇರುವ ದಾರಿ ಎಂದರೆ ತಾತ್ವಿಕವಾಗಿ ಆ ದುರಾಸೆಗಳನ್ನು ಸ್ವಯಂ ನಿಯಂತ್ರಣಗೊಳಿಸುವುದು, ಇತರರಿಗೆ ಸಹಾನುಭೂತಿಯನ್ನು ವ್ಯಕ್ತಪಡಿಸುವುದು, ಎಲ್ಲ ಕೆಲಸಗಳನ್ನು ಸರಿಯಾದ ಮನಃಸ್ಥಿತಿಯಿಂದ ನಿರ್ವಹಿಸುವುದು ಎನ್ನುತ್ತಾರೆ.

ಕೌರ್ಯದ ಬಗೆಗಿನ ವೈಜ್ಞಾನಿಕ ವಿವರಣೆ
ಪ್ರಖ್ಯಾತ ರಾಜಕೀಯ ತತ್ತ್ವಜ್ಞಾನಿ ಥಾಮಸ್‌ ಹೋಬ್ಸ್ 1660ರಲ್ಲಿ ಹೇಳಿದ ಮಾತು, “ನಮ್ಮ ಸುಪ್ತಮನದಲ್ಲಿ ಹುದುಗಿರುವ ಮೂಲ ಆಸೆಗಳು ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲು ಪ್ರೇರೇಪಿಸುತ್ತವೆ’ ಈ ಮಾತು ಅಕ್ಷರಶಃ ನಿಜವೆನಿಸುತ್ತದೆ. ಮನುಷ್ಯನು ತನ್ನ ಆಸೆಗಳನ್ನು ತೃಪ್ತಿಪಡಿಸಲು ಕ್ರೌರ್ಯದ ಮೂಲಕವಾದರೂ ಸರಿ ಮುಂದಾಗುತ್ತಾನೆ, ಇತರರಿಗೆ ತನ್ನ ಕ್ರೌರ್ಯ ಮತ್ತು ವಂಚನೆ ಅದೆಷ್ಟು ಪರಿಣಾಮ ಉಂಟುಮಾಡುತ್ತದೆ ಎಂದು ಯೋಚಿಸುವುದಿಲ್ಲ.

ಉದಾಹರಣೆಗೆ ಕಷ್ಟ ಹೇಳಿಕೊಳ್ಳಲು ಬಂದವರ ಕೆನ್ನೆಗೆ ಬಾರಿಸುವ, ಬೂಟುಗಾಲಲ್ಲಿ ಒದೆಯುವ, ಪರಿಹಾರ ಇಲ್ಲವೇ ನ್ಯಾಯವನ್ನು ಕೋರಿ ತಂದ ಅರ್ಜಿಗಳನ್ನೇ ಹರಿದೆಸೆಯುವ ರಾಜಕೀಯ ನಾಯಕರ ದರ್ಪದ ಕುರಿತಾಗಿ ಮಾಧ್ಯಮಗಳಲ್ಲಿ ಓದುತ್ತೇವೆ. ಇಂತಹ ಸಂಗತಿಗಳನ್ನು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕಂಡೇ ಥಾಮಸ್‌ ಹೋಬ್ಸ್, ತಾನು ಬರೆದ ಶ್ರೇಷ್ಠ ಗ್ರಂಥ “ಲೇವಿಯಥಾನ್‌’ನಲ್ಲಿ ಮನುಷ್ಯನ ಮೂಲ ಪ್ರಾಣಿಗುಣವನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ.

ಮತ್ತೂಬ್ಬ ತತ್ತ್ವಜ್ಞಾನಿ ರೂಸೋ, ಥಾಮಸ್‌ ಹೋಬ್ಸ್ರ ವಿಚಾರಗಳಿಗೆ ವಿರುದ್ಧವಾಗಿ ಹೀಗೆನ್ನುತ್ತಾರೆ: “ಮನುಷ್ಯರು ಹುಟ್ಟುವಾಗಲೇ ಒಳ್ಳೆಯ ಮತ್ತು ಮುಗ್ಧ ಮನಸ್ಸಿನೊಂದಿಗೆ ಹುಟ್ಟಿರುತ್ತಾರೆ, ಆದರೆ ಕುಲಗೆಟ್ಟ ಈ ಸಮಾಜವು ಅಂತಹ ಒಳ್ಳೆಯ-ಮುಗ್ಧ ಮನಸ್ಸಿಗೆ ವಿಷವನ್ನು ಬೆರೆಸಿಬಿಡುತ್ತದೆ’.

ಅರಿಸ್ಟಾಟಲ್‌ ಹೇಳುವಂತೆ ಮನುಷ್ಯನು ಸರಿಯಾದ ಅಥವಾ ಸತ್ಯವೆನಿಸುವ ಕೆಲಸಗಳನ್ನು ಮಾಡಲು ವಿಫ‌ಲನಾಗುತ್ತಾನೆ, ಅದಕ್ಕೆ ಕಾರಣಗಳು ಎರಡು. ಒಂದು, ಸತ್ಕಾರ್ಯ ಮಾಡಲು ಮನಸ್ಸಿಲ್ಲದಿರುವುದು, ಇನ್ನೊಂದು ಮೊಮೆಂಟರಿ ವೀಕ್‌ನೆಸ್‌ ಅಥವಾ ಆ ಕ್ಷಣದಲ್ಲಾಗುವ ಮಾನಸಿಕ ದುರ್ಬಲತೆ. ಈ ನ್ಯೂನತೆಯನ್ನು ಸರಿಪಡಿಸಿಕೊಳ್ಳಬೇಕೆಂದರೆ ಬದುಕಿನುದ್ದಕ್ಕೂ, ಸದಾ ಸಕಾರಾತ್ಮಕವಾಗಿಯೇ ಚಿಂತಿಸುವುದು ಮತ್ತು ಸತ್ಕಾರ್ಯಗಳನ್ನು ನಡೆಸುವತ್ತ ಮನಸ್ಸನ್ನು ಸ್ಥಿರವಾಗಿರಿಸುವುದು. ಇಂತಹ ಒಂದು ಪ್ರಾಯೋಗಿಕ ಪ್ರಯತ್ನದಲ್ಲಿ ಮನುಷ್ಯ ಒಳ್ಳೆಯ ಜೀವನವನ್ನು ನಡೆಸಬಹುದು.

ತತ್ತ್ವಜ್ಞಾನಿ ಆಗಸ್ಟಿನ್‌ ಹಿಪ್ಪೋ ಹೇಳುವುದೇನೆಂದರೆ ಒಬ್ಬ ವ್ಯಕ್ತಿ ಪಾಪದ, ಅತ್ಯಂತ ಹೇಯ ಜೀವನವನ್ನು ನಡೆಸುತ್ತಿದ್ದಾನೆ ಎಂದಿಟ್ಟುಕೊಳ್ಳಿ, ಆತ ಪುನಃ ಸರಿ-ತಪ್ಪು, ಪಾಪ-ಪುಣ್ಯಗಳ ವಿಮರ್ಶೆಯಲ್ಲಿ ತೊಡಗದೆ, ತನಗೆ ಸರಿ ಎನ್ನಿಸುವ ಒಂದು ಧಾರ್ಮಿಕ ಗ್ರಂಥ ವನ್ನು ಅತ್ಯಂತ ನಿಷ್ಠೆಯಿಂದ ಅಧ್ಯಯನ ಮಾಡುತ್ತಾ ಹೋದಂತೆ, ಆತನಿಗೆ ಒಂದು ಒಳ್ಳೆಯ ಅನುಭವ-ಅನುಭೂತಿ ಉಂಟಾಗಿ ಬದುಕಿನ ಹೊಸ ಸಾಕ್ಷಾತ್ಕಾರವನ್ನೇ ಕಂಡುಕೊಳ್ಳುತ್ತಾನೆ.

ಚಿಂತಕ ಆಲ್ಬರ್ಟ್‌ ಕಮೂ, ಈ ಜಗತ್ತು ಯಾವುದೇ ಅರ್ಥವಿಲ್ಲದ್ದು, ದೇವರು ಎಂಬವನೇ ಇಲ್ಲ, ಎಲ್ಲ ಆಗು-ಹೋಗುಗಳಿಗೆ ನಾವೇ ಹೊಣೆ. ವ್ಯಕ್ತಿಯು ಎಂತಹ ಕಠಿನ ಪರಿಸ್ಥಿತಿಯಲ್ಲೂ “ಸತ್ಯ” ದಿಂದ ದೂರ ಹೋಗಲೇಬಾರದು ಮತ್ತು ಬೇರೊಬ್ಬನ ಪ್ರಚೋದನೆಗೆ ಒಳಗಾಗಲೇ ಬಾರದು ಮತ್ತು ಈ ಜಗತ್ತು ಹೇಗೆ ನಿಷ್ಠುರವೋ, ಹಾಗೆಯೇ ನಮ್ಮ ವ್ಯಕ್ತಿಗತ ಮೌಲ್ಯಗಳನ್ನು ನಿಷ್ಠುರವಾಗಿಯೇ ಉಳಿಸಿಕೊಳ್ಳಬೇಕೆನ್ನುತ್ತಾನೆ. ವೈಜ್ಞಾನಿಕ ತಳಹದಿಯ ಮೇಲೆ ನೆಲೆಯೂರಿರುವ ಪಾಶ್ಚಾತ್ಯ ತತ್ತ್ವಜ್ಞಾನದ ಆಶಯಗಳು ಮತ್ತು ನಮ್ಮ ವೇದ-ಉಪನಿಷತ್ತುಗಳ ಆಧಾರದಲ್ಲಿ ಹೊರಹೊಮ್ಮಿದ ಭಾರತೀಯ ತತ್ತ್ವಜ್ಞಾನವು ನೀಡಿದ ಆಶಯಗಳು ಒಂದಕ್ಕೊಂದು ಪೂರಕವಾಗಿವೆ. ಈ ಎರಡೂ ಜ್ಞಾನ ಶಾಖೆಗಳ ವಿಚಾರಗಳು ನಮ್ಮಲ್ಲಿ ಆಚರಣೆಗೆ ಬಂದರೆ ಬದುಕು ಹಸನಾಗಬಹುದು.

ಡಾ| ಜಿ.ಎಂ. ತುಂಗೇಶ್‌, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next