Advertisement

ಸೂಕ್ಷ್ಮ ಪ್ರದೇಶಗಳ ಜನರನ್ನು ಸ್ಥಳಾಂತರಿಸಲು ಅಗತ್ಯ ಕ್ರಮ: ಜಿಲ್ಲಾಧಿಕಾರಿ

11:40 PM Jun 17, 2019 | Team Udayavani |

ಮಡಿಕೇರಿ: ಜಿಲ್ಲೆಯಲ್ಲಿ ಜೂ.20ರಿಂದ ಸಾಧಾರಣ ಮುಂಗಾರು ಮಳೆ ಅರಂಭವಾಗಲಿದ್ದು, ಈ ಸಂಬಂಧ ಅಧಿಕಾರಿಗಳು ಮುಂದಿನ 2-3 ದಿನಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದರೊಂದಿಗೆ ಜೂ. 19ರಿಂದ ಸಕಲ ಸನ್ನದ್ಧರಾಗಿ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿನ ಜನರನ್ನು ಮಳೆಗಾಲ ಮುಗಿಯುವವರೆಗೆ ಮುಂಜಾಗ್ರತೆ ದೃಷ್ಟಿಯಿಂದ ಪುರ್ನವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳುವಂತೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ತುರ್ತು ಪರಿಹಾರ ಕಾರ್ಯ ಹಾಗೂ ಮುಂಜಾಗ್ರತಾ ಕ್ರಮಗಳ ನೋಡಲ್‌ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ನೈರ್ಸಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಮಾಹಿತಿಯ ಅನ್ವಯ ಜೂ. 20ರಿಂದ ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಭೂ ಸರ್ವೇಕ್ಷಣಾ ಇಲಾಖೆ ಗುರುತಿಸಿರುವ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿನ ಜನರನ್ನು ಮುಂಜಾಗ್ರತ ಕ್ರಮವಾಗಿ ಮಳೆಗಾಲ ಮುಗಿಯುವವರೆಗೆ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಪುನರ್ವಸತಿ ಸಂಬಂಧ ಪ್ರಥಮ ಹಾಗೂ ದ್ವಿತೀಯ ಪಟ್ಟಿಯಲ್ಲಿರುವ ಅರ್ಹ ಫ‌ಲಾನುಭವಿಗಳಿಗೆ ಮುಂದಿನ ಮೂರು ತಿಂಗಳಿಗೆ ಅವಶ್ಯವಿರುವ ಮನೆ ಬಾಡಿಗೆ ಹಣವನ್ನು ಎರಡು ದಿನಗಳಲ್ಲಿ ಪಾವತಿಸಲು ಕ್ರಮ ಕೈಗೊಂಡು ವರದಿ ನೀಡುವಂತೆ ಉಪವಿಭಾಗಧಿಕಾರಿ ಹಾಗೂ ಪುನರ್ವಸತಿ ವಿಶೇಷ ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಕೆ.ಲಕ್ಷ್ಮೀ ಪ್ರಿಯಾ ಅವರು ಮಾತನಾಡಿ, ಈಗಾಗಲೇ 42 ಪುನರ್ವಸತಿ ಕೇಂದ್ರಗಳ ನಿರ್ವಹಣೆಗೆ ಬೇಕಾಗಿರುವ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ನೋಡಲ್‌ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಸೂಕ್ಷ್ಮ ಪ್ರದೇಶದ ಜನರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲು ಹಾಗೂ ಗ್ರಾಮ ಪಂಚಾಯತ್‌ ವ್ಯಾಪ್ತಿಗಳಲ್ಲಿ ತುರ್ತು ಸೇವೆಗಳಿಗೆ ಅವಶ್ಯವಿರುವ ವಾಹನಗಳನ್ನು ಸನ್ನದ್ಧವಾಗಿರಿಸಿಕೊಳ್ಳಲು ಸೂಚನೆ ನೀಡಿದರು.

ಸಾರ್ವಜನಿಕರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತುರ್ತು ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳ ಕುರಿತ ಭಿತ್ತಿ ಪತ್ರಗಳನ್ನು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಅನಾವರಣಗೊಳಿಸಿದರು.
ಉಪ ವಿಭಾಗಾಧಿಕಾರಿ ಹಾಗೂ ಪುನರ್ವಸತಿ ವಿಶೇಷ ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿ.ಪಂ. ಯೋಜನಾ ನಿರ್ದೇಶಕ ಗುಡೂರು ಭೀಮಸೇನ್‌, ಭೂ ದಾಖಲೆಗಳ ಉಪ ನಿರ್ದೇಶಕ ಶ್ರೀನಿವಾಸ್‌, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಶಂಸುದ್ದೀನ್‌, ತಹಶೀಲ್ದಾರರು, ತಾ. ಪಂ. ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

Advertisement

ಪುನರ್ವಸತಿ ಕೇಂದ್ರಈಗಾಗಲೇ ಗುರುತಿಸಿರುವ ಪ್ರಕೃತಿ ವಿಕೋಪ ಸಂಭವಿಸಿದ ಪ್ರದೇಶದಲ್ಲಿನ ಜನರಿಗೆ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತದ ವತಿಯಿಂದ ತೆರೆಯಲಾಗುವ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸುವುದು ಹಾಗೂ ಈ ಪ್ರದೇಶಗಳಲ್ಲಿವಾಸಿಸುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ವಿದ್ಯಾರ್ಥಿ ನಿಲಯಗಳಲ್ಲಿ ವಸತಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅನೀಸ್‌ ಕಣ್ಮಣಿ ಜಾಯ್‌ ಅವರು ನಿರ್ದೇಶನ ನೀಡಿದರು. ಮಳೆಯಿಂದ ಉಂಟಾಗಬಹುದಾದ ಅನಾಹುತಗಳನ್ನು ಸಮರ್ಥವಾಗಿ ತಡೆಯುವ ನಿಟ್ಟಿನಲ್ಲಿ ಅಗತ್ಯವಿರುವ ವಸ್ತುಗಳನ್ನು ದಾಸ್ತಾನು ಮಾಡಿಕೊಳ್ಳು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next