Advertisement

Mangaluru ವೆನ್ಲಾಕ್‌ ನಲ್ಲಿ ಕ್ಯಾಥ್‌ ಲ್ಯಾಬ್‌ ಸ್ಥಾಪನೆಗೆ ಅಗತ್ಯ ಕ್ರಮ: ಡಿಸಿ

12:43 AM Dec 14, 2023 | Team Udayavani |

ಮಂಗಳೂರು: ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಲ್ಲಿ ಹೃದಯ ರೋಗಿಗಳಿಗೆ ಸಂಬಂಧಿಸಿದಂತೆ ಉನ್ನತ ಪರೀಕ್ಷೆ ಮತ್ತು ಚಿಕಿತ್ಸೆ ನೀಡಲು ಕ್ಯಾಥ್‌ಲ್ಯಾಬ್‌ ವ್ಯವಸ್ಥೆಯನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಸೂಚಿಸಿದ್ದಾರೆ.

Advertisement

ಸೋಮವಾರ ವೆನ್ಲಾಕ್‌ ಆಸ್ಪತ್ರೆ ಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವೆನ್ಲಾಕ್‌ ಗೆ ಸಾಕಷ್ಟು ಸಂಖ್ಯೆಯಲ್ಲಿ ಹೃದಯ ಸಂಬಂಧಿ ರೋಗಿಗಳು ಬರುತ್ತಿದ್ದು, ಅವರಿಗೆ ಉನ್ನತ ದರ್ಜೆಯ ಚಿಕಿತ್ಸೆ ಅಗತ್ಯ. ಸ್ಟಂಟ್‌ ಅಳವಡಿಸುವುದು ಸೇರಿದಂತೆ ಪ್ರಮುಖ ಚಿಕಿತ್ಸೆಗಳಿಗೆ ಕ್ಯಾಥ್‌ ಲ್ಯಾಬ್‌ ಅವಶ್ಯವಾಗಿದೆ. ಆಸ್ಪತ್ರೆ ಆವರಣದಲ್ಲಿ ಇದಕ್ಕಾಗಿ ಸ್ಥಳಾವಕಾಶವಿದ್ದು, ಅದಕ್ಕೆ ಸಾಕಷ್ಟು ಮೂಲಸೌಲಭ್ಯ ಅಗತ್ಯವಿದೆ. ಜಿಲ್ಲಾ ಉಸ್ತುವಾರಿ ಸಚಿವರೂ ಕೂಡ ಕ್ಯಾಥ್‌ ಲ್ಯಾಬ್‌ ಸ್ಥಾಪಿಸಲು ಉತ್ಸುಕರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಪ್ರಸ್ತುತ ವೆನ್ಲಾಕ್‌ ನಲ್ಲಿ ಕ್ಲಿನಿಕಲ್‌ ಸೇವೆ ಮಾಡುತ್ತಿರುವ ಕೆಎಂಸಿ ಸಂಸ್ಥೆಗೆ ಕ್ಯಾಥ್‌ಲ್ಯಾಬ್‌ ಸ್ಥಾಪಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಪರಿಶೀಲಿಸುವುದಾಗಿ ಕೆಎಂಸಿ ತಿಳಿಸಿದೆ.

ಹೊಸ ವೈದ್ಯರು ಸೇವೆಗೆ
ಆಸ್ಪತ್ರೆಯ ಸೂಪರ್‌ಸ್ಪೆಷಾಲಿಟಿ ವಿಭಾಗದಲ್ಲಿ ಹೊಸ ವೈದ್ಯರು ಸೇವೆಗೆ ಸೇರ್ಪಡೆಯಾಗಿದ್ದಾರೆ. ನ್ಯೂರೋಸರ್ಜನ್‌, ಕಾರ್ಡಿಯಾಕ್‌ (ಸಿಟಿವಿಎಸ್‌), ಪ್ಲಾಸ್ಟಿಕ್‌ ಸರ್ಜರಿ, ಕ್ಯಾನ್ಸರ್‌ ಸರ್ಜರಿ, ಮೂತ್ರಪಿಂಡ ಸರ್ಜರಿ ಸೇರಿದಂತೆ ಉನ್ನತ ತಜ್ಞ ವೈದ್ಯರು ಸೇವೆಯಲ್ಲಿದ್ದಾರೆ ಎಂದು ವೆನ್ಲಾಕ್‌ ಅಧೀಕ್ಷಕಿ ಡಾ| ಜೆಸಿಂತಾ ತಿಳಿಸಿದರು.

Advertisement

ಸರ್ಜಿಕಲ್‌ ಬ್ಲಾಕ್‌
ಬಳಕೆಗೆ ಸಿದ್ಧಗೊಳಿಸಿ
ವೆನ್ಲಾಕ್‌ನ ಹೊಸ ಸರ್ಜಿಕಲ್‌ ಬ್ಲಾಕ್‌ನ ಸಂಪೂರ್ಣ ಬಳಕೆಗೆ ಅಗತ್ಯವಾಗಿ ಬೇಕಾದ ಎಲ್ಲ ಕಾಮಗಾರಿ ಮತ್ತು ಉಪಕರಣಗಳ ಖರೀದಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಅತಿ ಶೀಘ್ರದಲ್ಲಿ ಬಳಕೆಗೆ ಲಭ್ಯಗೊಳಿಸುವಂತೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹೊಸ ಸರ್ಜಿಕಲ್‌ ಬ್ಲಾಕ್‌ಗೆ ವೈದ್ಯಕೀಯ ಸಲಕರಣೆ ಮತ್ತು ಯಂತ್ರೋಪಕರಣಗಳನ್ನು ಹೊಸದಾಗಿ ಖರೀದಿಸಿ ಅಳವಡಿಸಲು ಆರೋಗ್ಯ ಸಚಿವರು ಸೂಚಿಸಿದ್ದು, ಈ ನಿಟ್ಟಿನಲ್ಲಿ ಸ್ಮಾರ್ಟ್‌ ಸಿಟಿ ವತಿಯಿಂದ 6.97 ಕೋಟಿ ರೂ. ಮತ್ತು ಆರೋಗ್ಯ ರಕ್ಷಾ ಸಮಿತಿಯಿಂದ 2 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಸಭೆ ತೀರ್ಮಾನಿಸಿತು. ಹೊಸ ಬ್ಲಾಕ್‌ಗೆ 5 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ವೈದ್ಯಕೀಯ ಸಲಕರಣೆ ನೀಡುವುದಾಗಿ ಕೆಎಂಸಿ ಪ್ರಮುಖರು ತಿಳಿಸಿದರು.

ಹೊರರೋಗಿ ವಿಭಾಗದ ನಿರ್ವಹಣೆ
ವೆನ್ಲಾಕ್‌ ನ ಹೊರರೋಗಿ ವಿಭಾಗ ಕಟ್ಟಡದ ಸ್ವಚ್ಛತೆ ಸೇರಿದಂತೆ ಸಂಪೂರ್ಣ ನಿರ್ವಹಣೆಯನ್ನು ಮಾಡಲು ಹಾಗೂ ಆಸ್ಪತ್ರೆಯಲ್ಲಿ ನರ್ಸ್‌ಗಳ ಸಂಖ್ಯೆಯನ್ನು ಹಂತ ಹಂತವಾಗಿ ಹೆಚ್ಚಿಸಲು ಕೆಎಂಸಿ ಪ್ರಮುಖರು ಒಪ್ಪಿಗೆ ನೀಡಿದರು. ವೆನ್ಲಾಕ್‌ ಆವರಣದಲ್ಲಿ ಹಾದು ಹೋಗಿರುವ ರೈಲ್ವೆ ಸ್ಟೇಷನ್‌ ರಸ್ತೆಯನ್ನು ಸಂಚಾರಕ್ಕೆ ನಿರ್ಬಂಧಿಸಿ, ಪರ್ಯಾಯ ರಸ್ತೆ ಅಭಿವೃದ್ಧಿಪಡಿಸುವ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳು ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿ.ಪಂ. ಸಿಇಒ ಡಾ| ಆನಂದ್‌ ಕೆ., ಆರೋಗ್ಯ ಇಲಾಖೆ ಅಧಿಕಾರಿ ಡಾ| ರಾಜೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next